ಸೌಜನ್ಯ ಅತ್ಯಾಚಾರ ಸಿಬಿಐನಿಂದ ಮರು ತನಿಖೆಗೆ ಸಿಪಿಐಎಂ ಒತ್ತಾಯ: ಕೆ.ಯಾದವ ಶೆಟ್ಟಿ,ಕಾರ್ಯದರ್ಶಿ, ಸಿಪಿಐಎಂ,ದ.ಕ

ಕರಾವಳಿ

2012 ರಲ್ಲಿ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಅತ್ರಾಪ್ತ ಬಾಲಕಿ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಆರೋಪಕ್ಕೊಳಗಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ತೀರ್ಪು ನೀಡಿರುವುದು, ತೀರ್ಪಿನಲ್ಲಿ ಸಾಕ್ಷ್ಯ ಗಳನ್ನು ರಕ್ಷಿಸದಿರುವುದು, ನಾಶಗೊಳಿಸಿರುವುದನ್ನು ಉಲ್ಲೇಖಿಸಿರುವ ಹಿನ್ನಲೆಯಲ್ಲಿ “ಸೌಜನ್ಯ ಅತ್ಯಾಚಾರ, ಕೊಲೆಯ ನೈಜ ಆರೋಪಿಗಳು ಯಾರು ?” ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಈ ಹಿನ್ನಲೆಯಲ್ಲಿ ಪ್ರಕರಣದ ಆಳವಾದ ತನಿಖೆಯ ಅಗತ್ಯವಿದ್ದು, ಸಿಬಿಐನ ಪರಿಣಿತ, ದಕ್ಷ ಅಧಿಕಾರಿಗಳ ತಂಡದಿಂದ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಸಂತೋಷ್ ರಾವ್ ಅಮಾಯಕ ಎಂಬ ಅಭಿಪ್ರಾಯ ಬಂಧನದ ಸಂದರ್ಭದಲ್ಲಿ ವ್ಯಾಪಕವಾಗಿತ್ತು. ಸಿಪಿಐಎಂ ಪಕ್ಷವೂ ಅದೇ ನಿಲುವನ್ನು ಹೊಂದಿತ್ತು. ಆ ಕಾರಣಕ್ಕೆ ಸಿಬಿಐ ತನಿಖೆಗೆ ಬೇಡಿಕೆ ಮುಂದಿಡಲಾಗಿತ್ತು. ಆದರೆ, ಸಾಕ್ಷ್ಯಗಳನ್ನು ಆಗಲೆ ನಾಶಪಡಿಸಲಾಗಿದ್ದುದರಿಂದ ಸಿಬಿಐ ತನಿಖಾ ತಂಡ ಆಳವಾದ ತನಿಖೆಗೆ ಇಳಿಯದೆ ರಾಜ್ಯ ಪೊಲೀಸ್ ಇಲಾಖೆ ಆರೋಪ ಹೊರಿಸಿದ್ದ ಸಂತೋಷ್ ರಾವ್ ನ ಮೇಲೆಯೇ ತಾನೂ ಆರೋಪ ಹೊರಿಸಿ ಕೈತೊಳೆದುಕೊಂಡಿತು. ಇದೀಗ ಸಿಬಿಐ ನ್ಯಾಯಾಲಯವು ತೀರ್ಪು ನೀಡಿದಾಗ ಉಲ್ಲೇಖಿಸಿದ ವಿಷಯಗಳು ತನಿಖಾಧಿಕಾರಿಗಳ ಮೇಲೆ ಅನುಮಾನಗಳನ್ನು ಹುಟ್ಟಿಸಿವೆ‌. ಸಂತೋಷ್ ರಾವ್ ಸಾಕ್ಷ್ಯಾಧಾರಗಳ ಕೊರತೆಯಿಂದ ದೋಷಮುಕ್ತನಾದುದಲ್ಲ, ನಿರಪಾರಾಧಿಯೂ ಹೌದು ಎಂಬುದನ್ನು ಸಾಬೀತು ಪಡಿಸಿದೆ.

ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ, ಉದ್ದೇಶಪೂರ್ವಕವಾಗಿಯೇ ಪ್ರಕರಣವನ್ನು ಮುಚ್ಚಿಹಾಕಲಾಗಿದೆ. ನೈಜ ಅಪರಾಧಿಗಳನ್ನು ರಕ್ಷಿಸಲಾಗಿದೆ ಎಂಬ ಅಭಿಪ್ರಾಯ ನಾಡಿನಾದ್ಯಂತ ಉಂಟಾಗಿದೆ. ರಾಜ್ಯಾದ್ಯಂತ ವ್ಯಾಪಕ ಆಕ್ರೋಶವೂ ಉಂಟಾಗಿದೆ. ಸಿಪಿಐಎಂ ಪಕ್ಷವೂ ಈ ಜನಾಭಿಪ್ರಾಯವನ್ನು ಅನುಮೋದಿಸುತ್ತದೆ ಹಾಗೂ ಸೌಜನ್ಯ ಪ್ರಕರಣವನ್ನು ಸಿಬಿಐ ನಲ್ಲಿರುವ ಪ್ರಾಮಾಣಿಕ, ಅನುಭವಿ, ಪರಿಣಿತ ಅಧಿಕಾರಿಗಳಿಂದ ಮರು ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸುತ್ತದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ