ಬಂಟ್ವಾಳದ ನೈತಿಕ ಪೊಲೀಸ್ ಗಿರಿ – ಆಂಟಿ ಕಮ್ಯುನಲ್ ವಿಂಗ್ ಸಂಪೂರ್ಣ ನಿಷ್ಕ್ರಿಯ- ಡಿವೈಎಫ್ಐ ಆರೋಪ

ಕರಾವಳಿ

ಮೊನ್ನೆ ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ತಮ್ಮ ಮಡದಿ ಮತ್ತು ಸಂಬಂಧಿ ಜತೆ ಬಿ.ಸಿ ರೋಡ್ ಹೋಟೇಲೊಂದಕ್ಕೆ ಊಟಕ್ಕೆ ಹೋಗುವ ವೇಳೆ ಸಂಘಪರಿವಾರಕ್ಕೆ ಸೇರಿದ ಇಬ್ಬರು ದುಷ್ಕರ್ಮಿಗಳು ನೈತಿಕಪೊಲೀಸ್ ಗಿರಿ ನಡೆಸಿರುವ ಘಟನೆ ಪೊಲೀಸ್ ಇಲಾಖೆಯ ದಯನೀಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಮತ್ತು ಇತ್ತಿಚೇಗೆ ಕಾರ್ಯರೂಪಕ್ಕೆ ಬಂದ ಸಿಟಿ ಸ್ಪೆಷಲ್ ಬ್ಯಾಂಚ್ ನ ಆಂಟಿ ಕಮ್ಯೂನಲ್ ವಿಂಗ್ ಸಂಪೂರ್ಣ ನಿಷ್ಕ್ರಿಯ ಘಟಕ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ.

ಜಿಲ್ಲೆಯಲ್ಲಿ ಅನೇಕ ವರುಷಗಳಿಂದ ನೈತಿಕ ಪೊಲೀಸ್ ಗಿರಿ ಹೆಸರಿನ ದಾಳಿಗಳು ಹೆಚ್ಚಾಗಿದ್ದು ಜಿಲ್ಲೆಯ ಶಾಂತಿ ಪ್ರಿಯ ಜನತೆ ಇದರ ವಿರುದ್ಧ ದ್ವನಿಯೆತ್ತುತ್ತಾ ಬಂದಿದ್ದರು ಇದನ್ನು ನಿಯಂತ್ರಿಸುವಲ್ಲಿ ಇಂತಹ ಚಟುವಟಿಕೆಗಳನ್ನು ಹದ್ದುಬಸ್ತಿನಲ್ಲಿರಿಸದೆ ಪರೋಕ್ಷವಾಗಿ ಬೆಂಬಲಿಸಿದ ಪರಿಣಾಮ ಇಂದು ನೈತಿಕ ಪೊಲೀಸ್ ಗಿರಿ ತನ್ನ ಮಿತಿಯನ್ನು ಮೀರಿ ಬೆಳೆದಿದೆ.

ಗುರುವಾರ ರಾತ್ರಿ ಬಿಸಿರೋಡ್ ನಲ್ಲಿ ನಡೆದ ನೈತಿಕ ಪೊಲೀಸ್ ಗಿರಿಯ ಹೆಸರಿನಲ್ಲಿ ಸಂಘಪರಿವಾರದ ದುಷ್ಕರ್ಮಿಗಳು ನಡೆಸಿರುವ ದಾಳಿಯು ಪೊಲೀಸ್ ವ್ಯವಸ್ಥೆಯ ದಯನೀಯ ವೈಫಲ್ಯವನ್ನು ಎತ್ತಿ ತೋರಿಸಿದೆ ಮತ್ತು ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ತಲೆ ತಗ್ಗಿಸುವಂತೆ ಮಾಡಿದೆ. ರಾಜ್ಯದಲ್ಲಿ ಸರಕಾರಗಳು ಬದಲಾದರೂ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಹೆಸರಿನ ದಾಳಿಗಳು ತನ್ನ ಚಾಳಿಯನ್ನು ಮುಂದುವರಿಸಿದೆ. ಈ ಬಾರಿ ಮಾದರಿ ಸರಕಾರ ಆಡಳಿತ ಎಂದು ನಡೆಸಲು ಹೊರಟ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರಕಾರ ಕರಾವಳಿಯಲ್ಲಿ ನೈತಿಕ ಪೊಲೀಸ್ ಗಿರಿಯನ್ನು ಮುಲಾಜಿಲ್ಲದೆ ಬಗ್ಗು ಬಡಿಯಲು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುವ ಭರವಸೆ ನೀಡಿ ಅದರ ಭಾಗವಾಗಿ ಗೃಹಮಂತ್ರಿ ಜಿ. ಪರಮೇಶ್ವರ್ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತರು ಸಿಟಿ ಸ್ಪೆಷಲ್ ಬ್ರಾಂಚ್ ಅಡಿಯಲ್ಲಿ ಆಂಟಿ ಕಮ್ಯೂನಲ್ ವಿಂಗ್ ರಚಿಸಲಾಯಿತು. ಈ ವಿಂಗ್ ಕೋಮು ಪ್ರಕರಣದ ಆರೋಪಿಗಳ ಮೇಲೆ ನಿಗಾ ವಹಿಸಲಿದ್ದು, ಅವರ ಕಾರ್ಯಾಚರಣೆ ಬಗ್ಗೆ ಗಮನಕೊಡಲಿದೆ. ಈ ವಿಂಗ್ ಕಳೆದ 10 ವರ್ಷಗಳಿಂದ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ನಿಗಾವಹಿಸಲಿದೆ ಎಂಬ ಭರವಸೆಗಳನ್ನು ನೀಡಿದ್ದರೂ ಈ ವಿಂಗ್ ರಚನೆಯಾದ ನಂತರವೂ ನಗರದಲ್ಲಿ ಹಲವಾರು ನೈತಿಕಪೊಲೀಸ್ ಗಿರಿ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದೆ. ಒಟ್ಟು ಇಂತಹ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಆಂಟಿ ಕಮ್ಯೂನಲ್ ವಿಂಗ್ ಸಂಪೂರ್ಣವಾಗಿ ವಿಫಲಗೊಂಡು ನಿಷ್ಕ್ರಿಯಗೊಂಡತೆ ಕಾಣುತ್ತಿದೆ ಎಂದು ಡಿವೈಎಫ್ಐ ಆರೋಪಿಸಿದೆ.

ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಸಂಘಪರಿವಾರ ಪ್ರಾಯೋಜಿತ ನಡೆಯುತ್ತಿರುವ ನೈತಿಕ ಪೊಲೀಸ್ ಗಿರಿ ಹೆಸರಿನ ದಾಳಿಗಳನ್ನು ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.