ಕುಡಿಯುವ ನೀರಿನ ಸಮಸ್ಯೆ; ಮಳೆಯ ನೀರನ್ನೇ ಕುಡಿದ ನಾಗರಿಕರು, ಸಮಸ್ಯೆ ಪರಿಹರಿಸದಿದ್ದಲ್ಲಿ ಮುತ್ತಿಗೆ: ಡಿವೈಎಪ್ಐ.

ಕರಾವಳಿ

ಉರ್ವಾಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ವಿಪರೀತ ಸಮಸ್ಯೆ ತಲೆದೋರಿದ್ದು,ಈ ಬಗ್ಗೆ ಸ್ಥಳೀಯ ನಾಗರಿಕರು DYFI ನೇತೃತ್ವದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಹಾಗೂ ಆಯುಕ್ತರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು.

ಕಳೆದ ವಾರ ವಿಪರೀತ ಮಳೆ ಸುರಿದಿದ್ದರೂ ಉರ್ವಾಸ್ಟೋರಿನ ಸುಂಕದಕಟ್ಟೆಯ ನಾಗರಿಕರು ಮಾತ್ರ ಮಳೆಯ ನೀರನ್ನೇ ಕುಡಿಯುವ ದುಸ್ಥಿತಿ ಒದಗಿರುವುದು ತೀರಾ ದುಃಖದಾಯಕ ಸಂಗತಿಯಾಗಿದೆ.ಮಾತ್ರವಲ್ಲದೆ ಈ ಪ್ರದೇಶದಲ್ಲಿ ಬಹುತೇಕ ಹಿಂದುಳಿದ ಹಾಗೂ ದಲಿತ ಸಮುದಾಯದ ಕುಟುಂಬಗಳೇ ವಾಸಿಸುತ್ತಿದ್ದು,ಆರ್ಥಿಕವಾಗಿ ತೀರಾ ದುರ್ಬಲರಾಗಿದ್ದು ಹಣ ಕೊಟ್ಟು ಟ್ಯಾಂಕರ್ ನಿಂದ ನೀರು ತರಿಸಿಕೊಳ್ಳುವಲ್ಲಿಯೂ ಸಾಧ್ಯವಿಲ್ಲವಾಗಿದೆ. ಮಾತ್ರವಲ್ಲದೆ ಇಲ್ಲಿನ ನೀರಿನ ಸಮಸ್ಯೆಯನ್ನು ಕಳೆದ 4 ತಿಂಗಳಿಂದ ಜನತೆ ವಿವಿಧ ಸ್ವರೂಪಗಳಲ್ಲಿ ಅನುಭವಿಸುತ್ತಿದ್ದಾರೆ.ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್ ಸೇರಿದಂತೆ ಹಲವು ಜನಪ್ರತಿನಿಧಿಗಳಿಗೆ,ಮನಪಾ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದ್ದರೂ ಯಾವುದೇ ಸ್ಪಂದನ ದೊರೆತಿಲ್ಲ.ಇದರಿಂದ ಆಕ್ರೋಶಗೊಂಡ ಸ್ಥಳೀಯರು ಸಹಿ ಸಂಗ್ರಹ ಮಾಡುವ ಮೂಲಕ ಮನವಿಯನ್ನು ಮನಪಾ ಕಚೇರಿಗೆ ನೀಡಿದರು. ನೀರಿನ ಸಮಸ್ಯೆಯನ್ನು ಕೂಡಲೇ ಪರಿಹರಿಸದಿದ್ದಲ್ಲಿ ನೂರಾರು ಸಂಖ್ಯೆಯಲ್ಲಿ ಮನಪಾ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು DYFI ಎಚ್ಚರಿಕೆ ನೀಡಿದೆ.

ನಿಯೋಗದಲ್ಲಿ DYFI ಮಂಗಳೂರು ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ,ಸಿಪಿಐಎಂ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್,DYFI ನಾಯಕರಾದ ಮನೋಜ್ ಉರ್ವಾಸ್ಟೋರ್, ಪ್ರಶಾಂತ್ ಎಂ. ಬಿ,ಪ್ರದೀಪ್, ಪ್ರಶಾಂತ್ ಆಚಾರ್ಯ,ರಘುವೀರ್, ಸ್ಥಳೀಯರಾದ ಪದ್ಮನಾಭ ಕುಲಾಲ್,ಗಂಗಾಧರ್,ತಮ್ಮಣ್ಣ ಮಾಬೆನ್,ರಾಮ ಪೂಜಾರಿ, ಕುಶಲ,ನೇಬಿಸ ಬಾನು, ಸರೋಜಾ, ನಾಗವೇಣಿ, ಸೂಕ್ಷ್ಮ, ದಿವ್ಯ, ಸುರೇಖಾ, ವಂದನಾ, ಶಿಲ್ಪಾ ಮುಂತಾದವರು ಉಪಸ್ಥಿತರಿದ್ದರು.