ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ,ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ರವರು ತನ್ನ ಮೇಲಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಮಾನ್ಯ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದೆ.
ಕಾನೂನು ವಿದ್ಯಾರ್ಥಿನಿಯೊಬ್ಬಳು ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ರವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯ ಕೆ.ಎಸ್.ಎನ್ ರಾಜೇಶ್ ರವರು ಲೈಂಗಿಕ ದೌರ್ಜನ್ಯವೆಸಗಿ, ಅತ್ಯಾಚಾರಗೈದ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಆರೋಪಿ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದು, ಸದ್ರಿ ದೋಷಾರೋಪಣಾ ಪಟ್ಟಿಯನ್ನು ರದ್ದುಗೊಳಿಸುವಂತೆ ಕೆ.ಎಸ್.ಎನ್ ರಾಜೇಶ್ ರವರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.
ರಿಟ್ ಅರ್ಜಿಯಲ್ಲಿ ತನಿಖಾಧಿಕಾರಿಗಳು ಕಲೆ ಹಾಕಿದ ಸಾಕ್ಷ್ಯಾಧಾರದಲ್ಲಿ ಅತ್ಯಾಚಾರ ಪ್ರಕರಣಕ್ಕೆ ಯಾವುದೇ ಪುರಾವೆಗಳಿಲ್ಲ ಹಾಗೂ ಅತ್ಯಾಚಾರಕ್ಕೆ ಯತ್ನ ಮತ್ತು ಮಹಿಳೆ ಮೇಲೆ ಮಾನಭಂಗಕ್ಕೆ ಯತ್ನ ಮಾತ್ರ ಕಂಡುಬರುತ್ತದೆ ಎಂದು ರಿಟ್ ಅರ್ಜಿ ಸಲ್ಲಿಸಲಾಗಿತ್ತು.
ಮಂಗಳವಾರದಂದು ರಿಟ್ ಅರ್ಜಿಯನ್ನು ಆಲಿಸಿದ ಗೌರವಾನ್ವಿತ ನ್ಯಾಯಮೂರ್ತಿ ಎಂ. ನಾಗಪ್ರಸನ್ನರವರು “ಅತ್ಯಾಚಾರ, ಅತ್ಯಾಚಾರ ಯತ್ನ ಮತ್ತು ಅತ್ಯಾಚಾರಕ್ಕೆ ತಯಾರಿ” ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆಯಲ್ಲಿ ಕಂಡುಬರುವುದು. ತನಿಖಾಧಿಕಾರಿಗಳು ವಶಪಡಿಸಿಕೊಂಡಿರುವ ಸಿಸಿಟಿವಿಯ ದೃಶ್ಯಗಳು, ಆರೋಪಿ ಮತ್ತು ಪಿರ್ಯಾದಿ ನಡುವೆ ನಡೆದಂತಹ ಮಾತುಕತೆಯ ವೈಜ್ಞಾನಿಕ ವರದಿಗಳು ಮತ್ತು ಘಟನಾ ಸಮಯದಲ್ಲಿ ಆರೋಪಿಯ ಉದ್ದೇಶ, ಅತ್ಯಾಚಾರಕ್ಕೆ ಯತ್ನ ಮತ್ತು ಅತ್ಯಾಚಾರ ನಡೆದಿದೆಯೋ ಅಥವಾ ಇಲ್ಲವೋ ಎಂಬ ವಿಷಯ ಸಾಕ್ಷ್ಯ ವಿಚಾರಣೆಯಿಂದ ತಿಳಿಯುವುದೆಂದು ಮತ್ತು ಈ ಪ್ರಕರಣ ಸಂಬಂಧಿಗಳು, ರಕ್ಷಕರು, ಶಿಕ್ಷಕರು ಅಥವಾ ಒಬ್ಬ ವ್ಯಕ್ತಿಯ ಮೇಲೆ ಮಹಿಳೆ ಇಟ್ಟ ನಂಬಿಕೆ ಅಥವಾ ಆಕೆಯ ಮೇಲೆ ಅಧಿಕಾರವುಳ್ಳವನಾಗಿ, ಅತ್ಯಾಚಾರವೆಸಗಿದ ಕಲಂನಡಿಯಲ್ಲಿ ಈ ಪ್ರಕರಣ ಬರುವುದಾಗಿ ಮತ್ತು ನ್ಯಾಯಾಲಯ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದರೆ ಕಾನೂನು ವಿದ್ಯಾರ್ಥಿನಿಯರಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಆದೇಶಿಸಿ ರಿಟ್ ಅರ್ಜಿಯನ್ನು ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯ ಮೂರ್ತಿಗಳು ತಿರಸ್ಕರಿಸಿರುತ್ತಾರೆ.
ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಎರಡನೇ ವರ್ಷದ ಕಾನೂನು ವಿದ್ಯಾರ್ಥಿನಿಯಾಗಿದ್ದ ಯುವತಿ,ವಕೀಲ ರಾಜೇಶ್ ಕೆ ಎನ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು.2021 ರ ಅಗಸ್ಟ್ ತಿಂಗಳಲ್ಲಿ ಆಕೆ ಈ ವಕೀಲರ ಕಚೇರಿಯಲ್ಲಿ ಇಂಟರ್ನ್ ಆಗಿ ಕೆಲಸಕ್ಕೆ ಸೇರಿದ್ದಳು.ನಗರದ ಬಂಟ್ಸ್ ಹಾಸ್ಟೆಲ್ ನಲ್ಲಿ ಕಚೇರಿ ಹೊಂದಿರುವ ವಕೀಲ ಕೆ.ಎಸ್.ಎನ್ ರಾಜೇಶ್, ತನ್ನ ಕಚೇರಿಗೆ ಇಂಟರ್ನ್ ಶಿಪ್ ಬರುತ್ತಿದ್ದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಈ ಕುರಿತ ಆಡಿಯೋ ವೈರಲ್ ಆದ ಬಳಿಕ ಅ.18 ರಂದು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
12ಕ್ಕೂ ಹೆಚ್ಚು ಬ್ಯಾಂಕ್‌ಗಳ ಪ್ಯಾನೆಲ್ ವಕೀಲರಾಗಿದ್ದ ಕೆ.ಎಸ್.ಎನ್. ರಾಜೇಶ್ ರವರು ಲೋಕಾಯುಕ್ತ, ಎಸಿಬಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ, ವಕೀಲರು ಹಲವಾರು ದಿನಗಳವರೆಗೆ ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದರು