ಮಟ್ಕಾ ದಂಧೆಗೆ ಲಗಾಮು ಹಾಕುತ್ತಿರುವ ಪೊಲೀಸ್ ಆಯುಕ್ತರ ಕ್ರಮಕ್ಕೆ ವ್ಯಾಪಕ ಶ್ಲಾಘನೆ

ಕರಾವಳಿ

ಇತ್ತ ಕಿಂಗ್ ಪಿನ್ ಗಳನ್ನು ಸೇಫ್ ಜೋನ್ ನಲ್ಲಿಟ್ಟು ಕಮೀಷನರ್ ರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಲೋಕಲ್ ಪೊಲೀಸರು.!

ಮಂಗಳೂರು ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಜೈನ್ ರವರ ಆದೇಶದ ಮೇರೆಗೆ ನಗರದಲ್ಲಿ ವ್ಯಾಪಕವಾಗಿ, ಎಗ್ಗಿಲ್ಲದೆ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳು, ಧೋ ನಂಬರ್ ದಂಧೆಗೆ ಬ್ರೇಕ್ ಬಿದ್ದಿದೆ. ವೇಶ್ಯಾವಾಟಿಕೆ, ಮಸಾಜ್ ಸೆಂಟರ್, ಸ್ಕಿಲ್ ಗೇಮ್ ಗಳು ಮೂಲೆ ಸೇರಿದೆ. ಯಾವುದೇ ಅಕ್ರಮಗಳನ್ನು ಮುಲಾಜಿಲ್ಲದೆ ಸದೆಬಡಿಯುವ ನಿಷ್ಠಾವಂತ ಪೊಲೀಸ್ ಕಮಿಷನರ್ ರವರ ಕ್ರಮಕ್ಕೆ ನಾಗರಿಕ ಸಮಾಜದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಒಳ್ಳೆಯ ಅಧಿಕಾರಿಗಳನ್ನು ರಾಜಕೀಯ ಪುಡಾರಿಗಳು, ಧೋ ನಂಬರ್ ದಂಧೆಕೋರರು,ಮಾಫಿಯಾದ ಕಿಂಗ್ ಪಿನ್ ಗಳು ನಿಲ್ಲುವುದಕ್ಕೆ ಬಿಡುವುದಿಲ್ಲ ಎಂಬುದು ಈ ಹಿಂದೆ ಹಲವು ಬಾರಿ ಸಾಬೀತಾಗಿದೆ.ಈ ಬಾರಿಯು ಕೂಡ ಅದೇ ಆಗುತ್ತಿದೆ. ಕಾಂಗ್ರೆಸ್ ಪ್ರಭಾವಿ ಶಾಸಕರೊಬ್ಬರ ಕುಮ್ಮಕ್ಕು ಹಾಗೂ ದಂಧೆಕೋರರ ಸಹಭಾಗಿತ್ವದಲ್ಲಿ ಕಮೀಷನರ್ ಸಾಹೇಬರ ಎತ್ತಂಗಡಿ ಮಾಡುವ ಷಡ್ಯಂತ್ರ ಬಲು ಜೋರಾಗಿ ನಡೆಯುತ್ತಿದೆ.

ನಗರದ ಹೃದಯ ಭಾಗದಲ್ಲಿ ಮಟ್ಕಾದಂಧೆ ವ್ಯವಸ್ಥಿತವಾಗಿ ನಡೆಯುತ್ತಿದ್ದು,ಮಂಗಳೂರು ಪೊಲೀಸ್ ಕಮೀಷನರ್ ಕುಲ್ ದೀಪ್ ಕುಮಾರ್ ಜೈನ್ ರವರ ಮುತುವರ್ಜಿಯಿಂದ ಅದಕ್ಕೆಲ್ಲ ಬ್ರೇಕ್ ಬಿದ್ದು,ಕಿಂಗ್ ಪಿನ್ ಗಳು ಬಿಲ ಸೇರಿಕೊಂಡಿದ್ದಾರೆ.ಸುರತ್ಕಲ್, ಮಂಗಳೂರು ನಗರ,ತೊಕ್ಕೊಟು, ಉಳ್ಳಾಲದಲ್ಲೂ ಮಟ್ಕಾ ಅಡ್ಡೆಗೆ ದಾಳಿ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ವಿಶೇಷತೆ ಎಂದರೆ ಕಮೀಷನರ್ ರ ಆದೇಶಕ್ಕೂ ಕೆಲವೊಂದು ಲೋಕಲ್ ಪೊಲೀಸರು ‘ಜಾಣ’ ನಡೆ ಪ್ರದರ್ಶಿಸುತ್ತಿದ್ದು, ಮಟ್ಕಾ ಅಡ್ಡೆಗೆ ದಾಳಿ ನಡೆಸಿ ಆಟಗಾರರನ್ನು ಬಂಧಿಸಿ ಕಮೀಷನರ್ ರಿಗೆ ದಾಖಲೆ ತೋರಿಸುತ್ತಾರೆಯೇ ಹೊರತು ಮಟ್ಕಾ ದಂಧೆಯ ಕಿಂಗ್ ಪಿನ್ ಗಳನ್ನು ಹಾಗೆಯೇ ಬಿಟ್ಟು ಕಮೀಷನರ್ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ. ಇದು ದಂಧೆಕೋರರು ಹಾಗೂ ಕೆಲವೊಂದು ಪೊಲೀಸರ ಸಖ್ಯವನ್ನು ಬಯಲು ಮಾಡುತ್ತಿದೆ.

ಮಂಗಳೂರಿನ ಸ್ಕಿಲ್ ಗೇಮ್, ಮಟ್ಕಾದಂಧೆಯ ಕಿಂಗ್ ಪಿನ್ ಯಾರೆಂಬುದು ಪೊಲೀಸರಿಗೆ ಗೊತ್ತಿರದ ಸಂಗತಿಯೇನಲ್ಲ. ಪರ ಊರಿನಿಂದ ಮಂಗಳೂರಿಗೆ ಬಂದು ಇಲ್ಲೆ ಸಟ್ಲ್ ಆಗಿರುವ ಕಿಂಗ್ ಪಿನ್ ನಗರದ ಧೋ ನಂಬರ್ ದಂಧೆಯ ಪ್ರಮುಖ ಕುಳವಾಗಿದ್ದು,ಲೋಕಲ್ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅನ್ನುವ ಮಾತುಗಳು ಕೇಳಿ ಬರುತ್ತಿವೆ. ಜ್ಯೋತಿ, ಹಂಪನಕಟ್ಟೆ, ಸ್ಟೇಟ್ ಬ್ಯಾಂಕ್, ಲಿಂಕಿಂಗ್ ಟವರ್ ನಲ್ಲಿ ಧೋ ನಂಬರ್ ದಂಧೆಯ ಮೂಲಕ ಕೂಡಿ ಹಾಕಿದ ಕಪ್ಪು ಹಣವನ್ನು ವೈಟ್ ಮಾಡಲು ಇದೀಗ ಮಂಗಳೂರಿನಲ್ಲಿ ಬೃಹತ್ ಗಾತ್ರದ ಸೆಂಟರ್ ಒಂದನ್ನು ಹುಟ್ಟು ಹಾಕಿರುತ್ತಾರೆ ಅನ್ನುವ ಗುಸು ಗುಸು ಕೇಳಿ ಬರುತ್ತಿದೆ.

ಪೊಲೀಸರು ಮಟ್ಕಾ ಆಡುವವರನ್ನು,ಚೀಟಿ ಬರೆಯುವ ಬಡಪಾಯಿಗಳನ್ನು ಮಟ್ಟ ಹಾಕಿದರೆ ಸಾಲದು,ಇದರ ಸೂತ್ರಧಾರ ಕಿಂಗ್ ಪಿನ್ ಗಳನ್ನು ಮೊದಲು ಮಟ್ಟ ಹಾಕಿದರೆ ಈ ದಂಧೆಗೆ ಕಡಿವಾಣ ಬೀಳಲು ಮಾತ್ರ ಸಾಧ್ಯ.