ದ.ಕ ಜಿಲ್ಲೆಯ ಪೊಲೀಸರಿಗೆ ಸವಾಲಾದ ನಿಗೂಢ ಪ್ರಕರಣಗಳು..! ಪ್ರಕರಣ ಭೇದಿಸಲು ವಿಫಲರಾಗಿ ಕೈ ಕಟ್ಟಿ ಕುಳಿತ ಪೊಲೀಸ್ ಇಲಾಖೆ

ಕರಾವಳಿ

ಪಂಜಿಮೊಗರು ಡಬಲ್ ಮರ್ಡರ್,ಎ.ಜೆ ಅಸ್ಪತ್ರೆ ಬಳಿ ಕಾಣೆಯಾದ ರಫೀನಾ,ಯುವ ವಕೀಲ ಪ್ರೀತಂ,ಪ್ರಕರಣದ ನಿಗೂಢ ರಹಸ್ಯ.!

ಜಿಲ್ಲೆಯಲ್ಲಿ ದಶಕಗಳಿಂದ ಭೇದಿಸಲಾಗದ ಕೊಲೆ,ಮಿಸ್ಸಿಂಗ್ ಕೇಸ್ ಗಳು ಹಾಗೆ ಧೂಳು ಹಿಡಿದರೆ, ನೊಂದ ಕುಟುಂಬಗಳಿಗೆ ನ್ಯಾಯ ಸಿಗುವುದು ಯಾವಾಗ.? ದಕ್ಷ ಅಧಿಕಾರಿ,ಮಂಗಳೂರು ಕಮೀಷನರ್ ಕುಲ್ ದೀಪ್ ಕುಮಾರ್ ಆರ್.ಜೈನ್ ರವರು ಈ ಪ್ರಕರಣಗಳಿಗೆ ಜೀವ ನೀಡುವರೇ..

ಮಂಗಳೂರು ನಗರದ ಹೃದಯ ಭಾಗದಲ್ಲಿ ನಡೆದ ಎಷ್ಟೊ ಕೊಲೆ ಕೇಸ್ ಗಳನ್ನು ಪೊಲೀಸರು ಭೇದಿಸಿ, ಆರೋಪಿಗಳನ್ನು ಜೈಲಿಗಟ್ಟಿದ್ದಾರೆ. ಅಪರಾಧ ಲೋಕದಲ್ಲಿ ದ್ವೇಷ ಪ್ರತಿಕಾರಕ್ಕಾಗಿ ನಡೆಯುವ ಕೊಲೆ ಪ್ರಕರಣಗಳಲ್ಲಿ ಆರೋಪಿ ಯಾರು ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ . ಅಂತವರನ್ನು ಎಲ್ಲಿದ್ದರೂ ಹೆಡೆಮುರಿ ಕಟ್ಟಿ ಜೈಲಿಗಟ್ಟಬಹುದು.ಆದರೆ ಸಮಾಜದಲ್ಲಿ ನಡೆಯುವ ಕೆಲವು ಅಪರಾಧ ಪ್ರಕರಣಗಳಲ್ಲಿ ಪೊಲೀಸರಿಗೆ ಕ್ಲೂ ಕೂಡ ಸಿಗೋದಿಲ್ಲ. ಆದು ಪೊಲೀಸರಿಗೆ ಸವಾಲಾಗಿ ಪರಿಣಮಿಸುತ್ತದೆ. ಆದರೆ ಇಲ್ಲಿ ಹೇಳ ಹೊರಟಿರುವ ಕೊಲೆ ಪ್ರಕರಣಗಳಲ್ಲಿ ಬಹುತೇಕ ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ ಎಂಬುದು ಸಾಕ್ಷಿಕರಿಸುತ್ತದೆ

ಮಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳ ಹಿಂದೆ ನಡೆದಿರುವ ಕೊಲೆ,ಮಿಸ್ಸಿಂಗ್ ಕೇಸ್ ಗಳನ್ನು ಪೊಲೀಸರು ಇಂದಿಗೂ ಭೇದಿಸಲು ಸಾಧ್ಯವಾಗಿಲ್ಲ. ಹಾಗಂದ ಮಾತ್ರಕ್ಕೆ ಪೊಲೀಸರು ಕರ್ತವ್ಯ ನಿರ್ಲಕ್ಷ್ಯ ಎಸಗಿದ್ದಾರೆ ಎಂದು ಹೇಳಲು ಸಾದ್ಯವಿಲ್ಲ. ಪೊಲೀಸರು ಒಂದು ಸ್ಟೇಷನ್ ಗೆ ವರ್ಗಾವಣೆ ಮಾಡಿಕೊಂಡು ಬಂದು ತನ್ನ ವ್ಯಾಪ್ತಿ ಪ್ರದೇಶವನ್ನು ಅರಿತುಕೊಳ್ಳುವಷ್ಟರಲ್ಲಿ ಮತ್ತೊಂದೆಡೆ ವರ್ಗಾವಣೆಯಾಗುತ್ತೆ. ಮೇಲಾಧಿಕಾರಿಯಾಗಿ ವರ್ಗಾವಣೆಯಾಗಿ ಬಂದವರ ಕಥೆಯೂ ಇದೆ ಆಗಿದೆ. ಹೀಗಾಗಿ ಹೊಸ ಅಧಿಕಾರಿಗಳಿಗೆ ಹಳೆ ಕೇಸ್ ಗಳ ತನಿಖೆಗೆ ತ್ರಾಸದಾಯಕ ಆಗುತ್ತದೆ. ಪೊಲೀಸ್ ಠಾಣೆಗಳಲ್ಲಿ ದೂಳು ಹಿಡಿಯುತ್ತಿರುವ ಕೆಲವು ಕೊಲೆ,ಮಿಸ್ಸಿಂಗ್ ಕೇಸ್ ಗಳಿಗೆ ದಕ್ಷ ಅಧಿಕಾರಿ ಮಂಗಳೂರು ಕಮೀಷನರ್ ಸಾಹೇಬ್ರು ಮತ್ತೆ ಜೀವ ನೀಡಬೇಕಿದೆ.

ಪಂಜಿಮೊಗರು ಡಬಲ್ ಮರ್ಡರ್

ಅದು ಜೂನ್ 28, 2011 ರ ದಿನ. ಎಂದಿನಂತೆ ರಝಿಯಾ ಪತಿ ಹಮೀದ್ ಬೆಳಿಗ್ಗೆ ತನ್ನ ಗುಜರಿ ವ್ಯಾಪಾರಕ್ಕೆ ಮನೆಯಿಂದ ಹೊರಟು ಹೋಗಿದ್ದಾನೆ. ಜೊತೆಗೆ ತನ್ನ ಮೊದಲ ಮಗ ಜಿಯಾಝ್ ನನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ ಪಾಪ.. ಅವತ್ತು ಮಗಳು ಫಾತಿಮಾ ಝಿವಾಳಿಗೆ ಜ್ವರ ಕಾದಿತ್ತು. ಆಕೆ ಮನೆಯಲ್ಲಿಯೇ ಉಳಿದುಕೊಂಡಿದ್ದಾಳೆ. ಎಂದಿನಂತೆ ಗಂಡ ಮನೆಯಿಂದ ಹೊರಟು ಹೋದ ನಂತರ ಬಾಗಿಲನ್ನು ಭದ್ರವಾಗಿ ಹಾಕಿಕೊಂಡು ಮನೆ ಸೇರಿದ್ದಾಳೆ ರಝಿಯಾ. ಅದು ಮಧ್ಯಾಹ್ನ 1.30 ರ ಸಮಯ. ಅಕ್ಕಪಕ್ಕದ ಮನೆಯವರು ನಿಮ್ಮ ಮನೆಯಲ್ಲೊಂದು ಅನಾಹುತ ನಡೆದಿದೆಯೆಂದು ಹಮೀದ್ ನಿಗೆ ಫೋನ್ ಮಾಡುತ್ತಾರೆ. ಸುದ್ದಿ ತಿಳಿದಾಕ್ಷಣ ಮನೆಗೆ ಓಡೋಡಿ ಬಂದ ಹಮೀದ್ ನಿಗೆ ಆ ದೃಶ್ಯ ನೋಡಿ ಶಾಕ್ ಆಗಿತ್ತು. ತನ್ನ ಮುದ್ದಿನ ಪತ್ನಿ ರಝಿಯಾ ಮನೆಯ ವರಾಂಡದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಒಳಗೆ ತನ್ನ ಕೂಸು ಫಾತಿಮಾ ಝಿವಾ ಸತ್ತು ಮಲಗಿದ್ದಳು. ಚಾಕುವಿನಿಂದ ಚುಚ್ಚಿ ಚುಚ್ಚಿ ಇಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ತಕ್ಷಣ ಇಬ್ಬರನ್ನು ನಗರದ ಎ.ಜೆ ಆಸ್ಪತ್ರೆಗೆ ಕರೆತರಲಾಗಿತ್ತು. ಹಾಡಹಗಲೇ ಮನೆಯಲ್ಲಿ ನಡೆದಿದ್ದ ಜೋಡಿ ಕೊಲೆ ಸುದ್ದಿ ಕೇಳಿ ಅಲ್ಲಿಗೆ ಧಾವಿಸಿ ಬಂದಿದ್ದ ರಝಿಯಾ ಕುಟುಂಬಿಕರ ಆಕ್ರಂದನ ಮನಕಲಕುವಂತಿತ್ತು. ಜೋಡಿ ಕೊಲೆ ನಡೆದಿದ್ದ ಮಾರನೆಯ ದಿನವೇ ರಝಿಯಾ ತಮ್ಮನ ಮದುವೆ ಫಿಕ್ಸ್ ಆಗಿತ್ತು. ಮದುವೆ ತಯಾರಿಯಲ್ಲಿದ್ದ ರಝಿಯಾ ಕುಟುಂಬಿಕರಿಗೆ ಮನೆಮಗಳ ಸಾವು ಬರಸಿಡಿಲಿನಂತೆ ಎರಗಿತ್ತು. ರಝಿಯಾ ಕೊಲೆಯಾಗುವ ಅರ್ಧ ತಾಸಿನ ಮುಂಚೆ ಸೋದರರಿಗೆ ಕರೆ ಮಾಡಿ ಮದುವೆ ತಯಾರಿ ಬಗ್ಗೆ ಮಾತನಾಡಿದ್ದಳು. ಮಟಮಟ ಮಧ್ಯಾಹ್ನ ಪಂಜಿಮೊಗರಿನಲ್ಲಿ ನಡೆದಿದ್ದ ಡಬ್ಬಲ್ ಮರ್ಡರ್ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು.

ಎ.ಜೆ ಆಸ್ಪತ್ರೆಗೆ ಹೋದ ರಫೀನಾ ಎಲ್ಲಿ.?

ಆಕೆಯ ಹೆಸರು ರಫೀನಾ. ಮುಸ್ಲಿಂ ಕುಟುಂಬಕ್ಕೆ ಸೇರಿದ ಹುಡುಗಿ ಈಕೆ. ನಗರದ ಬಿಜೈ ಕಾಪಿಕಾಡ್ ನಲ್ಲಿ ಆಕೆಯ ವಾಸಸ್ಥಾನ. ಪ್ರತಿಷ್ಠಿತ ಹಣ್ಣು ಹಂಪಲು ವ್ಯಾಪಾರಿಯ ಕುಟುಂಬಕ್ಕೆ ಸೇರಿದ ಕರುಳ ಕುಡಿ ಈಕೆ. ಆ ಕುಟುಂಬಕ್ಕೆ ಸೇರಿದ ನಾಲ್ವರು ಹೆಣ್ಣುಮಕ್ಕಳಲ್ಲಿ ಈಕೆ ಕೊನೆಯವಳು. ಹೈ ಫೈ ಕುಟುಂಬಕ್ಕೆ ಸೇರಿದರೂ ಈಕೆ ಕಲಿತಿದ್ದು ಬಿಜೈ ಚರ್ಚ್ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ಮಾತ್ರ. ಸ್ಫುರದ್ರೂಪಿಯಾಗಿದ್ದ ರಫೀನಾ ವಯಸ್ಸಿಗೆ ಬಂದಾಗ ಕೃಷ್ಣಾಪುರದ ರಫೀಕ್ ಎಂಬಾತನೊಂದಿಗೆ ವಿವಾಹ ನಡೆಸಲಾಯಿತು. ರಫೀಕ್ ಗಲ್ಫ್ ಉದ್ಯೋಗಿ. ಇವರ ನಡುವಿನ ದಾಂಪತ್ಯ ಅನ್ಯೋನ್ಯತೆಯಿಂದ ಕೂಡಿತ್ತು. ರಫೀಕ್ ಮೊದಲೇ ರಫೀನಾ ಕುಟುಂಬಸ್ಥರಿಗೆ ಸಂಬಂಧಿಕನಾಗಿದ್ದ. ಮದುವೆಯಾಗಿ ನಾಲ್ಕು ವರ್ಷವಾಗಿತ್ತು. ಆದರೆ ಮಕ್ಕಳಾಗಿರಲಿಲ್ಲ.

ತನ್ನ ಸಂಬಂಧಿ ರಫೀಕ್ ನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆದಾಗಲೇ ನಾಲ್ಕು ವರ್ಷವಾಗಿತ್ತು. ರಫೀಕ್ ಉದ್ಯೋಗಕ್ಕಾಗಿ ಗಲ್ಫ್ ಗೆ ತೆರಳಿದ್ದ. ರಫೀನಾ ಅತ್ತೆ ಮಾವರೊಂದಿಗೆ ಕೃಷ್ಣಾಪುರದಲ್ಲಿಯೇ ವಾಸವಾಗಿದ್ದಳು. ಒಮ್ಮೊಮ್ಮೆ ತನ್ನ ತವರು ಮನೆಗೆ ಹೋಗಿ ಬರುತ್ತಿದ್ದಳು. ಆ ಎರಡೂ ಕುಟುಂಬಕ್ಕೆ ರಫೀನಾ ಅಚ್ಚುಮೆಚ್ಚಿನ ಮಗಳಾಗಿದ್ದಳು. ಯಾರೊಂದಿಗೂ ತಂಟೆಗೆ ಹೋಗುತ್ತಿರಲಿಲ್ಲ. ಅದೊಂದು ದಿನ ಅಕ್ಟೋಬರ್ 20, 2014 ಮುಂಜಾನೆಯ ಸಮಯ. ಅವತ್ತು ರಫೀನಾ ಬಿಜೈಯ ಕಾಪಿಕಾಡಿನ ಮನೆಯಲ್ಲಿದ್ದಳು. ತನ್ನ ಅತ್ತೆ ನಗರದ ಎ.ಜೆ ಆಸ್ಪತ್ರೆಯಲ್ಲಿ ಅಪಾಯಿಂಟ್ ಮೆಂಟ್ ತೆಗೆದಿದ್ದಾರೆ. ಅತ್ತೆ ಕೃಷ್ಣಾಪುರದಿಂದ ನೇರವಾಗಿ ಆಸ್ಪತ್ರೆಗೆ ಬರುತ್ತಾರೆ. ತನಗೆ ಹೋಗಲಿಕ್ಕಿದೆ ಎಂದು ರಫೀನಾ ತನ್ನ ತಾಯಿಯಲ್ಲಿ ವಿಷಯ ಹೇಳಿದ್ದಾಳೆ. ಅದಕ್ಕೆ ರಫೀನಾ ತಾಯಿ ಓಕೆ ಅಂದಿದ್ದಾರೆ. ತನ್ನ ತಮ್ಮನ ಜೊತೆ ಬೈಕಿನಲ್ಲಿ ರಫೀನಾ ಎ.ಜೆ ಆಸ್ಪತ್ರೆಗೆ ಬಂದಿದ್ದಾಳೆ. ತಮ್ಮ ರಫೀನಾಳನ್ನು ಆಸ್ಪತ್ರೆಯ ವರಾಂಡದಲ್ಲಿ ಬಿಟ್ಟು ತನ್ನ ಕೆಲಸಕ್ಕೆ ಹೋಗಿದ್ದಾನೆ. ಆಸ್ಪತ್ರೆಗೆ ಹೋಗಿದ್ದ ರಫೀನಾ ಸಂಜೆಯವರೆಗೂ ಮನೆಗೆ ಬಾರದಿರುವುದನ್ನು ಕಂಡು ಆತಂಕಿತರಾದ ರಫೀನಾ ತಾಯಿ ರಫೀನಾಳ ಮೊಬೈಲಿಗೆ ಫೋನ್ ಮಾಡಿದಾಗ ಅತ್ತ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ರಫೀನಾಳನ್ನು ಆಸ್ಪತ್ರೆಗೆ ಬಿಟ್ಟ ತಮ್ಮನಿಗೆ ಫೋನ್ ಮಾಡಿ ವಿಚಾರಿಸಿದಾಗ ರಫೀನಾಳನ್ನು ತಾನು ಎ.ಜೆ ಆಸ್ಪತ್ರೆಗೆ ಬಿಟ್ಟು ಹೊರಟು ಹೋಗಿದ್ದೇನೆ ಅಂದಿದ್ದಾನೆ. ಸಂಬಂಧಿಕರಲ್ಲಿ ವಿಚಾರಿಸಿದಾಗ ಅಲ್ಲಿಯೂ ರಫೀನಾಳ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಕೊನೆಗೆ ಕೃಷ್ಣಾಪುರದ ಗಂಡನ ಮನೆಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಅಲ್ಲಿಯೂ ರಫೀನಾ ಇರಲಿಲ್ಲ. ಅತ್ತೆಯನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಾಳೆ ಅನ್ನುವ ವಿಚಾರ ತಿಳಿಸಿದಾಗ ಅವತ್ತಿನ ದಿನ ರಫೀನಾಳ ಅತ್ತೆ ಎ.ಜೆ ಆಸ್ಪತ್ರೆಯಲ್ಲಿ ಯಾವುದೇ ಅಪಾಯಿಂಟ್ ಮೆಂಟ್ ತೆಗೆದಿರಲಿಲ್ಲ. ಆದಾಗಲೇ ಎರಡೂ ಕುಟುಂಬಕ್ಕೂ ಪಕ್ಕಾ ಆಗಿತ್ತು ರಫೀನಾ ಕಾಣೆಯಾಗಿದ್ದಾಳೆ ಎಂದು.

ಎರಡೂ ಪ್ರತಿಷ್ಠಿತ ಕುಟುಂಬಗಳ ಮುದ್ದಿನ ಸೊಸೆ ಮಗಳು ಕಾಣೆಯಾಗಿರುವುದನ್ನು ಕಂಡು ಕಂಗಾಲಾಗಿ ಹೋಗಿತ್ತು. ಅಲ್ಲಿಂದಿಲ್ಲಿ ವಿಚಾರಿಸಿದರೂ ರಫೀನಾ ಪತ್ತೆಯಾಗಲೇ ಇಲ್ಲ. ಕೊನೆಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿತು. ರಫೀನಾ ಕಾಣೆಯಾದ ಮೂರ್ನಾಲ್ಕು ದಿನದ ನಂತರ ಉರ್ವ ಠಾಣೆಗೆ ದೂರು ನೀಡಲಾಯಿತು. ಪ್ರಕರಣ ಇಂದಿಗೂ ಕಗ್ಗಂಟಾಗಿಯೇ ಉಳಿದಿದೆ.

ಯುವ ವಕೀಲ ಪ್ರೀತಂ ನಾಪತ್ತೆ

ನಗರದ ಯುವ ವಕೀಲ ಪ್ರೀತಂ ನಿಗೂಢ ನಾಪತ್ತೆ ಪ್ರಕರಣವನ್ನು ಕೂಡ ಪೊಲೀಸರು ಭೇದಿಸುವಲ್ಲಿ ವಿಫಲರಾಗಿದ್ದರು. ಸಾಧಾರಣ ಇಪ್ಪತ್ತಾರರ ಹರೆಯದ ಪ್ರೀತಂ ಕುಮಾರ್ ದೇರೆಬೈಲ್, ಕೊಂಚಾಡಿ ನಿವಾಸಿಯಾಗಿದ್ದು ವಕೀಲರಾದ ಪದ್ಮರಾಜ್ ಎಂಬುವರಲ್ಲಿ ತರಬೇತಿ ಪಡೆಯುತ್ತಿದ್ದ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಲ್ತ್ ಇನ್ಸ್ ಪೆಕ್ಟರ್ ಆಗಿದ್ದ ಉಮೇಶ್ ರವರ ಪುತ್ರನಾಗಿದ್ದ ಈತ. ಮಂಗಳೂರು ಬಾರ್ ಅಸೋಸಿಯೇಶನ್ ಸದಸ್ಯನಾಗಿದ್ದ. ಸ್ಫುರದ್ರೂಪಿ ಯುವಕನಾಗಿದ್ದ ಪ್ರೀತಂ ವಯೋಸಹಜ ಎಂಬಂತೆ ಪ್ರೀತಿಯೆಂಬ ಮಾಯೆಯಲ್ಲಿ ಬಿದ್ದಿದ್ದ.

ಅದು ಜನವರಿ 24, 2010 ಆದಿತ್ಯವಾರ. ಎಂದಿನಂತೆ ಮನೆಯಲ್ಲಿ ಇದ್ದ ಪ್ರೀತಂ ರಾತ್ರಿ 8.30 ರ ಸುಮಾರಿಗೆ ತನ್ನ ತಾಯಿ ಪದ್ಮಾವತಿಯಲ್ಲಿ ಗೆಳೆಯನೊಬ್ಬ ಕರೆಯುತ್ತಿದ್ದಾನೆ, ನಾನು ಹೋಗಿ ಬರುತ್ತೇನೆ ಅಮ್ಮ ಎಂದು ಹೇಳಿ ಮನೆಯಿಂದ ಹೊರಟ ಪ್ರೀತಂ ಮತ್ತೆ ಮನೆಗೆ ಹಿಂದಿರುಗಿ ಬರಲೇ ಇಲ್ಲ. ಎಷ್ಟು ಹುಡುಕಿದರೂ ಪ್ರೀತಂ ನ ಪತ್ತೆಯೇ ಇಲ್ಲ. ಕೊನೆಗೆ ಪ್ರೀತಂ ನ ತಂದೆ ಉಮೇಶ್ ಕಾವೂರು ಪೋಲೀಸ್ ಠಾಣೆಯಲ್ಲಿ ಕ್ರೈಂ.ನಂ 16/10 ರಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.

ಮನೆಯಿಂದ ಹೊರಟ ಪ್ರೀತಂ ಎಲ್ಲಿಗೆ ಹೋದ.? ನಿಗೂಢ ಕಣ್ಮರೆಗೆ ಕಾರಣವೇನು.? ಇದರ ಹಿಂದಿರುವ ಕಾಣದ ಕೈಗಳು ಯಾವುದು.? ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.

ಇಂತಹ ಹಲವು ಪ್ರಕರಣಗಳು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಈ ವರೆಗೂ ಈ ಮೂರು ಪ್ರಕರಣಗಳು ದಡ ಮುಟ್ಟಿಲ್ಲ. ನಿಗೂಢವಾಗಿಯೇ ಉಳಿದಿದೆ. ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಮಂಗಳೂರಿನ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್.ಜೈನ್ ರವರು ದಕ್ಷರು,ನಿಷ್ಠಾವಂತರು, ಪ್ರಾಮಾಣಿಕ ಅಧಿಕಾರಿ.ಈ ನಿಗೂಢ ಪ್ರಕರಣವನ್ನು ಬೇಧಿಸಿ ಅ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುತ್ತಾರಾ.? ಸಾರ್ವಜನಿರಲ್ಲಿ ಮೂಡಿರುವ ಸಂಶಯವನ್ನು ನಿವಾರಿಸುತ್ತಾರಾ.!