ಕಾಂಗ್ರೆಸ್ ಪಕ್ಷಕ್ಕೆ ದುಬಾರಿಯಾದ ದಾವೂದ್ ಬಂಗ್ಲಗುಡ್ಡೆ ಉಚ್ಛಾಟನೆ
ಬಹು ನಿರೀಕ್ಷಿತ ಗುರುಪುರ ಗ್ರಾಮ ಪಂಚಾಯತ್ ಎರಡನೇ ಅವಧಿಯ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಿದ್ದು ಕಾಂಗ್ರೆಸ್ ಉಚ್ಛಾಟಿತ ಸದಸ್ಯ ದಾವೂದ್ ಬಂಗ್ಲಗುಡ್ಡೆ ಕೈ ಮೇಲಾಗಿದೆ.
28 ಸದಸ್ಯರನ್ನೊಳಗೊಂಡ ಗುರುಪುರ ಗ್ರಾಮ ಪಂಚಾಯತ್ ನಲ್ಲಿ 8 ಬಿಜೆಪಿ ಬೆಂಬಲಿತ ಸದಸ್ಯರಿದ್ದರೆ, 9 ಎಸ್ ಡಿಪಿಐ ಬೆಂಬಲಿತ ಸದಸ್ಯರಿದ್ದರು. ಕಾಂಗ್ರೆಸ್ ಬೆಂಬಲಿತ 10 ಮಂದಿ ಸದಸ್ಯರಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊಹಿದ್ದೀನ್ ಬಾವಾ ಪರ ಗುರುತಿಸಿಕೊಂಡ ಸದಸ್ಯ ದಾವೂದ್ ಬಂಗ್ಲಗುಡ್ಡೆ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು.
ಕಾಂಗ್ರೆಸ್ ಪಕ್ಷದ ತೀರ್ಮಾನಕ್ಕೆ ಸೇಡು ತೀರಿಸಿಕೊಂಡ ದಾವೂದ್ ಈ ಬಾರಿ ಎಸ್ ಡಿ ಪಿಐ ಬೆಂಬಲಕ್ಕೆ ನಿಲ್ಲುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರದಿಂದ ಕೆಳಗಿಳಿಯುವಂತೆ ಮಾಡಿದ್ದಾರೆ. ಅಧ್ಯಕ್ಷರಾಗಿ ಎಸ್ ಡಿ ಪಿಐ ಬೆಂಬಲಿತ ಸದಸ್ಯೆ ಸಫಾರಾ ನಾಸೀರ್ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಉಚ್ಛಾಟಿತ ಸದಸ್ಯ ದಾವೂದ್ ಬಂಗ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದಿದ್ದರು.