ಬೆಂಗಳೂರು ಹೊರತುಪಡಿಸಿದರೆ ಮಂಗಳೂರು ನಗರ ಅತ್ಯಧಿಕ ವೇಗದಲ್ಲಿ ಬೆಳೆಯುತ್ತಿದೆ. ಸ್ಮಾರ್ಟ್ ಸಿಟಿ ಎಂಬ ಗಿರಿಮೆಯೂ ಇದೆ. ಆದರೆ ಈ ಎಲ್ಲಾ ಹಿರಿಮೆ ನಗರದಲ್ಲಿ ಒಂದು ಗಂಟೆ ಮಳೆ ಸುರಿದರೆ ಬಟಾಬಯಲಾಗುತ್ತದೆ. ನೀರು ಸರಿಯಾಗಿ ಹರಿದು ಹೋಗಲು ಚರಂಡಿಯ ವ್ಯವಸ್ಥೆ ಇಲ್ಲ. ಚರಂಡಿ ಇದ್ದರೂ ಸಮರ್ಪಕವಾಗಿ ಕಾರ್ಯಗತಗೊಳಿಸಿಲ್ಲ. ಕೋಟಿ ಕೋಟಿ ನಗರಕ್ಕೆ ಸುರಿದರೂ ಅಧಿಕಾರಿಗಳಲ್ಲಿ ದೂರದೃಷ್ಟಿತ್ವದ ಕೊರತೆಯಿಂದ ನೀರಲ್ಲಿಟ್ಟ ಹೋಮದಂತಾಗಿದೆ. ಒಂದೇ ಮಳೆಗೆ ಪಂಪ್ ವೆಲ್ ಬ್ರಿಡ್ಜ್ ಅಡಿಭಾಗದ ರಸ್ತೆಗಳು ಬೃಹತ್ ಕೆರೆಯಂತಾಗಿತ್ತು. ಕೇವಲ ದುಡ್ಡು ಹೊಡೆಯಲು ಅಧಿಕಾರಿಗಳು, ಜನಪ್ರತಿನಿಧಿಗಳು ಕೆಲಸ ಮಾಡಿಸುತ್ತಿದ್ದಾರೆಯೇ ಹೊರತು ಬೇರೆ ಇನ್ನೇನು ಮಣ್ಣಾಂಗಟ್ಟಿಯೂ ಇಲ್ಲ.
ನೀವು ಒಮ್ಮೆ ನಗರದಲ್ಲಿ ಸುತ್ತಾಡಿದರೆ ಸಾಕು, ರಸ್ತೆ ಬದಿಯಲ್ಲಿ ಬೃಹತ್ ಗಾತ್ರದ ಮರಗಳು ಕಾಣಸಿಗುತ್ತದೆ. ಮರಗಳು ನಗರದ ಸೌಂದರ್ಯವನ್ನು ಹೆಚ್ಚಿಸುತ್ತದೆ ನಿಜ. ಆದರೆ ಮಳೆಗಾಲದಲ್ಲಿ ಈ ಮರಗಳು ಎಷ್ಟು ಅಪಾಯ ತಂದೊಡ್ಡುತ್ತಿದೆ ಅನ್ನುವುದಕ್ಕೆ ಒಂದೆರಡು ನಿದರ್ಶನಗಳೇ ಸಾಕು.
ಮೊನ್ನೆ ಶುಕ್ರವಾರದಂದು ಪೊಲೀಸ್ ಲೈನ್ ನ ಪಕ್ಕದಲ್ಲಿರುವ ಮಸೀದಿಯಲ್ಲಿ ಶುಕ್ರವಾರದ ನಮಾಝ್ ಮುಗಿಸಿ ವೃದ್ಧರೊಬ್ಬರು ರಸ್ತೆಯಲ್ಲಿ ನಡೆದಾಡುತ್ತಿರುವ ಸಂದರ್ಭ ಬೃಹತ್ ಗಾತ್ರದ ಮರದ ಕೊಂಬೆ ಭಾರೀ ಮಳೆಗೆ ತುಂಡಾಗಿ ಬಿದ್ದು ಸ್ವಲ್ಪದರಲ್ಲೇ ಪಾರಾಗಿದ್ದರು. ಎರಡು ಮೂರು ದಿನಗಳ ಹಿಂದೆ ಭಾರೀ ಮಳೆಗೆ ಹಂಪನಕಟ್ಟೆಯಲ್ಲಿರುವ ವಿಶ್ವವಿದ್ಯಾಲಯ ಕಾಲೇಜಿನ ಪಕ್ಕದಲ್ಲಿರುವ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತ ಗೊಂಡ ಘಟನೆಯೂ ನಡೆದಿದೆ.
ಇವತ್ತು ನಗರದಲ್ಲಿ ಭಾರೀ ಮಳೆ ಬಂದರೆ ಮರದ ಬಳಿ ನಡೆದುಕೊಂಡು ಹೋಗುವುದು ಕೂಡ ಅಪಾಯಕಾರಿಯಾಗಿದೆ. ಯಾವ ಸಂದರ್ಭದಲ್ಲಿ ಉರುಳಿ ಬಿದ್ದು ಜೀವಕ್ಕೆ ಅಪಾಯ ವಾಗುತ್ತೊ ಅನ್ನುವ ಆತಂಕ ಕಾಡುತ್ತಿದೆ.
ಇಲಾಖೆಗಳು ರಸ್ತೆಗೆ ಅಡ್ಡಲಾಗಿ ನಿಂತಿರುವ ಭಾರೀ ಗಾತ್ರದ ಮರದ ಕೊಂಬೆಗಳನ್ನು ತೆಗೆಯಲು ಅಸಡ್ಡೆ ವಹಿಸಿರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಕಾರಣ. ಇನ್ನಾದರೂ ಇಲಾಖೆ ದುರಂತ ನಡೆಯುವ ಮುನ್ನ ಎಚ್ಚೆತ್ತುಕೊಂದರೆ ಒಳಿತು.