ಉಡುಪಿ: ಕೋಮು ತಲ್ಲಣ ಸೃಷ್ಟಿಸಿದ ಸ್ವಯಂ ಘೋಷಿತ ಹಿಂದೂ ಹೋರಾಟಗಾರ್ತಿ ರಶ್ಮಿ ಸಾವಂತ್ ಳ ಟ್ವಿಟ್ಟರ್ ಪೋಸ್ಟ್

ಕರಾವಳಿ

ಕಳೆದ ಬಾರಿ ಹಿಜಾಬ್, ಈ ಬಾರಿ ಸ್ನಾನಗೃಹದ ವೀಡಿಯೋ; ಏನಿದರ ವಾಸ್ತವಾಂಶ

ಕರಾವಳಿ ಹೇಳಿ ಕೇಳಿ ಮತೀಯವಾದದ ತವರೂರು. ಒಂದು ಕ್ಷುಲ್ಲಕ ಘಟನೆ ಎರಡು ಸಮುದಾಯಗಳ ನಡುವೆ ಮತೀಯ ಗಲಭೆಗೆ ಕಾರಣವಾದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಅದರಲ್ಲೂ ಉಡುಪಿ ಕಳೆದ ಬಾರಿ ಹಿಜಾಬ್ ವಿಚಾರದಲ್ಲಿ ದೇಶದಾದ್ಯಂತ ಸುದ್ದಿಯಾಗಿತ್ತು. ರಾಜ್ಯಾದಾದ್ಯಂತ ವಿವಾದದ ಕಿಡಿ ಹೊತ್ತಿ ಉರಿಯಲು ಕಾರಣವಾಗಿತ್ತು. ಅದೇ ಉಡುಪಿಯಲ್ಲಿ ಈ ಬಾರಿ ಮುಸ್ಲಿಂ ವಿದ್ಯಾರ್ಥಿನಿಯರು ಶೌಚಾಲಯದಲ್ಲಿ ವಿಡಿಯೋ ಕ್ಯಾಮೆರಾ ಇಟ್ಟು ಹಿಂದೂ ವಿದ್ಯಾರ್ಥಿನಿಯರ ಖಾಸಗಿ ಭಾಗಗಳನ್ನು ರೆಕಾರ್ಡ್ ಮಾಡಿದ್ದಾರೆ ಅನ್ನುವ ವಿವಾದ ಬಲು ದೊಡ್ಡ ಸುದ್ದಿಯಾಗಿತ್ತು. ಕಳೆದ ಒಂದು ವಾರದಿಂದ ಈ ವಿವಾದ ದೊಡ್ಡ ಮಟ್ಟಿನ ಸುದ್ದಿಗೆ ಗ್ರಾಸವಾಗಿತ್ತು.

ಇಂತಹದ್ದೊಂದು ವಿವಾದ ಬಯಲಿಗೆ ಬರಲು ಮುಖ್ಯ ಕಾರಣ ಸ್ವಯಂ ಘೋಷಿತ ಹಿಂದೂ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾವಂತ್ ಳ ಟ್ವಿಟ್ಟರ್ ಪೋಸ್ಟ್. ಪ್ಯಾರಾ ಮೆಡಿಕಲ್ ಕಾಲೇಜಿನ ಮೂವರು ಮುಸ್ಲಿಂ ವಿದ್ಯಾರ್ಥಿನಿಯರು ಫ್ರ್ಯಾಂಕ್ ವಿಡಿಯೋದ ಭಾಗವಾಗಿ ಸ್ನಾನಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋಗಳನ್ನು ಮಾಡಿದ್ದಾರೆ ಅನ್ನುವ ಬಗ್ಗೆ ಟ್ವಿಟ್ಟರ್ ಪೋಸ್ಟ್ ಎರಡು ಸಮುದಾಯಗಳ ನಡುವೆ ಉದ್ವಿಗ್ನತೆ ಸೃಷ್ಟಿಸಲು ಕಾರಣವಾಗಿತ್ತು. ಆದರೆ ಇದೀಗ ಉಡುಪಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

ಉಡುಪಿ ಪೊಲೀಸರು ಮೂವರು ಆರೋಪಿ ವಿದ್ಯಾರ್ಥಿನಿಯರು “ನೂರಾರು ಹಿಂದೂ ಹುಡುಗಿಯರ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ತಮ್ಮ ಕಾಲೇಜಿನ ಮಹಿಳಾ ಶೌಚಾಲಯಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದಾರೆ. ಚಿತ್ರೀಕರಿಸಿದ ವಿಡಿಯೋಗಳು ಮತ್ತು ಫೋಟೋಗಳನ್ನು ಮುಸ್ಲಿಂ ವಿದ್ಯಾರ್ಥಿನಿಯರು ಸಮುದಾಯದ ವಾಟ್ಸಾಪ್ ಗುಂಪುಗಳಲ್ಲಿ ಹಂಚಿದ್ದಾರೆ” ಎಂದು ರಶ್ಮಿ ಸಾಮಂತ್ ಟ್ವೀಟ್ ಮಾಡಿದ್ದರು. ಆದರೆ, ಇವುಗಳನ್ನೆಲ್ಲಾ ಸ್ವತಃ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ಅವರೇ ತಳ್ಳಿ ಹಾಕಿದ್ದಾರೆ.

ಪತ್ರಿಕಾಗೋಷ್ಠಿ ಕರೆದು ಸಾಮಾಜಿಕ ಮಾಧ್ಯಮದಲ್ಲಿ ಹರಡಲಾಗುತ್ತಿದ್ದ ವದಂತಿಗಳನ್ನು ಎಸ್‌ಪಿ ನಿರಾಕರಿಸಿದ್ದು, ಆರೋಪಿ ವಿದ್ಯಾರ್ಥಿನಿಯರು ಹಾಗೂ ಚಿತ್ರೀಕರಿಸಿದ ಹುಡುಗಿ ಪರಿಚಯಸ್ಥರಾಗಿದ್ದು, ತಮಾಷೆಗಾಗಿ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ, ಆರೋಪಿತ ವಿದ್ಯಾರ್ಥಿನಿಯರು ನಂತರ ವೀಡಿಯೊವನ್ನು ಅಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಅಷ್ಟು ಮಾತ್ರವಲ್ಲದೆ, ಯಾರಿಗೂ ಬ್ಲ್ಯಾಕ್ ಮೇಲ್ ಮಾಡಿಲ್ಲ ಅಥವಾ ಕಿರುಕುಳ ನೀಡಿಲ್ಲ ಎಂದು ಎಸ್ಪಿ ಹೇಳಿದ್ದಾರೆ. ರೆಸ್ಟ್ ರೂಂನಲ್ಲಿ ಯಾವುದೇ ಹಿಡನ್ ಕ್ಯಾಮೆರಾಗಳನ್ನು ಇರಿಸಲಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

ಕಾಲೇಜಿನ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಬಂದಿರುವ ಹೇಳಿಕೆಗಳನ್ನು ನಿರಾಕರಿಸಿದ್ದು, ಈ ಹಿಂದೆ ಕಾಲೇಜಿನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ. ಆರೋಪಗಳೆಲ್ಲವೂ ಆಧಾರರಹಿತವಾಗಿವೆ ಎಂದು ಹೇಳಿದ್ದಾರೆ.

ಟ್ವಿಟ್ಟರ್ ಪೋಸ್ಟ್ ಮಾಡಿದ ಸ್ವಯಂ ಘೋಷಿತ ಹಿಂದೂ ಹಕ್ಕುಗಳ ಹೋರಾಟಗಾರ್ತಿ ರಶ್ಮಿ ಸಾವಂತ್ ಮೂಲತಃ ಉಡುಪಿಯವಳಾಗಿದ್ದು, ಈ ಹಿಂದೆಯೂ ಅನೇಕ ಬಾರಿ ಸುಳ್ಳು ಪೋಸ್ಟ್ ಮೂಲಕ ಸಮಾಜದಲ್ಲಿ ಕಲಹ ಸೃಷ್ಟಿಸಲು ಮುಂದಾಗಿರುವುದಾಗಿ ತಿಳಿದುಬಂದಿದೆ. 2021 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ರಶ್ಮಿ ಸಾವಂತ್ ಯೆಹೂದಿ ವಿರೋಧಿ, ಜನಾಂಗೀಯವಾದಿ ಪೋಸ್ಟ್ ಹಾಕಿದ ಕಾರಣಕ್ಕಾಗಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಟ್ಟದಿಂದಲೇ ಕೆಳಕ್ಕಿಳಿಸಲಾಗಿತ್ತು.

ವಸ್ತು ಸ್ಥಿತಿ, ವಾಸ್ತವಾಂಶ ಅರಿಯದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪೋಸ್ಟ್ ಹಾಕುವವರ ಮೇಲೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.