ಬಿ.ಸಿ ರೋಡ್ ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಅಪಾಯಕಾರಿ ಹೊಂಡಗುಂಡಿಗಳಿಂದ ವಾಹನ ಸವಾರರಿಗಾಗುವ ಪ್ರಾಣ ಹಾನಿಗಳಿಗೆ ಹೆದ್ದಾರಿ ಪ್ರಾಧಿಕಾರವೇ ನೇರಹೊಣೆ. ಹೆದ್ದಾರಿಯನ್ನು ಆದಷ್ಟು ಬೇಗ ಸರಿಪಡಿಸದಿದ್ದಲ್ಲಿ ಡಿವೈಎಫ್ಐ ಸಂಘಟನೆಯು ಅಲ್ಲಲ್ಲಿ ಹೆದ್ದಾರಿಗಳನ್ನು ತಡೆದು ಸರಣಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಡಿವೈಎಫ್ಐ ನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಸುರತ್ಕಲ್ ನಿಂದ ಬಿಸಿರೋಡ್ ವರೆಗಿನ ಹೆದ್ದಾರಿಯ ಎಲ್ಲಾ ಗುಂಡಿಗಳನ್ನು ಮುಚ್ಚಲು ಒತ್ತಾಯಿಸಿ, ಕೂಳೂರು ನೂತನ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಹಾಗೂ ರಸ್ತೆ ಗುಂಡಿಗೆ ಬಲಿಯಾದ ಟೈಟಸ್ ಫೆರಾವೋ ಕುಟುಂಬಕ್ಕೆ ಪರಿಹಾರ ಧನ ಒದಗಿಸಲು ಬೇಜವಾಬ್ದಾರಿ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಒತ್ತಾಯಿಸಿ ಇಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಕಂಪಾಡಿ ವೃತ್ತದಲ್ಲಿ ನಡೆದ ಪ್ರತಿಭಟನಾ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು.
ಪ್ರತಿವರುಷ ಹೆದ್ದಾರಿ ದುರಸ್ಥಿಗೆಂದು ಮೀಸಲಿರಿಸುವ ಸುಮಾರು 8 ಕೋಟಿ ಹಣವನ್ನು ಹೆದ್ದಾರಿ ಪ್ರಾಧಿಕಾರ ಸರಿಯಾಗಿ ವಿನಿಯೋಗಿಸದೆ ಭ್ರಷ್ಟಾಚಾರಕ್ಕೆ ಬಳಸಲಾಗುತ್ತಿದೆಯೇ ಎಂದು ಆರೋಪಿಸಿದರು. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಗೆ ಅಮಾಯಕ ವಾಹನ ಸವಾರರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು ಅಂತಹ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಒದಗಿಸೋದಾಗಲಿ, ಬೇಜವಾಬ್ದಾರಿಯ ಕಾಮಗಾರಿ ನಡೆಸಿದ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಸುರತ್ಕಲ್ ಟೋಲ್ ತೆರವುಗೊಂಡು ಎಂಟು ತಿಂಗಳು ಕಳೆದರೂ ಇನ್ನೇನು ಬೀಳುವ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ಅದರ ಶೆಡ್ ಗಳನ್ನು ತೆರವುಗೊಳಿಸಲು ಯಾವ ಅಮಾಯಕರ ಪ್ರಾಣ ಬಲಿ ಬೇಕಾಗಿದೆ. ಕೂಳೂರು ಹಳೆ ಸೇತುವೆಯ ಅವಧಿ ಪೂರ್ಣಗೊಂಡಿದ್ದು ಹೊಸ ಸೇತುವ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ 8 ವರುಷ ಸಂದರೂ ಪೂರ್ಣಗೊಳಿಸಲು ಸಾಧ್ಯವಾಗದೆ ಆಮೆ ವೇಗದಲ್ಲಿ ಸಾಗುತ್ತಿದೆ ಜಿಲ್ಲೆಯ ಸಂಸದ ನಳಿನ್ ಕಟೀಲ್ ಮತ್ತು ಶಾಸಕ ಭರತ್ ಶೆಟ್ಟಿ ಹೆದ್ದಾರಿ ರಸ್ತೆ ಸರಿಪಡಿಸುವಲ್ಲಿಯೂ ಗಮನಕೊಡಲಾಗದೆ ಇರುವ ಇವರ ನಡೆ ಸಂಸದ, ಶಾಸಕ ಸ್ಥಾನಕ್ಕೆನೆ ಅಯೋಗ್ಯರೆನಿಸಿಕೊಂಡಿದ್ದಾರೆ ಎಂದು ದೂರಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಬಿ.ಸಿರೋಡ್ ನಿಂದ ಸುರತ್ಕಲ್ ವರೆಗೆ ನಿರ್ಮಾಣಗೊಂಡಿರುವ ಹೆದ್ದಾರಿ ಪ್ರಾರಂಭದ ಹಂತದಲ್ಲೆ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ. ಕುಲಶೇಖರ, ಕುಂಟಿಕಾನ, ಕೊಟ್ಟಾರದ ಮೇಲ್ಸೇತುವೆಗಳನ್ನು ಗಮನಿಸಿದರೆ ಸಾಮಾನ್ಯ ಜನರ ಕಣ್ಣಿಗೆ ರಾಚುತ್ತದೆ. ಅತೀ ಹೆಚ್ಚು ಮಳೆ ಬೀಳುವ ಕರಾವಳಿ ಭಾಗ ಮತ್ತು ಮಲೆನಾಡಿನ ಹೆದ್ದಾರಿಗಳಿಗೆ ಬಾಕಿ ಪ್ರದೇಶಕ್ಕಿಂತಲೂ ಹೆಚ್ವು ಅನುದಾನ ಬಿಡುಗಡೆಗೊಳಿಸೋದು ವಾಡಿಕೆ ಆದರೆ ಅದನ್ನು ಸರಿಯಾಗಿ ಬಳಸದೆ ಭ್ರಷ್ಟರ ಪಾಲಾಗುತ್ತಿದೆ. ಹೆದ್ದಾರಿ ಪಕ್ಕ ಚರಂಡಿಗಳನ್ನು ನಿರ್ಮಿಸದೇ ರಸ್ತೆಯಲ್ಲೆ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗುವುದನ್ನು ಈ ಜಿಲ್ಲೆಯಲ್ಲಿ ಸುರಿದ ಒಂದೆರಡು ಮಳೆಯಲ್ಲೇ ಕಂಡಿದ್ದೇವೆ. ಜನ ಊರಿನ ಅಭಿವೃದ್ಧಿ ಪ್ರಶ್ನೆಗಳಾದ ರಸ್ತೆ ಚರಂಡಿ ಬಗ್ಗೆ ಮಾತಾಡಬಾರದು ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಮತೀಯ ರಾಜಕಾರಣ ನಡೆಸುವ ಸಂಸದ ನಳಿನ್ ಕುಮಾರ್ ಕಟೀಲ್ ನಂತಹ ಬಿಜೆಪಿ ಜನಪ್ರತಿನಿಧಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ.
ಪ್ರತಿಭಟನೆಯಲ್ಲಿ ಡಿವೈಎಫ್ಐ ಘಟಕದ ಸದಸ್ಯರು ಉಪಸ್ಥಿತರಿದ್ದರು.