ಪತ್ನಿ ಹಾಗೂ ಮಕ್ಕಳಿಗೆ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪವಿತ್ರ ಕುರಾನ್ ನಲ್ಲಿ ಹೇಳಿರುವಂತೆ ಪತ್ನಿ ಹಾಗೂ ಮಕ್ಕಳನ್ನು ಪೋಷಿಸುವುದು ಪತಿಯ ಆದ್ಯ ಕರ್ತವ್ಯ. ಇಬ್ಬರು ಪುತ್ರಿಯರಲ್ಲಿ ಒಬ್ಬರು ವಿಶೇಷ ಚೇತನೆ, ಮತ್ತೊಬ್ಬರು ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ಪತ್ನಿ ಮತ್ತು ಮಕ್ಕಳಿಗೆ ಮಾಸಿಕ 25 ಸಾವಿರ ರೂಪಾಯಿ ಜೀವನಾಂಶ ನೀಡಲೇಬೇಕೆಂದು ಆದೇಶಿಸಿದೆ.
ಜೀವನಾಂಶ ಮೊತ್ತ ಇಳಿಕೆ ಕೋರಿ ಬೆಂಗಳೂರಿನ ಮೊಹಮ್ಮದ್ ಅಮ್ಜದ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶವನ್ನು ನೀಡಿದೆ. ಹೆಚ್ಚಿನ ಜೀವನಾಂಶ ನೀಡಲು ತಮ್ಮಿಂದ ಸಾಧ್ಯವಿಲ್ಲವೆಂಬ ಅರ್ಜಿದಾರರ ವಾದ ತಿರಸ್ಕರಿಸಿರುವ ನ್ಯಾಯಾಲಯ, ಈಗಿನ ದುಬಾರಿಯ ದಿನಗಳಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗಿದೆ. ಈಗ ರಕ್ತಕ್ಕಿಂತ ಅನ್ನಕ್ಕೆ ಹೆಚ್ಚು ಬೆಲೆ ಇದೆ. ಆದ್ದರಿಂದ ಅಧೀನ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶದ ಮೊತ್ತವನ್ನು ನೀಡಲೇಬೇಕೆಂದು ಆದೇಶಿಸಿದೆ. “ಪವಿತ್ರ ಕುರಾನ್ ಮತ್ತು ಹದೀಸ್ ನಂತೆ ಪತ್ನಿ ಮತ್ತು ಮಕ್ಕಳನ್ನು ಅದರಲ್ಲೂ ದೈಹಿಕ ನ್ಯೂನತೆ ಹೊಂದಿರುವವರನ್ನು ಪೋಷಿಸುವುದು ಪತಿಯ ಕರ್ತವ್ಯ. ಪ್ರತಿವಾದಿಯ ಪತ್ನಿ ಲಾಭದಾಯಕ ಹುದ್ದೆ ಹೊಂದಿದ್ದಾರೆ ಮತ್ತು ಅವರು ಇತರ ಆದಾಯ ಮೂಲಗಳನ್ನು ಹೊಂದಿದ್ದಾರೆಂದು ಸಾಬೀತು ಪಡಿಸುವ ಯಾವುದೇ ಸಾಕ್ಷ್ಯ ಪತಿ ಸಲ್ಲಿಸಿಲ್ಲ. ಅದೇನೇ ಇದ್ದರೂ ಪತ್ನಿ-ಮಕ್ಕಳನ್ನು ಸಾಕುವುದು, ನಿರ್ವಹಣೆ ಮಾಡುವುದು ಪ್ರಾಥಮಿಕ ಕರ್ತವ್ಯ” ಎಂದು ನ್ಯಾಯಾಲಯ ಹೇಳಿದೆ.