ಕೈಕಂಬ: ಬಜಪೆ ಪೊಲೀಸರ ಕಾರ್ಯಾಚರಣೆ, ಗಾಂಜಾ ಸಹಿತ ಓರ್ವನ ಬಂಧನ

ಕರಾವಳಿ

ಕೈಕಂಬ: ಗುರುಪುರ ಮೂಳೂರು ಗ್ರಾಮದ ಬಂಗ್ಲಗುಡ್ಡೆ ಸೈಟ್‌ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುರುಪುರ ಮೂಳೂರು ಗ್ರಾಮದ ನಿವಾಸಿ ನವಾಜ್ ಎಂದು ಗುರುತಿಸಲಾಗಿದೆ. ಈತನಿಂದ 430 ಗ್ರಾಂ ತೂಕದ ಅಂದಾಜು 8 ಸಾವಿರ ರೂ. ಮೌಲ್ಯದ ಗಾಂಜಾ, 50 ಸಾವಿರ ರೂ. ಮೌಲ್ಯದ ಒಂದು ಬೈಕ್, 500 ರೂ. ಮೌಲ್ಯದ ತೂಕ ಮಾಪಕ, ಒಂದು ಮೊಬೈಲ್‌ ಹಾಗೂ ಕೆಲವು ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಆ.3ರಂದು ಬೆಳಗ್ಗೆ ಮೂಳೂರು ಗ್ರಾಮದ ಬಂಗ್ಲೆಗುಡ್ಡೆ ಸೈಟ್ ಎಂಬಲ್ಲಿ ಬೈಕ್‌ನಲ್ಲಿ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆತನನ್ನು ವಿಚಾರಣೆ ನಡೆಸಿದ್ದು, ತಾನು ಕೇರಳದ ಅಪರಿಚಿತ ವ್ಯಕ್ತಿಯಿಂದ ಗಾಂಜಾ ತಂದು ಮಾರಾಟ ಮಾಡಲು ನಿಂತಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆರೋಪಿಯ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.