ವಿಟ್ಲ ದಲಿತ ಬಾಲಕಿಯ ಅತ್ಯಾಚಾರ : ಕಠಿಣ ಕ್ರಮಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕರಾವಳಿ

ವಿಟ್ಲದಲ್ಲಿ ದಲಿತ ಬಾಲಕಿಯ ಮೇಲೆ ನಡೆದಿರುವ ಸರಣಿ ಅತ್ಯಾಚಾರ ಪ್ರಕರಣವನ್ನು ಖಂಡಿಸಿ, ಅತ್ಯಾಚಾರಿಗಳಿಗೆ ಗರಿಷ್ಟ ಶಿಕ್ಷೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಕೃಷ್ಣಪ್ಪ ಸ್ಥಾಪಿತ) ದ ಕ ಜಿಲ್ಲಾ ಸಮಿತಿ ವತಿಯಿಂದ ಮಂಗಳೂರು ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ದಲಿತ ಮುಖಂಡ ಎಂ ದೇವದಾಸ್, ವಿಟ್ಲ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣದ ಕುರಿತು ಹಿಂದುತ್ವವಾದಿಗಳು ತುಟಿ ಬಿಚ್ಚುತ್ತಿಲ್ಲ. ಬಂಧಿತ ಅತ್ಯಾಚಾರಿಗಳು ಸಂಘಪರಿವಾರದ ಕಾರ್ಯಕರ್ತರು ಎಂಬುದು ಜಾಹೀರಾಗಿದ್ದರೂ, “ಅವರು ನಮ್ಮ ಕಾರ್ಯಕರ್ತರು ಅಲ್ಲ” ಎಂದು ಹೇಳಿಕೆ ನೀಡಿ ತಿಪ್ಪೆ ಸಾರಿಸಲು ಯತ್ನಿಸಲಾಗುತ್ತಿದೆಯೇ ಹೊರತು ಬಿಜೆಪಿ ಸಂಸದರು, ಶಾಸಕರುಗಳು ಸಂತ್ರಸ್ತ ದಲಿತ ಬಾಲಕಿಯ ಪರವಾಗಿ ಒಂದು ಮಾತನ್ನೂ ಆಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಮಣಿಪುರ ಮಹಿಳೆಯರ ಬೆತ್ತಲೆ ಪ್ರಕರಣ ಸಮರ್ಥಿಸಿದ, ಬಿಲ್ಕಿಸ್ ಬಾನೋ ಗ್ಯಾಂಗ್ ರೇಪ್ ನ ಅಪರಾಧಿಗಳನ್ನು ಆರತಿ ಎತ್ತಿ, ಹಾರ ಹಾಕಿ ಸ್ವಾಗತಿಸಿದ ಮನಸ್ಥಿತಿಗಳೇ ದಲಿತ ಬಾಲಕಿಯ ಅತ್ಯಾಚಾರದಲ್ಲಿ ಭಾಗಿಯಾಗಿವೆ. ಉಡುಪಿ ಘಟನೆಯನ್ನು ಮುಂದಿಟ್ಟು ಇಡೀ ಕರಾವಳಿಯಲ್ಲಿ ಉದ್ವಿಗ್ನತೆ ಸೃಷ್ಟಿಸಲು ಯತ್ನಿಸಿದ ಬಿಜೆಪಿ ಶಾಸಕರುಗಳು ದಲಿತ ಬಾಲಕಿ ಅತ್ಯಾಚಾರ, ಪಕ್ಷಿಕೆರೆಯಲ್ಲಿ ಮಹಿಳೆಯರ ಸ್ನಾನದ ದೃಶ್ಯಗಳ ಕದ್ದು ವೀಡಿಯೋ ಮಾಡುವ ಪ್ರಕರಣಗಳು ಬಯಲಾದ ಮೇಲೆ ಕಣ್ಮರೆಯಾಗಿದ್ದಾರೆ. ಹಿಂದು ಮಹಿಳೆಯರು ಸೌಟು ಹಿಡಿಯುವ ಕೈಯಲ್ಲಿ ಕತ್ತಿ ತಲವಾರು ಹಿಡಿಯಬೇಕು ಎಂದು ಉಡುಪಿಯಲ್ಲಿ ಕರೆನೀಡಿದ್ದ ಶರಣ್ ಪಂಪ್ ವೆಲ್, ಸಂಘಪರಿವಾರದ ಕಾರ್ಯಕರ್ತರಿಂದ ವಿಟ್ಲದಲ್ಲಿ ಸರಣಿ ಅತ್ಯಾಚಾರಕ್ಕೆ ಒಳಗಾದ ದಲಿತ ಬಾಲಕಿಯ ಪ್ರಕರಣದ ನಂತರ ದಲಿತ ಹೆಣ್ಣುಮಕ್ಕಳು ಕೈಯಲ್ಲಿ ಏನನ್ನು ಹಿಡಿಯಲು ಕರೆ ನೀಡುತ್ತಾರೆ ಎಂದು ಪ್ರಶ್ನಿಸಿದರು.

ಡಿಎಸ್ಎಸ್ ಜಿಲ್ಲಾ ಸಂಚಾಲಕ ರಘು ಎಕ್ಕಾರು, ದಲಿತ ಸಂಘಟನೆಗಳ ಒಕ್ಕೂಟದ ಅಶೋಕ್ ಕೊಂಚಾಡಿ, ಚಿಂತಕರಾದ ವಾಸುದೇವ ಉಚ್ಚಿಲ, ಪ್ರೊ. ಉಮೇಶ್ಚಂದ್ರ, ದಸಂಸ ಪದಾಧಿಕಾರಿಗಳಾದ ಸರೋಜಿನಿ ಬಂಟ್ವಾಳ, ಕಲಾವತಿ ಕೋಟೆಕಾರು, ಮಂಜಪ್ಪ ಪುತ್ರನ್, ಸಂಕಪ್ಪ ಕಾಂಚನ್, ರವಿ ಪೇಜಾವರ, ರುಕ್ಕಯ್ಯ ಕರಂಬಾರು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.