ಮಕ್ಕಳ ನಾಪತ್ತೆ ಪ್ರಕರಣ: ಕರ್ನಾಟಕಕ್ಕೆ 3 ನೇ ಸ್ಥಾನ

ರಾಷ್ಟ್ರೀಯ

5 ವರ್ಷದಲ್ಲಿ 27,528 ಮಕ್ಕಳು ಮಿಸ್ಸಿಂಗ್.!

ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ 2.75 ಲಕ್ಷಕ್ಕೂ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ಕೇಂದ್ರ ಸರಕಾರವು ಲೋಕಸಭೆಗೆ ತಿಳಿಸಿದೆ.

ಸಂಸದ ಬ್ರಿಜೇಂದ್ರ ಸಿಂಗ್ ಕೇಳಿರುವ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ‘ಮಕ್ಕಳ ನಾಪತ್ತೆ ಪ್ರಕರಣದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 27,528 ಮಕ್ಕಳು ನಾಪತ್ತೆಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.

2018ರ ಜನವರಿ 1 ರಿಂದ ಈ ವರ್ಷದ ಜೂನ್ 30 ರವರೆಗೆ ದೇಶದಲ್ಲಿ 2.18 ಲಕ್ಷ ಹೆಣ್ಣು ಮಕ್ಕಳು ನಾಪತ್ತೆಯಾಗಿದ್ದಾರೆ. ಗಂಡು ಮಕ್ಕಳ ಸಂಖ್ಯೆ 62 ಸಾವಿರ. ಇದೇ ಅವಧಿಯಲ್ಲಿ 1.73 ಲಕ್ಷ ಹುಡುಗಿಯರು ಮತ್ತು 66 ಸಾವಿರ ಗಂಡು ಮಕ್ಕಳು ಸೇರಿದಂತೆ 2.74 ಲಕ್ಷ ಮಕ್ಕಳನ್ನು ರಕ್ಷಿಸಲಾಗಿದೆ. ಇದರಲ್ಲಿ 2018 ಕ್ಕಿಂತ ಮೊದಲು ನಾಪತ್ತೆಯಾದ ಮಕ್ಕಳು ಸೇರಿದ್ದಾರೆ.

ಕರ್ನಾಟಕದಲ್ಲಿ 8,632 ಬಾಲಕರು ಹಾಗೂ 18,893 ಬಾಲಕಿಯರು ಕಾಣೆಯಾಗಿದ್ದಾರೆ. ಇದೇ ಸಮಯದಲ್ಲಿ 7,163 ಬಾಲಕರು, 14,649 ಬಾಲಕಿಯರು ಸೇರಿದಂತೆ ಒಟ್ಟು 21,817 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಟ್ರ್ಯಾಕ್ ಚೈಲ್ಡ್ ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದು ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಅನುವು ಮಾಡಿಕೊಡುತ್ತದೆ’ ಎಂದು ಅವರು ತಿಳಿಸಿದ್ದಾರೆ.