ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತ್ಯಶೋಧನೆಗೆ ಮುಂದಾಗಿರುವ ಬಿಜೆಪಿ ಟೀಮ್ ಗೆ ಆರಂಭದಲ್ಲೇ ಆಘಾತವಾಗಿದೆ. ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣ ಸಂಬಂಧ,ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಒಂದನೇ ಆರೋಪಿ ಮಣಿಕಂಠ ಹಾಗೂ ಎರಡನೇ ಆರೋಪಿ ಸಂದೇಶ್ ನನ್ನು ಬಂಧಿಸಲಾಗಿತ್ತು.
ಆದರೆ ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅನಿಲ್, ಶಂಕರ್ @ ತುಪ್ಪ, ಮಂಜು ಹಾಗೂ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಈ ಮೂಲಕ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಕೇಸ್ ನಲ್ಲಿ ಬಂಧಿತ ಆರೋಪಿಗಳ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.
ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಹತ್ಯೆ ಪ್ರಕರಣದ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ಟೀಮ್ ಸತ್ಯಶೋಧನೆಗೆ ಮುಂದಾಗಿದೆ. ಆದರೆ ಆರಂಭದಲ್ಲಿಯೇ ಬಿಜೆಪಿಗೆ ಶಾಕ್ ಆಗಿದೆ. ಪ್ರಕರಣದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆಯ ತಮ್ಮನೇ ಆರೋಪಿ ಎಂಬುದು ಗೊತ್ತಾಗಿದೆ.
ಪ್ರಕರಣದ 6 ಪ್ರಮುಖ ಆರೋಪಿಗಳಲ್ಲಿ ಓರ್ವ ಆರೋಪಿ ಮೈಸೂರು ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯೆ ತಮ್ಮ ಶಂಕರ್@ ತುಪ್ಪ ಎಂಬಾತ ಆರೋಪಿಯಾಗಿದ್ದು, ಆರೋಪಿ ವಿಚಾರ ತಿಳಿದು ಬಿಜೆಪಿ ಈಗ ಅಡ್ಡಕತ್ತರಿಗೆ ಸಿಲುಕಿದಂತಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಡೆ ತೀವ್ರ ಕುತೂಹಲ ಮೂಡಿಸಿದೆ.