ಇಂದು ಶಿಲ್ಪ,ನಾಳೆ ನಮ್ಮ ಮನೆಯ ಹೆಣ್ಣು ಮಗಳು.! ಎ.ಜೆ ಆಸ್ಪತ್ರೆಯ ನಿರ್ಲಕ್ಷ, ಬೇಜಾವಾಬ್ದಾರಿಗೆ ಅಮಾಯಕ ಹೆಣ್ಣು ಮಗಳು ಬಲಿ.!

ಕರಾವಳಿ

ಸಂತೋಷ್ ಬಜಾಲ್ ಕಾರ್ಯದರ್ಶಿ,ಡಿವೈಎಫ್ಐ ದ.ಕ

ಇತ್ತೀಚೆಗೆ ವ್ಯಾಪಕ ಚರ್ಚೆಗೊಳಗಾದ ಮಂಗಳೂರಿನ ಎ‌.ಜೆ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣುಮಗಳೊಬ್ಬಳ ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯಿಂದಾದ ಎಡವಟ್ಟಿಗೆ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ ಶಿಲ್ಪ ಆಚಾರ್ಯ ಇಂದು ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಗೆ ಹೆರಿಗೆಗಾಗಿ ದಾಖಲಾಗಿ 25 ದಿನಗಳು ಕಳೆದಿದೆ. ಮನೆಯಲ್ಲಿ ಶಿಲ್ಪಳಾ 12 ವರುಷದ ಹೆಣ್ಣು ಮಗಳಾದ ನಮೃತ ತನ್ನ ತಾಯಿ ಮತ್ತು ಜನಿಸಿದ ಮುದ್ದು ತಂಗಿಯ ಜೊತೆ ಒಂದೆರಡು ದಿನದಲ್ಲಿ ಮರಳಿ ಮನೆಗೆ ಬರಬಹುದೆಂದು ಕಾಯುತ್ತಾ ಕುಳಿತಿದ್ದಾಳೆ. ಅಮ್ಮ ಯಾವಾಗ ಮನೆ ಬರುತ್ತಾರೆಂದು ದಿನಾ ವಿಚಾರಿಸುವ ಹಿರಿಯ ಮಗಳಿಗೆ ಇವತ್ತು ನಾಳೆ ಎಂದು ಕಳೆದ 25 ದಿನಗಳಿಂದ ಮನೆಮಂದಿ ಸಮಾಧಾನ ಪಡಿಸಿದರೂ ಆ ಮಗಳು ತನ್ನ ತಾಯಿ ಮತ್ತು ಜನಿಸಿದ ತಂಗಿಯ ಮುಖ ನೋಡುವ ತವಕದಲ್ಲಿ ದಿನಾ ಕೊರಗಿ ಕೊರಗಿ ಬೇಸತ್ತು ನಿರಾಶಾಳಾಗಿದ್ದಾಳೆ. ಇವತ್ತಲ್ಲ ನಾಳೆ ಗುಣ ಹೊಂದಬಹುದೆಂದು ಶಿಲ್ಪಳಾ ತಂದೆ, ತಾಯಿ, ಸಹೋದರ, ಗಂಡ ಆಸ್ಪತ್ರೆಯ ಬಾಗಿಲ ಬಳಿ ಕಾಯುತ್ತಾ ಕುಳಿತಿದ್ದಾರೆ.

ಪ್ರಕರಣ ಬೆಳಕಿಗೆ ಬಂದು ವ್ಯಾಪಕ ಚರ್ಚೆಗೊಳಗಾದರೂ ಜಿಲ್ಲಾಡಳಿತ, ಆರೋಗ್ಯ ಇಲಾಖೆ , ಸರಕಾರ, ಆರೋಗ್ಯ ಮಂತ್ರಿಗಳಿಗೆ ಬಡವರ ಕೂಗೂ ಕೇಳಲೇ ಇಲ್ಲ. ಸರಕಾರಗಳು ಬದಲಾದರೂ ಖಾಸಗೀ ಆಸ್ಪತ್ರೆಗಳ ಬಡವರ ಬಗೆಗಿನ ನಿರ್ಲಕ್ಷ್ಯ, ಬೇಜವಾಬ್ದಾರಿ, ಲೂಟಿಕೋರ ನೀತಿಗಳಿಗೆ ಕಡಿವಾಣ ತರಲು ಈ ಸರಕಾರಗಳಿಗೂ ಎದೆಗಾರಿಕೆ ಇಲ್ಲ. ಬಡವರ ಕಾಳಜಿ, ಏಳಿಗೆಗಳೆಲ್ಲವೂ ಬರಿಯ ಚುನಾವಣಾ ರಾಜಕೀಯಕಷ್ಟೇ ಸೀಮಿತ ಇಲ್ಲಿ ಆಡಳಿತ ದರಬಾರುಗಳೆಲ್ಲವೂ ಧಣಿಕರ ಕೈಯೊಳಗಷ್ಟೆ.

ಅನ್ಯಾಯ, ದಬ್ಬಾಳಿಕೆ ,ದೌರ್ಜನ್ಯ ಅದರಷ್ಟಕ್ಕೆ ಕೊನೆಯಾಗೋದಿಲ್ಲ ಅದರ ವಿರುದ್ಧ ಸಂಘಟಿತ ದ್ವನಿಮೊಳಗಬೇಕು. ಇಂದು ಶಿಲ್ಪ ನಾಳೆ ನಮ್ಮ ಮನೆಯ ಹೆಣ್ಣು ಮಗಳು ಬಲಿಯಾಗೋದಕ್ಕಿಂತ ಮುಂಚೆ ಎಚ್ಚರಗೊಳ್ಳೋಣ.