ಪತ್ನಿಯಂತೆ ತಾಯಿಯನ್ನೇಕೆ ಸಾಕಲಾಗಲ್ಲ?: ಹೈಕೋರ್ಟ್ ಖಡಕ್ ಪ್ರಶ್ನೆ

ರಾಜ್ಯ

ನಾವು ರೊಟ್ಟಿಗಿಂತ ರಕ್ತ ದುಬಾರಿಯಾಗಿರುವ ಕಾಲದಲ್ಲಿ ಜೀವಿಸುತ್ತಿದ್ದೇವೆ.

ದುಡಿಯಲು ಸಮರ್ಥನಾದ ವ್ಯಕ್ತಿ ತನ್ನ ಪತ್ನಿಯನ್ನು ನೋಡಿಕೊಳ್ಳಬಹುದಾದರೆ ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು ಎಂದು ಪ್ರಶ್ನಿಸಿದ ಹೈಕೋರ್ಟ್, ವೃದ್ಧ ತಾಯಿಯ ಜೀವನ ನಿರ್ವಹಣೆಗಾಗಿ ಮಾಸಿಕ 10 ಸಾವಿರ ರೂಪಾಯಿ ಪಾವತಿಸುವಂತೆ ಆದೇಶ ನೀಡಿದೆ.

84 ವರ್ಷದ ವೃದ್ಧ ತಾಯಿಯ ಜೀವನ ನಿರ್ವಹಣೆಗೆ ಮಾಸಿಕ ಹಣ ನೀಡುವಂತೆ ಮೈಸೂರು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಆಕೆಯ ಪುತ್ರರಿಬ್ಬರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್ ಅರ್ಜಿದಾರರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.

“ಇತ್ತೀಚಿನ ಯುವ ಪೀಳಿಗೆಯ ಒಂದು ವರ್ಗ, ವಯಸ್ಸಾದ ಹಾಗೂ ಅನಾರೋಗ್ಯ ಪೀಡಿತ ಪೋಷಕರನ್ನು ನೋಡಿಕೊಳ್ಳಲು ವಿಫಲವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ” ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಮೈಸೂರಿನ ಎನ್.ಆರ್ ಮೊಹಲ್ಲಾದ ಗೋಪಾಲ್ ಮತ್ತು ಮಹೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ‌. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಆ ಮೂಲಕ ತನ್ನ ಸಹೋದರಿಯೊಂದಿಗೆ ನೆಲೆಸಿರುವ ವೃದ್ಧೆಯ ನೆರವಿಗೆ ಹೈಕೋರ್ಟ್ ಧಾವಿಸಿದೆ.

ಸಹೋದರಿಯರ ಕುಮ್ಮಕ್ಕಿನಿಂದ ತಾಯಿ ಜೀವನಾಂಶ ಕೋರುತ್ತಿದ್ದಾರೆ ಎಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ಹೈಕೋರ್ಟ್ “ಅರ್ಜಿದಾರರು ತಾವು ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ. ಕುಟುಂಬದ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಯಾವುದೇ ಭಾಗ ಕೋರಿಲ್ಲ. ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಹೆಣ್ಣು ಮಕ್ಕಳು ನೋಡಿಕೊಂಡಿದ್ದಾರೆ. ಇಲ್ಲದಿದ್ದರೆ ತಾಯಿ ರಸ್ತೆಯ ಮೇಲಿರಬೇಕಿತ್ತು” ಎಂದು ಅಭಿಪ್ರಾಯಪಟ್ಟಿತು.

“ಹತ್ತು ಸಾವಿರ ರೂಪಾಯಿ ಜೀವನಾಂಶ ನೀಡುವುದು ಜಾಸ್ತಿ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ನಾವು ರೊಟ್ಟಿಗಿಂತ ರಕ್ತ ದುಬಾರಿಯಾಗಿರುವ ಕಾಲದಲ್ಲಿ ಜೀವಿಸುತ್ತಿದ್ದೇವೆ. ಹಣ ಖರೀದಿಯ ಶಕ್ತಿ ಕಳೆದುಕೊಂಡಿದೆ. ದಿನದಿನಕ್ಕೆ ಬೆಲೆಗಳು ಏರುತ್ತಿವೆ. ಹೀಗಿರುವಾಗ ಹತ್ತು ಸಾವಿರ ರೂಪಾಯಿ ಹೆಚ್ಚು ಎಂಬುದಾಗಿ ಹೇಳಲಾಗದು. ದೇಹ ಮತ್ತು ಆತ್ಮವನ್ನು ಹಿಡಿದಿಡಲು ಅಗತ್ಯಕ್ಕಿಂತ ಹೆಚ್ಚು ಹಣ ಬೇಕಾಗುತ್ತದೆ. ಆದರೆ, ಜೀವನಾಂಶವನ್ನು ಹೆಚ್ಚಳ ಮಾಡುವ ಬಗ್ಗೆ ತಾಯಿಯಿಂದ ಯಾವುದೇ ಮನವಿ ಇಲ್ಲ. ಇದರಿಂದ ಜೀವನಾಂಶ ಹೆಚ್ಚಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳುತ್ತಿಲ್ಲ” ಎಂದು ನ್ಯಾಯಾಲಯ ಹೇಳಿದೆ.