ಉಳ್ಳಾಲ: ಸ್ಪೀಕರ್ ಕ್ಷೇತ್ರದಲ್ಲಿ ಜನರ ಸಂಕಷ್ಟ ಕೇಳುವವರು ಇಲ್ಲ; ಮನವಿ ಕೊಡಲು ಹೋದರೆ ಅಧಿಕಾರಿಗಳೇ ನಾಪತ್ತೆ

ಕರಾವಳಿ

ಸ್ಪೀಕರ್ ಕ್ಷೇತ್ರವಾದ ಉಳ್ಳಾಲದ ನಗರ ಸಭೆ ಕಚೇರಿಗೆ ಹೋದರೆ ಜನರ ಸಂಕಷ್ಟ ಕೇಳುವವರೇ ಇಲ್ಲ.ಕನಿಷ್ಠ ಮನವಿ ಸ್ವೀಕರಿಸಲು ಅಲ್ಲಿನ ಅಧಿಕಾರಿಗಳೇ ನಾಪತ್ತೆಯಾಗಿದ್ದಾರೆ.

ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಆಟೋರಿಕ್ಷಾ ಪಾರ್ಕ್ ಕಳೆದ ಹಲವಾರು ದಶಕಗಳಿಂದ ಕಾರ್ಯಾಚರಿಸುತ್ತಿದ್ದು,ಸದ್ಯಕ್ಕೆ ಈ ಪಾರ್ಕ್ ತೀರಾ ಅವ್ಯವಸ್ಥೆಗಳಿಂದ ಕೂಡಿದೆ. ರಿಕ್ಷಾ ಪಾರ್ಕ್ ಬಳಿಯಲ್ಲೇ ಕಳೆದ ಒಂದು ತಿಂಗಳಿನಿಂದ ಡ್ರೈನೇಜ್ ತ್ಯಾಜ್ಯ ಹರಿದಾಡುತ್ತಿದ್ದು ದುರ್ನಾತದಿಂದ ಅಲ್ಲಿ ನಿಲ್ಲಲು ಅಸಾದ್ಯವಾಗಿದೆ.ನಗರ ಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದರೂ, ಇಲ್ಲಿಯವರೆಗೆ ಸಮಸ್ಯೆ ಪರಿಹಾರ ಕಂಡಿಲ್ಲ. ಸುಸಜ್ಜಿತ ಆಟೋ ರಿಕ್ಷಾ ಪಾರ್ಕ್ ನಿರ್ಮಿಸಲು ನಗರ ಸಭೆಯಲ್ಲಿ ಮೀಸಲು ನಿಧಿ ಇದ್ದರೂ, ಇಲ್ಲಿಯವರೆಗೆ ಅದು ಸರಿಯಾದ ರೀತಿಯಲ್ಲಿ ಬಳಕೆಯಾಗಿಲ್ಲ. ತೊಕ್ಕೊಟ್ಟು ಪಟ್ಟಣದ ರಸ್ತೆ ಅಗಲೀಕರಣ ಹಾಗೂ ಮೇಲ್ಸೇತುವೆ ರಚನೆ ಸೇರಿದಂತೆ ಅಭಿವೃದ್ಧಿ ಪಥದತ್ತ ಹೋಗುವಾಗ ಇಲ್ಲಿ ಸುಸಜ್ಜಿತವಾದ ಆಟೋ ರಿಕ್ಷಾ ಪಾರ್ಕ್ ನ್ನು ನಿರ್ಮಿಸುವುದು ಯಾರ ಜವಾಬ್ದಾರಿ ಎಂಬುದನ್ನು CITU ಸಂಯೋಜಿತ ಆಟೋ ರಿಕ್ಷಾ ಚಾಲಕ ರ ಸಂಘ ಪ್ರಶ್ನಿಸಿದೆ.

ಈ ಬಗ್ಗೆ ಮನವಿ ನೀಡಲು ರಿಕ್ಷಾ ಚಾಲಕರ ನಿಯೋಗವೊಂದು ಉಳ್ಳಾಲ ನಗರ ಸಭೆ ಕಚೇರಿಗೆ ಹೋದಾಗ ಕನಿಷ್ಟ ಮನವಿ ಸ್ವೀಕರಿಸಲು ಅಧಿಕಾರಿಗಳೇ ನಾಪತ್ತೆಯಾಗಿದ್ದಾರೆ.ಅಲ್ಲಿನ ಸಿಬ್ಬಂದಿಗಗಳಲ್ಲಿ ವಿಚಾರಿಸಿದಾಗ ಟಪ್ಪಲಿನಲ್ಲಿ ಕೊಟ್ಟು ಹೋಗಿ ಎಂಬ ಉದ್ಧಟತನದ ಮಾತು ಬೇರೆ.ಇದರಿಂದ ಆಕ್ರೋಶಗೊಂಡ ರಿಕ್ಷಾ ಚಾಲಕರು ಅಧಿಕಾರಿಗಳು ಬರುವ ತನಕ ಇಲ್ಲಿಂದ ಕದಲುವುದಿಲ್ಲ ಎಂದು ಅಲ್ಲೇ ಧಿಡೀರ್ ಪ್ರತಿಭಟನೆ ನಡೆಸಿದರು.ಬಳಿಕ ಕೆಲವೇ ಕ್ಷಣಗಳಲ್ಲಿ ಆಗಮಿಸಿದ ಇಂಜಿನಿಯರ್ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿ,3 ದಿನದೊಳಗೆ ಡ್ರೈನೇಜ್ ಸಮಸ್ಯೆಯನ್ನು ಪರಿಹರಿಸುವುದಾಗಿಯೂ ಹಾಗೂ ಸುಸಜ್ಜಿತ ಅಟೋ ರಿಕ್ಷಾ ಪಾರ್ಕ್ ಗೆ ಸಂಬಂದಿಸಿ ಕೂಡಲೇ ಕ್ರಮ ಕೈಗೊಳ್ಳುವುದಾಗಿಯೂ ಭರವಸೆ ನೀಡಿದರು

ನಿಯೋಗದಲ್ಲಿ ಆಟೋರಿಕ್ಷಾ ಚಾಲಕರ ಫೆಡರೇಷನ್ ನ ಜಿಲ್ಲಾಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್, ತೊಕ್ಕೊಟ್ಟು ಜಂಕ್ಷನ್ ಅಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ದಯಾನಂದ್, ನಝೀರ್, ಪುರಂದರ, ರಾಮಕೃಷ್ಣ, ಕೃಷ್ಣ ಶೆಟ್ಟಿ ಪಿಲಾರ್, ಮುತ್ತಲಿಬ್, ಅಶ್ರಫ್, ನಾರಾಯಣ, ರಮೇಶ್, ಬಶೀರ್, ಅಬ್ಬಾಸ್, ಆಫ್ರಿದ್, ಮೆಲ್ವಿನ್ ಸೇರಿದಂತೆ 50ಕ್ಕೂ ಮಿಕ್ಕಿ ರಿಕ್ಷಾ ಚಾಲಕರಿದ್ದರು.