5 ವರ್ಷ ಸೇವೆ ಮೀರಿದ ಎಎಸ್ಐ, ಹೆಡ್ ಕಾನ್ಸ್ಟೆಬಲ್, ಕಾನ್ಸ್ಟೆಬಲ್ಗಳ ವರ್ಗಾವಣೆ ಮಾಡಬೇಕು
ರೌಡಿಗಳು ಪದೇ ಪದೇ ಅಪರಾಧ ಎಸಗಿದರೆ,ಗೂಂಡಾ ಕಾಯ್ದೆಯಡಿ ಬಂಧಿಸಬೇಕು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಕ್ರಮ ಕೈಗೊಳ್ಳಬೇಕು.ಯಾರಾದರೂ ಪದೇ ಪದೇ ಅಪರಾಧ ಎಸಗಿ ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡಿದರೆ, ಅಂಥವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಖಡಕ್ ಸೂಚನೆ ನೀಡಿದ್ದಾರೆ.
ರಾಜ್ಯದಲ್ಲಿ ಕೆಲದಿನಗಳಿಂದ ಅಪರಾಧಗಳ ಸಂಖ್ಯೆ ಹೆಚ್ಚುತ್ತಿದ್ದು, ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ರಾಜ್ಯದ ಎಲ್ಲ ಎಸ್ಪಿ ಹಾಗೂ ಕಮಿಷನರ್ಗಳಿಗೆ 21 ಪ್ರಮುಖ ಸೂಚನೆ ನೀಡಿರುವ ಎಡಿಜಿಪಿ ಹಿತೇಂದ್ರ, ಹಲವು ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಭೆ ಮಾಡಿದ್ದೇನೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದಿದ್ದಾರೆ.
ಕೆಲ ಜಿಲ್ಲೆಗಳಲ್ಲಿ ಕಾನ್ಸ್ಟೆಬಲ್ ಹಾಗೂ ಹೆಡ್ ಕಾನ್ಸ್ಟೆಬಲ್ಗಳಿಗೆ ಬಡ್ತಿ ನೀಡಿಲ್ಲ. ಅರ್ಹತೆ ಆಧಾರದಲ್ಲಿ ತ್ವರಿತವಾಗಿ ಬಡ್ತಿ ನೀಡಬೇಕು.ಒಂದೇ ಠಾಣೆಯಲ್ಲಿ 5 ವರ್ಷ ಸೇವೆ ಮೀರಿದ ಎಎಸ್ಐ, ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ಗಳನ್ನು ವರ್ಗಾವಣೆ ಮಾಡಬೇಕು.ಸಾಮಾಜಿಕ ಮಾಧ್ಯಮಗಳ ನಿರ್ವಹಣೆ ಘಟಕ ತೆರೆಯಬೇಕು.
ಯಾರಾದರೂ ಪ್ರಚೋದನಾಕಾರಿ ಪೋಸ್ಟ್ ಪ್ರಕಟಿಸಿದರೆ, ಆಯಾ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಬೇಕು.ಪ್ರತಿ ಜಿಲ್ಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರನ್ನು ಗುರುತಿಸಿ, ಅವರ ಫೋಟೊ ಸಮೇತ ಠಾಣೆಗಳಲ್ಲಿ ವಿವರ ಪ್ರಕಟಿಸಬೇಕು.
ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಅತೀ ವೇಗ, ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ರೌಡಿ ಪಟ್ಟಿಗೆ ಹೆಸರು ಸೇರಿಸಿದ ಬಳಿಕ 10 ವರ್ಷ ಅವಧಿಯಲ್ಲಿ ಅಪರಾಧ ಕೃತ್ಯ ಎಸಗದ ವ್ಯಕ್ತಿಯನ್ನು ಪಟ್ಟಿಯಿಂದ ತೆಗೆಯಬೇಕು.ಇದಕ್ಕಾಗಿ ಪ್ರಧಾನ ಕಚೇರಿ ಸೂಚನೆಗಳನ್ವಯ ವಿಶೇಷ ಅಭಿಯಾನ ನಡೆಸಬೇಕು.
ಪ್ರತಿ ಜಿಲ್ಲೆ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಕೊಲೆ, ಕೊಲೆ ಯತ್ನ, ಸುಲಿಗೆ, ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವವರ ಪಟ್ಟಿ ಮಾಡಬೇಕು.ಇಂಥವರು ಪದೇ ಪದೇ ಅಪರಾಧಗಳಲ್ಲಿ ತೊಡಗಿದರೆ,ಅವರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಪ್ರಕ್ರಿಯೆ ಆರಂಭಿಸಬೇಕು.
ರೌಡಿ ಪಟ್ಟಿಯಲ್ಲಿ ಹೆಸರಿರುವವರು ಪದೇ ಪದೇ ಅಪರಾಧ ಕೃತ್ಯ ಎಸಗಿದರೆ, ಗೂಂಡಾ ಕಾಯ್ದೆಯಡಿ ಬಂಧಿಸಬೇಕು.ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ಅವರು ರಾಜ್ಯದ ಎಲ್ಲ ಎಸ್ಪಿ ಹಾಗೂ ಕಮಿಷನರ್ಗಳಿಗೆ 21 ಪ್ರಮುಖ ಖಡಕ್ ಸೂಚನೆಯನ್ನು ನೀಡಿದ್ದಾರೆ.