ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಎ.ಜೆ ಆಸ್ಪತ್ರೆ ಮುಂದೆ ಪ್ರತಿಭಟನೆ

ಕರಾವಳಿ

ನುರಿತ ವೈದ್ಯರುಗಳ ತಂಡದಿಂದ ಶಿಲ್ಪಾ ಸಾನಿನ ಸಮಗ್ರ ತನಿಖೆಗೆ ತಂಡ ರಚನೆ.ಪ್ರತಿಭಟನೆಗೆ ಮಣಿದ ಜಿಲ್ಲಾಢಳಿತ

✍️. ಸಂತೋಷ್ ಬಜಾಲ್

ಮಂಗಳೂರು: ಹೆರಿಗೆಗಾಗಿ ನಡೆದ ಶಸ್ತ್ರಚಿಕಿತ್ಸೆಯ ವೇಳೆ ಎಡವಟ್ಟಾಗಿ ಗರ್ಭಕೋಶವನ್ನು ಕಳೆದುಕೊಂಡಿದ್ದಲ್ಲದೆ ಮೆದುಳು ನಿಷ್ಕ್ರಿಯಗೊಂಡು ಕೋಮಕ್ಕೆ ತೆರಳಿದ್ದ ಬೆಳ್ತಂಗಡಿಯ ವೇಣೂರು ಬಳಿಯ ಶಿಲ್ಪಾ ಆಚಾರ್ಯ (36) ಮಂಗಳವಾರ ಮೃತಪಟ್ಟಿದ್ದಾರೆ. ಶಿಲ್ಪಾ ಅವರು ನಗರದ ಖಾಸಗಿ ಆಸ್ಪತ್ರೆಯಾದ ಎ.ಜೆ. ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಜುಲೈ 2 ರಂದು ಹೆರಿಗೆಗೆಂದು ದಾಖಲಾಗಿದ್ದರು. ಆದರೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಕೋಮಕ್ಕೆ ತೆರಳಿದ್ದರು. ಇದಾಗಿ ಸುಮಾರು 25 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಶಿಲ್ಪಾ, ಮಂಗಳವಾರ ಮಧ್ಯಾಹ್ನ 3:30ರ ಹೊತ್ತಿಗೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಶಿಲ್ಪಾ ಅವರ ಪತಿ ಪ್ರದೀಪ್ ಡಿ. ಹೇಳಿದ್ದು, ತಮ್ಮ ಪತ್ನಿಯ ಸಾವಿಗೆ ನ್ಯಾಯ ಕೊಡಿಸುವಂತೆ ಅವರು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಿಲ್ಪಾ ಅವರ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಆಸ್ಪತ್ರೆ ಮುಂದೆ ಜಮಾವಣೆಗೊಂಡು ನ್ಯಾಯಾಕ್ಕಾಗಿ ಆಗ್ರಹಿಸಿದ್ದಾರೆ. ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಜಿಲ್ಲಾ ಆರೋಗ್ಯಾಧಿಕಾರಿ ಕಿಶೋರ್ ಕುಮಾರ್ ಸಹಿತ ಇತರೆ ಸರಕಾರಿ ವೈದ್ಯರ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.

ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸಲು ಆಡಳಿತ ಮಂಡಳಿ ಒಪ್ಪದ ಹಿನ್ನಲೆಯಲ್ಲಿ ಶಿಲ್ಪಾ ಅವರ ಸಾವಿಗೆ ನ್ಯಾಯಕ್ಕೆ ಆಗ್ರಹಿಸಿ ಆಸ್ಪತ್ರೆಯ ಮುಂದೆ ಡಿವೈಎಫ್‌ಐ ಮತ್ತು ವಿಶ್ವಕರ್ಮ ಸಮುದಾಯದ ಸಂಘಟನೆಗಳು ಧರಣಿಯನ್ನು ಮುಂದುವರಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನೆಯ ನೇತೃತ್ವವಹಿಸಿದ ನಿಯೋಗವನ್ನು ಕರೆಸಿ ಅಪರ ಜಿಲ್ಲಾಧಿಕಾರಿ ಡಾ ಸಂತೋಷ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ ಕಿಶೋರ್ ಕುಮಾರ್, ಡಾ ರಾಜೇಶ್ ಸಮ್ಮುಖದಲ್ಲಿ ಸಭೆ ನಡೆಸಿದರು ಸಾವಿನ ಬಗ್ಗೆ ತಜ್ಞ ವೈದ್ಯರ ಸಮಿತಿಯಿಂದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ. ಈಗಾಗಗಲೇ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಆಕ್ರೋಶದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸ್ವಯಂ ಪ್ರೇರಿತ ಸರಕಾರಿ ನುರಿತ ವೈದ್ಯರುಗಳ ತಂಡದಿಂದ ಸಮಗ್ರ ತನಿಖೆ ನಡೆಸಲು ನಿಯೋಜಿಸಲಾಗಿದೆ.( ತಂಡದಲ್ಲಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ ದುರ್ಗಾ ಪ್ರಸಾದ್, ಸ್ತ್ರೀ ರೋಗ ತಜ್ಞರಾದ ಡಾ ಶ್ರದ್ದಾ ಶೆಟ್ಟಿ, ವೆನ್ಲಾಕ್ ಆಸ್ಪತ್ರೆ ಶಸ್ತ್ರಚಿಕಿತ್ಸಕರಾದ ಡಾ.ಜ್ಯೋತಿ, ನರ ತಜ್ಞ ಡಾ ಶಿವಾನಂದ ಪೈ, ಅರಿವಳಿಕೆ ತಜ್ಞ ಡಾ ರಂಜನ್ ಇರಲಿದ್ದಾರೆ. )

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಶಿಲ್ಪಾ ಸಾವಿನ ಸಮಗ್ರ ತನಿಖೆ ನಡೆಸುವುದರ ಜೊತೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯಯುತ ಪರಿಹಾರ ನೀಡುವಂತೆ ಕ್ರಮಕೈಗೊಳ್ಳಲು ಒತ್ತಾಯಿಸಿದರು. ಇಂತಹ ಪ್ರಕರಣಗಳು ದಿನನಿತ್ಯ ನಡೆಯುತ್ತಿದ್ದು ಖಾಸಗೀ ಮೆಡಿಕಲ್ ಕಾಲೇಜುಗಳ ತಪ್ಪಾದ ಚಿಕಿತ್ಸಾ ಕ್ರಮ ಹಾಗೂ ದುಬಾರಿ ಶುಲ್ಕಗಳಿಗೆ ಸತಾಯಿಸುವ ಕ್ರಮಗಳಿಗೆ ಕಡಿವಾಣಕ್ಕೆ ಆಗ್ರಹಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಡಾ ಸಂತೋಷ್ ಕುಮಾರ್ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಪರಿಹಾರಕ್ಕೆ ಸಂಬಂಧಿಸಿದ ತೀರ್ಮಾನಕ್ಕೆ ಮಾತುಕತೆ ನಡೆಸಲಾಗುವುದು. ಇಂದು ಮುಖ್ಯಮಂತ್ರಿಗಳ ಜೊತೆ ನಡೆಯಲಿರುವ ವಿಡಿಯೋ ಕಾನ್ಪರೆನ್ಸ್ ಸಭೆಯಲ್ಲಿ ಅವರ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಹಾಗೂ ಖಾಸಗೀ ಆಸ್ಪತ್ರೆ ಮತ್ತು ಮೆಡಿಕಲ್‌ ಕಾಲೇಜುಗಳಿಗೆ ಕೆಪಿಎಮ್ಇ ನಿಯಮಗಳ ಪ್ರಕಾರ ನಡೆದುಕೊಳ್ಳಲು ಸೂಚನೆ ನೀಡಲಾಗುವುದು ತಪ್ಪಿದ್ದಲ್ಲಿ ಅಂತಹ ಆಸ್ಪತ್ರೆ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಹೋರಾಟಗಾರರ ನಿಯೋಗದಲ್ಲಿ ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್ , ಮಹಿಳಾಪರ ಹೋರಾಟಗಾರ್ತಿ ಪವಿತ್ರಾ ಆಚಾರ್ಯ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.