ಮಣಿಪುರ: ಮೈತೇಯಿ ಮತ್ತು ಕುಕಿ ನಡುವಣ ಹಿಂಸಾಚಾರ; ಕುಕಿ ಪೀಪಲ್ಸ್‌ ಅಲೆಯನ್ಸ್‌ ಪಕ್ಷದ ಬೆಂಬಲ ವಾಪಸ್‌

ರಾಷ್ಟ್ರೀಯ

ಮಣಿಪುರದ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಕುಕಿ ಪೀಪಲ್ಸ್‌ ಅಲೆಯನ್ಸ್‌ (ಕೆಪಿಎ) ಪಕ್ಷವು ವಾಪಸ್‌ ಪಡೆದಿದೆ.ಪಕ್ಷದ ಅಧ್ಯಕ್ಷ ಟಾಂಗ್ಮಾಂಗ್ ಹಾಕಿಪ್ ಅವರು, ಈ ಕುರಿತು ರಾಜ್ಯಪಾಲೆ ಅನುಸೂಯಾ ಉಯಿಕೆ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಎನ್‌ಡಿಎ ಮೈತ್ರಿಕೂಟ ತೊರೆದಿರುವ ಬಗ್ಗೆ ತಿಳಿಸಿದ್ದಾರೆ.

ಮೈತೇಯಿ ಮತ್ತು ಕುಕಿ ಬುಡಕಟ್ಟು ಸಮುದಾಯದ ನಡುವಣ ಹಿಂಸಾಚಾರದಿಂದ ಕಣಿವೆ ರಾಜ್ಯ ಹೊತ್ತಿ ಉರಿಯುತ್ತಿದೆ. ಸಂಘರ್ಷ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಪಕ್ಷ ಆರೋಪಿಸಿದೆ. ಮಣಿಪುರದ ವಿಧಾನಸಭೆಯಲ್ಲಿ ಒಟ್ಟು 60 ಶಾಸಕರಿದ್ದು, ಈ ಪೈಕಿ ಕೆಪಿಎಯಿಂದ ಇಬ್ಬರು ಚುನಾಯಿತರಾಗಿದ್ದಾರೆ. 32 ಬಿಜೆಪಿ ಶಾಸಕರಿದ್ದಾರೆ. ನಾಗಾ ಪೀಪಲ್ಸ್‌ ಫ್ರಂಟ್‌ನ (ಎನ್‌ಪಿಎಫ್‌) ಐವರು ಸೇರಿದಂತೆ ಮೂವರು ಪಕ್ಷೇತರ ಶಾಸಕರು ಬಿರೇನ್‌ ಸಿಂಗ್‌ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಹಾಗಾಗಿ, ಸರ್ಕಾರದ ಅಸ್ತಿತ್ವಕ್ಕೆ ಯಾವುದೇ ಧಕ್ಕೆಯಾಗಿಲ್ಲ.