ಗುರುಪುರ ವಲಯದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ.! ಆತಂಕದಲ್ಲಿ ನಾಗರಿಕರು

ಕರಾವಳಿ

ದ.ಕ ಜಿಲ್ಲೆಯ ಹಲವಾರು ಪ್ರದೇಶದ ಪರಿಸರದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸಾಕು ನಾಯಿಗಳನ್ನು ಬೇಟೆಯಾಡುವ ಕಾಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮನೆಯಲ್ಲಿ ಸಾಕಿದ ಸಾಕು ನಾಯಿಗಳ ಮೇಲೆ ಚಿರತೆಯು ರಾತ್ರಿಯ ಹೊತ್ತಿನಲ್ಲಿ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಪರಿಸರದಲ್ಲಿ ಚಿರತೆಯು ಕಾಣಿಸಿದ್ದು ಈ ಪ್ರದೇಶದ ನಾಗರಿಕರು ಬಹಳ ಆತಂಕಕ್ಕಿಡಾಗಿದ್ದಾರೆ.ಇದೇ ಪರಿಸರದ ವ್ಯಕ್ತಿಯೊಬ್ಬರು ಬೆಳಗಿನ ಜಾವ ತನ್ನ ವಾಹನದಲ್ಲಿ ಸಂಚರಿಸುವ ವೇಳೆ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಿರತೆ ಹಾರಿದ್ದನ್ನು ಕಣ್ಣಾರೆ ಕಂಡಿದ್ದಾರೆ.ಈ ಪರಿಸರದಲ್ಲಿ ಶಾಲಾ-ಕಾಲೇಜುಗಳಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಭಯ ಪಡುವಂತಾಗಿದೆ.ಇಲ್ಲಿನ ಸುತ್ತ ಮುತ್ತಲಿನ ಪರಿಸರ ಕುರುಚಲು ಗುಡ್ಡ,ಬಂಡೆ ಕಲ್ಲುಗಳ ಪ್ರದೇಶದಿಂದ ಕೂಡಿಡ್ಡು,ಈ ಪ್ರದೇಶಗಳಲ್ಲಿ ಸಾಕಷ್ಟು ಮನೆಗಳು, ಶಾಲಾ-ಕಾಲೇಜು, ಮಂದಿರ,ಮಸೀದಿಗಳು, ಧಾರ್ಮಿಕ ಕ್ಷೇತ್ರಗಳಿದ್ದು ನಿರಂತರ ಜನ ಸಂಚಾರವಿರುವ ಪ್ರದೇಶವಾಗಿರುತ್ತದೆ.ಇತ್ತೀಚೆಗೆ ಬಜಪೆಯ ಅದ್ಯಪಾಡಿ,ಮಳಲಿ, ಕಂದಾವರ,ಇರುವೈಲು,ಕಾಡಬರಿ ಈ ಪರಿಸರದಲ್ಲಿ ಚಿರತೆ ಅಗಾಗ್ಗೆ ಪ್ರತ್ಯಕ್ಷವಾಗುವುದರಿಂದ ಸ್ಥಳೀಯರು ಆತಂಕಿತರಾಗಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಎರಡು-ಮೂರು ವರ್ಷಗಳಿಂದ ಈ ಪ್ರದೇಶದ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು,ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿದೆ.ಚಿರತೆಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಸೂಕ್ತ ಕ್ರಮವಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ಹುಲಿ, ಸಿಂಹಗಳಿಗಿರುವ ಪ್ರಾಮುಖ್ಯ ಹೊಂದಿಲ್ಲದ ಬಡ ಪ್ರಾಣಿ ಚಿರತೆ. ವೇಗವಾಗಿ ಓಡಬಲ್ಲ,ಆಕರ್ಷಕ ಮೈಬಣ್ಣದ ಚಿರತೆ ಯಾವುದೇ ಬಗೆಯ ವಾತಾವರಣದಲ್ಲೂ ಜೀವಿಸಬಲ್ಲ ಪ್ರಾಣಿ. ಅರಣ್ಯವೇ ಇದರ ಆವಾಸಸ್ಥಾನ. ಮನುಷ್ಯ ವಸತಿಯ ಹತ್ತಿರದಲ್ಲಿಯೂ ಇರಬಲ್ಲ ಚಿರತೆ ಹಗಲು ರಾತ್ರಿಗಳಲ್ಲೂ ಆಹಾರಕ್ಕಾಗಿ ಬೇಟೆಯಾಡಬಲ್ಲದು. ಇಂಥ ಚಿರತೆ, ಈಚೆಗೆ ಜನ ವಸತಿಗಳತ್ತ ಅದರಲ್ಲೂ ಮುಖ್ಯವಾಗಿ ಗ್ರಾಮಗಳತ್ತ ಮುಖ ಮಾಡುತ್ತಿದೆ.

ಈಗ ಎಲ್ಲೆಡೆ ವನ್ಯಪ್ರಾಣಿ,ಮಾನವ ಸಂಘರ್ಷದ್ದೇ ಚರ್ಚೆ.ಚಿರತೆ-ಮಾನವ ಮುಖಾಮುಖಿ ದೇಶದ ಹಲವು ಭಾಗಗಳಲ್ಲಿ ಕಾಣಿಸುತ್ತಿದೆ. ಹಳ್ಳಿಗಳು ಮಾತ್ರವಲ್ಲದೆ ಪಟ್ಟಣದಲ್ಲೂ ಇದು ಬಿಟ್ಟಿಲ್ಲ. ಕರ್ನಾಟಕದಲ್ಲಂತೂ ಚಿರತೆ ವಿಚಾರ ಇತ್ತೀಚೆಗೆ ಅತಿ ಸಾಮಾನ್ಯ ಎಂಬಂತಾಗಿದೆ.

ಮರಗಳ್ಳರ ಹಾವಳಿ,ರೆಸಾರ್ಟ್ ಮೋಜು ಮಸ್ತಿ ಹೆಚ್ಚಳ,ಅಕ್ರಮ ಗಣಿಗಾರಿಕೆ,ಬಂಡೆ ಕಲ್ಲು ಒಡೆಯಲು ಸ್ಪೋಟಕ ಬಳಕೆಯಿಂದ ಉಂಟಾಗುವ ಅತೀ ಶಬ್ದ ಹೀಗೆ ನಿಷಿದ್ಧ ಪ್ರದೇಶಗಳಲ್ಲಿ ಮನುಷ್ಯರ ಹೆಜ್ಜೆಗಳು ಅಧಿಕವಾಗುತ್ತಿರುವುದರಿಂದ ಅರಣ್ಯದ ಪ್ರಾಣಿಗಳು ಮಾನವ ವಾಸನೆಯಿಂದ ದೂರ ಉಳಿಯುತ್ತವೆ.ಮಾತ್ರವಲ್ಲ ಕಾಡಿದ ಹಾದಿ ಬಿಟ್ಟು ನಾಡಿನ ಬೀದಿಗೆ ಲಗ್ಗೆ ಇಡುತ್ತಿದೆ.ಆಹಾರಕ್ಕಾಗಿ ಹುಲಿ ಸಿಂಹಗಳಿಗಿಂತ ಚಿರತೆಗಳು ಸಂಚರಿಸುವುದು ಹೆಚ್ಚು.ದಟ್ಟ ಅರಣ್ಯದಲ್ಲಿ ಜಿಂಕೆ, ಕಡವೆಗಳು ಹೆಚ್ಚಿರುವುದಿಲ್ಲ. ಇದ್ದರೂ ಅವುಗಳು ಶಕ್ತಿಯುತ ಹುಲಿಗಳಿಗೆ ಆಹಾರವಾಗುತ್ತವೆ.ಹುಲಿ ಸಿಂಹಗಳಂತೆ ಯಾವುದೇ ಪ್ರಾಣಿಗಳ ಮೇಲೆ ಚಿರತೆಗಳು ಎರಗುವಂತಿಲ್ಲ. ಕಡವೆ. ಕಾಡುನಾಯಿಗಳೂ ಒಮ್ಮಮ್ಮೆ ಚಿರತೆಗಳನ್ನು ಹಿಮ್ಮೆಟ್ಟಿಸಬಲ್ಲವು. ಆದ್ದರಿಂದಲೇ ಚಿರತೆಗಳು ಆಹಾರಕ್ಕಾಗಿ ಅರಣ್ಯ ಪ್ರದೇಶದಿಂದ ಹೊರಬಿದ್ದು ಜನವಸತಿ ಪ್ರದೇಶದ ಹತ್ತಿರ ಬರುತ್ತವೆ. ಜಾನುವಾರು, ಕುರಿ, ಮೇಕೆ, ನಾಯಿ, ಕತ್ತೆ ಕೂಡ ಅವುಗಳ ಆಹಾರವಾಗುತ್ತವೆ. ಇದೀಗ ಚಿರತೆ ಗ್ರಾಮಾಂತರ ಮತ್ತು ಪಟ್ಟಣದ ಬದುಕಿಗೆ ಅಪಾಯಕಾರಿ ಎನ್ನಿಸುತ್ತಿದೆ.

ತಮ್ಮ ಸಾಕುಪ್ರಾಣಿಗಳನ್ನು ಪದೇ ಪದೇ ಕಬಳಿಸುವ ಚಿರತೆಗಳ ಮೇಲೆ ಗ್ರಾಮಸ್ಥರಿಗೆ ಸಹಜವಾದ ಸಿಟ್ಟು. ಇವರ ಕೋಪಕ್ಕೆ ನೂರಾರು ಚಿರತೆಗಳು ಬಲಿಯಾಗುತ್ತಿವೆ. ಚಿರತೆಗಳೂ ಈಗ ಅಪಾಯದ ಅಂಚಿಗೆ ತಲುಪಿರುವ ಅಡವಿ ಜೀವಿಗಳಾಗಿವೆ.

ತನ್ನ ಉಳಿವಿಗಾಗಿ ಹುಲಿ-ಸಿಂಹಗಳಿಗಿಂತ ಹೆಚ್ಚಾಗಿ ಮನುಷ್ಯ ಜೀವನದ ಮೇಲೆ ಉಗ್ರ ಆಕ್ರಮಣ ನಡೆಸುತ್ತಿರುವ ಚಿರತೆಗಳು ಸ್ವತಃ ಪ್ರಾಣ ಕಳೆದುಕೊಳ್ಳುವ ಸಂದರ್ಭ ಕೂಡ ಹೆಚ್ಚು. ಭಾರತೀಯ ವನ್ಯಜೀವಿ ಸೊಸೈಟಿಯ ದಾಖಲೆಗಳ ಪ್ರಕಾರ, 1994ರಿಂದೀಚೆಗೆ ನಮ್ಮಲ್ಲಿ ಹತ್ಯೆಗೊಳಗಾದ ಚಿರತೆಗಳ ಸಂಖ್ಯೆ 3552. ಒಂದು ವರದಿ ಪ್ರಕಾರ ದೇಶದಲ್ಲಿ ಸರಾಸರಿ ಪ್ರತಿದಿನ ಒಂದು ಚಿರತೆ ತನ್ನ ಪ್ರಾಣ ಕಳೆದುಕೊಳ್ಳುತ್ತಿದೆ. ದೇಶದ ತುಂಬೆಲ್ಲಾ ಸುದ್ದಿಯಾಗುತ್ತಿರುವ ಚಿರತೆ-ಮಾನವ ಮುಖಾಮುಖಿ ಕರ್ನಾಟಕವನ್ನೂ ತನ್ನ ತೆಕ್ಕೆಗೆ ಇಟ್ಟುಕೊಂಡಿದೆ