BIG EXCLUSIVE ಕಡಲ ನಗರಿಯಲ್ಲಿ ದಂಧಾ ಹೈ ದಂಧಾ

ಕರಾವಳಿ

ಕಾಲೇಜು ವಿದ್ಯಾರ್ಥಿಗಳೇ ಟಾರ್ಗೆಟ್.. ಇಂಜೆಕ್ಷನ್ ಚುಚ್ಚಿ ಜೀವ ಕಳೆದುಕೊಳ್ಳುತ್ತಿರುವ ಯುವ ಜನತೆ.!

ಅರೆರೆ ಇದು ಮಂಗಳೂರು..ಕಡಲನಗರಿ.. ಇಲ್ಲಿ ಮೀನು ಹೇಗೆ ಸುಲಭದಲ್ಲಿ ಸಿಗುತ್ತದೋ ಅದೇ ರೀತಿ ಮಾದಕ ದ್ರವ್ಯಗಳು, ಹೆರಾಯಿನ್, ಬ್ರೌನ್ ಶುಗರ್ ಗಳೆಲ್ಲವೂ ಅಷ್ಟೇ ಸುಲಭವಾಗಿ ಜನರ ಕೈಗೆ ಸಿಗುತ್ತಿದೆ. ಡ್ರಗ್ಸ್ ದಂಧೆಕೋರರದ್ದು ಚೈನ್ ಸಿಸ್ಟಮ್ ರೀತಿ. ಇದಕ್ಕೊಂದು ಬಾಸ್.. ಅದನ್ನು ಸಪ್ಲೈ ಮಾಡುವ ಮಧ್ಯವರ್ತಿಗಳು.. ಡ್ರಗ್ಸ್ ಅಮಲೇರಿಸುವ ತಂಡ ಮತ್ತೊಂದು. ಪೊಲೀಸ್ ಇಲಾಖೆ ಕೆಲವೊಮ್ಮೆ ಡ್ರಗ್ಸ್ ಅಮಲಿನಲ್ಲಿರುವವರನ್ನು ಹಿಡಿದು ಬೆಂಡೆತ್ತುತ್ತದೆಯೋ ಹೊರತು ಮಧ್ಯವರ್ತಿಗಳು, ಬಾಸ್ ಗಳನ್ನು ಮುಟ್ಟಲು ಹೋಗುವುದಿಲ್ಲ. ಕೆಲವೊಮ್ಮೆ ಪೊಲೀಸ್ ಇಲಾಖೆಗೂ ಧರ್ಮ ಸಂಕಟ.! ಯಾರಾದರೂ ಪೊಲೀಸರಿಗೆ ಮಾಹಿತಿ ನೀಡಿದರೆ ಮಾಹಿತಿ ನೀಡಿದವರ ವಿವರಗಳನ್ನು ಚಾಚೂ ತಪ್ಪದೆ ಡ್ರಗ್ಸ್ ಬಾಸ್ ಗಳ ಪಾದಕ್ಕೆ ಕೆಲವೊಂದು ‘ಪೋಲಿ’ ಸರು ಸಮರ್ಪಿಸುತ್ತಿದ್ದಾರಂತೆ.! ಡ್ರಗ್ಸ್, ಗಾಂಜಾ ದಂಧೆ ಮಟ್ಟ ಹಾಕಬೇಕೆಂದು ನಾಗರಿಕ ಸಮಾಜ ಬೊಬ್ಬೆ ಹೊಡೆಯುತ್ತಲೇ ಇದೆ.ಇತ್ತ ಇಲಾಖೆ, ಡ್ರಗ್ಸ್ ಪೆಡ್ಲರ್ ಗಳನ್ನು ಬಂದಿಸುತ್ತದೆ.ಮೂಲ ಸ್ಥಾನಕ್ಕೆ ಮುಟ್ಟುವುದಿಲ್ಲ.

ಡ್ರಗ್ಸ್ ದಂಧೆಕೋರರಿಗೆ ಸುಲಭವಾಗಿ ತುತ್ತಾಗುತ್ತಿರುವುದು ಕಾಲೇಜು ವಿದ್ಯಾರ್ಥಿಗಳು ಹಾಗೂ ಯಾವುದೇ ಕೆಲಸವಿಲ್ಲದ ಆಪಾಪೋಲಿಗಳು. ದಂಧೆಕೋರರು ಇವರನ್ನು ಮಧ್ಯವರ್ತಿಗಳನ್ನಾಗಿ ಬಳಸುತ್ತಾರೆ. ಕಾಲೇಜು ವಿದ್ಯಾರ್ಥಿಗಳು ಪಾಕೆಟ್ ಮನಿಗಾಗಿ ಬೇಗನೆ ಆಕರ್ಷಿತರಾಗುತ್ತಾರೆ. ಯಾವುದೇ ಕೆಲಸವಿಲ್ಲದ ನಿರುದ್ಯೋಗಿಗಳು ಕೈ ತುಂಬಾ ಹಣ ಸಿಗುತ್ತದೆ ಅನ್ನುವ ಕಾರಣಕ್ಕೆ ಈ ದಂಧೆಯ ಭಾಗಗಳಾಗುತ್ತಾರೆ. ಒಮ್ಮೆ ಈ ದಂಧೆಗೆ ಸಿಲುಕಿಕೊಂಡರೆ ಮುಗೀತು. ಅಲ್ಲಿಂದ ಹೊರಬರುವುದು ಸಾಧ್ಯವೇ ಇಲ್ಲ ಅನ್ನುವ ಪರಿಸ್ಥಿತಿ ಉದ್ಭವಿಸುತ್ತದೆ.

ಹದಿ ಹರೆಯದ ಯುವಕರನ್ನು ಟಾರ್ಗೆಟ್ ಮಾಡಲಾಗುತ್ತದೆ. ಮೊದಮೊದಲು ಸಿಗರೇಟು ಸೇದುವ ಈ ಯುವಕರು, ನಂತರ ಈ ಸಿಗರೇಟಿಗೆ ಡ್ರಗ್ಸ್ ತುಂಬಿಸಿ ಎಳೆಯುತ್ತಾರೆ. ಆ ನಂತರ ಇವರಿಗೆ ಇದು ಚಟವಾಗಿ ಮಾರ್ಪಾಡುತ್ತದೆ. ಗಮ್ ಎಳೆಯುತ್ತಾರೆ,ಕೆಲವು ಮೆಡಿಕಲ್ ನಿಂದ ದೊರೆಯುವ ಸಿರಫ್ ಕುಡಿಯುತ್ತಾರೆ,ಕೊನೆಗೆ ಇಂಜೆಕ್ಷನ್ ಚುಚ್ಚಿ ಕೊಳ್ಳುತ್ತಾರೆ. ಡ್ರಗ್ಸ್ ಸಿಗದಿದ್ದರೆ ಇವರಿಗೆ ಬದುಕೇ ಇಲ್ಲ ಅನ್ನುವ ರೀತಿಯಲ್ಲಿ ಬದಲಾಗುತ್ತಾರೆ. ಒಂದೆಡೆ ಮನೆಯಿಂದ ತಿರಸ್ಕಾರಗೊಳ್ಳುತ್ತಾರೆ, ಮತ್ತೊಂದೆಡೆ ಸಮಾಜದಿಂದಲೂ ದೂರವಾಗುತ್ತಾರೆ.ಇಂಜೆಕ್ಷನ್ ಚುಚ್ಚಿ ಚುಚ್ಚಿ ಕೊನೆಗೆ ಹದಿಹರೆಯದಲ್ಲಿಯೇ ಪ್ರಾಣ ಕಳೆದುಕೊಳ್ಳುತ್ತಾರೆ, ಕೆಲವರಂತೂ ಸುಸೈಡ್ ಮಾಡಿಕೊಳ್ಳುತ್ತಾರೆ.

ಮುಸ್ಲಿಂ ಬಾಹುಳ್ಯ ಪ್ರದೇಶಗಳನ್ನೇ ಟಾರ್ಗೆಟ್ ಮಾಡಿಕೊಂಡು ದಗಾಕೋರರು ತಮ್ಮ ದಂಧೆಯನ್ನು ವಿಸ್ತರಿಸುತ್ತಾರೆ. ಕೇವಲ ಯುವಕರು ಮಾತ್ರವಲ್ಲ ಯುವತಿಯರು ಕೂಡ ಈ ದಂಧೆಯಲ್ಲಿ ಭಾಗಿಯಾಗಿರುತ್ತಾರೆ ಅನ್ನುವ ಸ್ಪೋಟಕ ಮಾಹಿತಿಗಳು ಇವೆ. ಡ್ರಗ್ಸ್ ದಂಧೆಗೆ ಬಳಸಿಕೊಂಡು ಕೊನೆಗೆ ಸೆಕ್ಸ್ ಗಾಗಿ ಬಳಸಿಕೊಳ್ಳುವ ಜಾಲವು ಸಕ್ರೀಯವಾಗಿದೆ.

ಇತ್ತೀಚೆಗೆ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಉಪನ್ಯಾಸಕರೇ ಇಂತಹ ದಂಧೆಯಲ್ಲಿ ಭಾಗಿಯಾಗಿ ಸಿಕ್ಕಿ ಹಾಕಿಕೊಂಡ ಪ್ರಕರಣ ಇಡೀ ಕಡಲ ನಗರಿಯನ್ನು ತಲೆ ತಗ್ಗಿಸುವಂತೆ ಮಾಡಿದೆ.ಬುದ್ಧಿವಂತರೆ ಇಂತಹ ದಂಧೆಯಲ್ಲಿ ಶಾಮೀಲಾಗಿರುವುದು ನಮ್ಮ ಸಮಾಜ ಎತ್ತ ಸಾಗುತ್ತಿದೆ ಅನ್ನುವುದಕ್ಕೆ ಸಾಕ್ಷಿಯಾಗಿದೆ. ಕಡಲ ನಗರಿಯಲ್ಲಿ ಇದೀಗ ಮಾದಕ ವಸ್ತು ಮಿಶ್ರಿತ ಚಾಕೋಲೇಟ್ ಬಯಲಿಗೆ ಬಂದಿದ್ದು,ಗೂಡಂಗಡಿಯಲ್ಲಿ “ಮಹಾಶಕ್ತಿ ಮುನಕ್ಕಾ”, “ಬಮ್ ಬಮ್ ಮುನಕ್ಕಾ ವಟಿ” “ಪಾವರ್ ಮುನಕ್ಕಾ ವಟಿ” ಹಾಗೂ “ಆನಂದ ಚೂರ್ಣ ಎಂದು ನಮೂದು ಇರುವ ಚಾಕೊಲೇಟ್​ಗಳಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಆರೋಪಿ ಮನೋಹರ್ ಶೇಟ್ ಸಹಿತ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಕಡಲ ನಗರಿ ಇದೀಗ ಡ್ರಗ್ಸ್ ಪೆಡ್ಲರ್ ಗಳ ಸ್ವರ್ಗವಾಗಿ ಬದಲಾಗಿದೆ. ದಗಾಕೋರರನ್ನು ಮಟ್ಟ ಹಾಕಲು ಪೊಲೀಸರಿರೊಂದಿಗೆ ನಾಗರಿಕ ಸಮಾಜ ಕೈಜೋಡಿಸಿ ಈ ದಂಧೆಯನ್ನು ನಿರ್ಮೂಲನ ಮಾಡಬೇಕಾದ ಜವಾಬ್ದಾರಿಯಿದೆ. ಮಾನ್ಯ ಪೊಲೀಸ್ ಆಯುಕ್ತರಾದ ಕುಲ್ ದೀಪ್ ಕುಮಾರ್ ಜೈನ್ ರವರು ದಕ್ಷ, ಪ್ರಾಮಾಣಿಕರು. ಡ್ರಗ್ಸ್ ದಂಧೆಯ ಬೆನ್ನು ಮೂಳೆ ಮುರಿಯುವ ಕೆಲಸಕ್ಕೆ ಮುಂದಾಗಬೇಕಿದೆ.