ಒಂದಲ್ಲ.. ಎರಡಲ್ಲ.. ಪ್ರತಿ ಬಾರಿಯೂ ಬಿಜೆಪಿಯನ್ನು ಮಣ್ಣು ಮುಕ್ಕಿಸುವಲ್ಲಿ ಪುತ್ತಿಲ ಆಂಡ್ ಟೀಂ ಸಫಲವಾಗಿದೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಸಕ್ರೀಯವಾಗಿ ರಾಜಕಾರಣಕ್ಕೆ ಇಳಿದಿರುವ ಪುತ್ತಿಲ ಆಂಡ್ ಟೀಂ, ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ತೊಡೆ ತಟ್ಟುತ್ತಾ ಬಿಜೆಪಿಗೆ ಟಕ್ಕರ್ ಕೊಡುವಲ್ಲಿ ಯಶಸ್ವಿಯಾಗಿದೆ.
ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಉಮೇದುದಾರರಾಗಿದ್ದ ಅರುಣ್ ಕುಮಾರ್ ಪುತ್ತಿಲರಿಗೆ ಬಿಜೆಪಿಯಿಂದ ಟಿಕೆಟ್ ತಪ್ಪಿಸಿ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಇದರಿಂದ ಕೆರಳಿದ ಪುತ್ತಿಲ ಆಂಡ್ ಟೀಂ ಬಂಡಾಯವಾಗಿ ಸ್ಪರ್ಧಿಸಿ ಕೂದಲೆಳೆಯ ಅಂತರದಲ್ಲಿ ಸೋತಿದ್ದರು. ಬಿಜೆಪಿ ಅಭ್ಯರ್ಥಿಗೆ ದಕ್ಕಿದ್ದು ಮೂರನೇ ಸ್ಥಾನ.
ವಿಧಾನಸಭಾ ಚುನಾವಣೆಯಲ್ಲಿ ಸೋತು ಗೆದ್ದ ಪುತ್ತಿಲ ತಮ್ಮದೇ ಆದ ‘ಪುತ್ತಿಲ ಪರಿವಾರ’ ಸ್ಥಾಪಿಸಿ ಕರಾವಳಿಯಾದ್ಯಂತ ಮನೆಮಾತಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಟಾಂಗ್ ಕೊಟ್ಟು ಗಲ್ಲಿಗಳಲ್ಲಿ ಪುತ್ತಿಲ ಪ್ಲೆಕ್ಸ್ ರಾರಾಜಿಸಿತ್ತು.
ಇದೀಗ ಪುತ್ತೂರಿನಲ್ಲಿ ನಡೆದ ಎರಡು ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ನಿಡ್ಪಳ್ಳಿ ಕ್ಷೇತ್ರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ವಿಜಯ ದೊರಕಿದರೆ, ಆರ್ಯಾಪು ಕ್ಷೇತ್ರದಲ್ಲಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ಗೆಲುವಿನ ನಗೆ ಬೀರಿದ್ದಾರೆ. ವಿಶೇಷತೆ ಏನೆಂದರೆ ಪುತ್ತಿಲ ಪರಿವಾರದ ಹೊಡೆತಕ್ಕೆ ಎರಡು ಕ್ಷೇತ್ರದಲ್ಲೂ ಬಿಜೆಪಿ ಮುಗ್ಗರಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಪುತ್ತೂರಿನಲ್ಲಿ ಗ್ರಾಮ ಪಂಚಾಯತ್ ಉಪಚುನಾವಣೆಯಲ್ಲಿ ಬಿಜೆಪಿಗೆ ದೊರೆತ ಹೀನಾಯ ಸೋಲು ರಾಜ್ಯಾಧ್ಯಕ್ಷ ಸಹಿತ ಕೆಲವೊಂದು ಮುಖಂಡರಿಗೆ ಮುಖಭಂಗ ಉಂಟುಮಾಡಿದೆ. ಪುತ್ತಿಲ ಸೈನ್ಯದ ಎದುರು ಯಾವುದೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸಿದಂತಾಗಿದೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬದಲಾಯಿಸುವ ಅನಿವಾರ್ಯತೆಗೆ ಸಿಲುಕಿದೆ. ಇಲ್ಲವಾದರೆ ಕರಾವಳಿಯಾದ್ಯಂತ ಪುತ್ತಿಲ ಹವಾ ಎದ್ದು ಬಿಜೆಪಿ ಭದ್ರಕೋಟೆಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಾರ್ಯಕರ್ತರ ನಡುವೆ ಪುತ್ತಿಲ ನಾಯಕತ್ವ ಮತ್ತೊಮ್ಮೆ ಸೈ ಎನಿಸಿದೆ. ಬಿಜೆಪಿ ಪುತ್ತಿಲ ಪರಿವಾರಕ್ಕೆ ಮಂಡಿಯೂರುತ್ತೊ ಮುಂದಿನ ದಿನಗಳಲ್ಲಿ ಕಾದುನೋಡಬೇಕಿದೆ.