ವಿದ್ಯುತ್ ಗುತ್ತಿಗೆ ಇದೆ ಎಂಬ ಕಾರಣಕ್ಕೆ ಗ್ರಾಮ ಪಂಚಾಯತ್ ಸದಸ್ಯತ್ವದಿಂದ ಅನರ್ಹಗೊಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.ಗುತ್ತಿಗೆ ಪರವಾನಿಗೆ ಇದೆ ಎಂದರೆ ಅದು ಲಾಭದಾಯಕ ಹುದ್ದೆ ಅಥವಾ ಕಚೇರಿ ಹೊಂದುವುದಕ್ಕೆ ಸಮನಾಗಿದೆ ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತೀರ್ಪು ನೀಡಿದೆ.
ರಾಯಚೂರಿನ ಸಿವಿಲ್ ನ್ಯಾಯಾಲಯ ಮಾಣಿಕ್ಯಪ್ಪ ಎಂಬವರನ್ನು ಗ್ರಾಮ ಪಂಚಾಯತ್ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿ ತೀರ್ಪು ನೀಡಿತ್ತು. ಇವರು ವಿದ್ಯುತ್ ಗುತ್ತಿಗೆದಾರರು ಎಂಬ ಕಾರಣಕ್ಕೆ ಲಾಭದಾಯಕ ಹುದ್ದೆ ಹೊಂದಿದ್ದರು ಎಂದು ಘೋಷಿಸಿ ಸದಸ್ಯತ್ವ ರದ್ದತಿ ಆದೇಶ ಮಾಡಲಾಗಿತ್ತು.ಈ ಆದೇಶವನ್ನು ಪ್ರಶ್ನಿಸಿ ಮಾಣಿಕ್ಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ, ಪಂಚಾಯತ್ ರಾಜ್ ಅಧಿನಿಯಮ 1993 ಸೆಕ್ಷನ್ 12(ಜಿ) ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟ ಯಾವುದೇ ಪ್ರಾಧಿಕಾರದ ಅಡಿಯಲ್ಲಿ ಲಾಭದಾಯಕ ಹುದ್ದೆ ಹೊಂದಿದ್ದರೆ ಅಂತಹ ಗ್ರಾಮ ಪಂಚಾಯತ್ ಸದಸ್ಯ ಅನರ್ಹಗೊಳ್ಳುತ್ತಾನೆ ಎಂದು ಸ್ಪಷ್ಟವಾಗಿ ಹೇಳಿದೆ ಎಂಬುದನ್ನು ಉಲ್ಲೇಖಿಸಿತು.
ಜೆಸ್ಕಾಂ ಮತ್ತು ಕೆಪಿಟಿಸಿಎಲ್‌ನ ಪ್ರಥಮ ದರ್ಜೆಯ ವಿದ್ಯುತ್ ಗುತ್ತಿಗೆದಾರರಾಗಿರುವ ಮಾಣಿಕ್ಯಪ್ಪ ಅವರು ಲಾಭದಾಯಕ ಹುದ್ದೆಯಲ್ಲಿ ಇದ್ದಾರೆ. 2020ರ ಡಿಸೆಂಬರ್ 30ರಂದು ಮಾಣಿಕ್ಯಪ್ಪ ಗ್ರಾಮ ಪಂಚಾಯತ್‌ನಿಂದ ಆಯ್ಕೆಯಾಗಿದ್ದಾರೆ.ದೆಹಲಿ ಹೈಕೋರ್ಟ್ ತೀರ್ಪಿನ ಪ್ರಕಾರ, ಸೀಮೆಎಣ್ಣೆ ಡೀಲರ್‌ಶಿಪ್ ಕೂಡ ಲಾಭದಾಯಕ ಹುದ್ದೆಯಾಗಿದೆ. ಹಾಗಾಗಿ, ಸಿವಿಲ್ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ಯಾವುದೇ ಸಕಾರಣ ಇಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಸ್ಪಪ್ಟಪಡಿಸಿದೆ