ನೀವು “ಮುಂಡಾಸಿ” ನ ಪರವಾಗಿದ್ದಿರಿ,ನಾವು ದುಡಿಯುವ ಜನರ “ಮುಟ್ಟಾಳೆ”ಯ ಪರವಾಗಿದ್ದೇವೆ.:ಮುನೀರ್ ಕಾಟಿಪಳ್ಳ

ಕರಾವಳಿ

ಸೌಜನ್ಯ ಹೋರಾಟದ ಹಿಂದೆ ಅಲ್ಲ,ಮುಂದುಗಡೆಯಲ್ಲೇ ಕಮ್ಯೂನಿಸ್ಟರಿದ್ದಾರೆ.

“ಸೌಜನ್ಯ ಹೋರಾಟದ ಹಿಂದೆ ಕಮ್ಯೂನಿಸ್ಟರ ಷಡ್ಯಂತ್ರ ಇದೆ” ಎಂದು ಬಲಪಂಥೀಯ (ಕೋಮುವಾದಿ) ಗುಂಪುಗಳು ಸಾಮಾಜಿಕ ಜಾಲತಾಣದಲ್ಲಿ ಕರುಣಾಜನಕವಾಗಿ ಆಕ್ರಂದಿಸುತ್ತಿವೆ. ಜನತೆ ಎಚ್ಚರ ವಹಿಸಬೇಕು ಎಂದು ಆಗ್ರಹಿಸುತ್ತಿವೆ. ಸೌಜನ್ಯ ಪರ ಹೋರಾಟದಲ್ಲಿರುವ ಎಲ್ಲರಿಗೂ ಕಮ್ಯೂನಿಸ್ಟ್ ಹಣೆಪಟ್ಟಿ ಹಚ್ಚುತ್ತಿವೆ. (ಸೌಜನ್ಯ ಹೋರಾಟದ ಹಿಂದೆ ಅಲ್ಲ ಮುಂದುಗಡೆಯಲ್ಲೇ ಕಮ್ಯೂನಿಸ್ಟರಿದ್ದಾರೆ. ಸೌಜನ್ಯ ಕೊಲೆಯಾದ ಆರಂಭದ ದಿನದಿಂದಲೇ ಇದ್ದಾರೆ. ಈಗಲೂ ಇದ್ದಾರೆ, ಮುಂದೆಯೂ ಇರುತ್ತಾರೆ)

ಕಮ್ಯೂನಿಸ್ಟರು ದಿಢೀರಾಗಿ ಈಗ ಎಲ್ಲಿಂದಲೂ ಬಂದಿಲ್ಲ. ನಿಮ್ಮ (ಕೋಮುವಾದಿಗಳ) ಮಾತೃಸಂಘ ಭೂ ಒಡೆಯರ, ಫ್ಯೂಡಲ್ ದೊರೆಗಳ ಸೇವಕರಾಗಿ, ಬಾಡಿಗೆ ಭಂಟರಾಗಿ ಭೂಹೀನರ, ಬಡವರ ರಕ್ತವನ್ನು ಜಿಗಣೆಯಂತೆ ಹೀರುತ್ತಿದ್ದ 40, 50, 60… ರ ದಶಕದಲ್ಲೇ ಕಮ್ಯೂನಿಸ್ಟರು ತುಳುನಾಡಿನಲ್ಲಿ ರಕ್ತವನ್ನು ಬೆವರಾಗಿ ಹರಿಸಿ ಫ್ಯೂಡಲ್ ಗಳ, ಜಮೀನ್ದಾರ ಧಣಿಗಳ ವಿರುದ್ದ ಹೋರಾಟ ನಡೆಸಿದ್ದಾರೆ. ಗೇಣಿದಾರರ ಜಮೀನಿಗೆ ಕೆಂಬಾವುಟ ಹಿಡಿದು ಕಾವಲು ನಿಂತಿದ್ದಾರೆ, ಭೂಮಿಯ ಒಡೆತನ ಕೊಡಿಸಿದ್ದಾರೆ. ಆಗ ನೀವು ಭೂ ಒಡೆಯರ, ಧಣಿಗಳ ಜೊತೆ ನಿಂತು ಕಮ್ಯೂನಿಸ್ಟರ ವಿರುದ್ದ ಹಿಂಸಾಚಾರ ನಡೆಸುತ್ತಿದ್ದಿರಿ.

ತುಳುನಾಡಿನ ಹೆಂಚು ಕಾರ್ಮಿಕರು, ನೇಯ್ಗೆ ಕಾರ್ಮಿಕರು, ಬೀಡಿ ಕಾರ್ಮಿಕರು ಜೀತದಾಳುಗಳಂತೆ ಮಾಲಕ ವರ್ಗದ ಮರ್ಜಿಯಂತೆ ದುಡಿಯಬೇಕಿದ್ದ ಆ ಕಾಲದಲ್ಲಿ ಕಮ್ಯೂನಿಸ್ಟರು ಆ ಬಡಪಾಯಿ ಕಾರ್ಮಿಕರಿಗೆ ಸಂಘ ಕಟ್ಟಿ, ಅದರಡಿ ಅವರನ್ನು ಸಂಘಟಿಸಿ ಮಜೂರಿ, ಕನಿಷ್ಟ ವೇತನ, ಪ್ರಾವಿಡೆಂಟ್ ಫಂಡ್, ಇಎಸ್ಐ, ಪಿಂಚಣಿ ಸೌಲಭ್ಯಗಳನ್ನು ಕೊಡಿಸಿ ಮನುಷ್ಯರಂತೆ ಬಾಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಇಡೀ ಬದುಕನ್ನು ಗಂಧದ ಕೊರಡಿನಂತೆ ಕಮ್ಯೂನಿಸ್ಟರು ತೇಯ್ದಿದ್ದಾರೆ. ನೀವು ಮಾತ್ರ ಆಗಲೂ ಅದೇ ಮಾಲಕ ವರ್ಗದ ಧಣಿಗಳ ಹೆಬ್ಬಾಗಿಲು ಕಾಯುತ್ತಿದ್ದಿರಿ.

ಧರ್ಮಸ್ಥಳದಲ್ಲಿ 1987 ರಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತ ದೇವಾನಂದರ ಮಗಳು ಪದ್ಮಲತಾಳನ್ನು ಅಪಹರಿಸಿ ಒಂದು ತಿಂಗಳ ಕಾಲ ಅತ್ಯಾಚಾರ ನಡೆಸಿ, ನಂತರ ಕೊಲೆಗೆಯ್ದು ನೆರಿಯಾ ಹೊಳೆಯಲ್ಲಿ ಬಿಸಾಡಲಾಯಿತು. ಕಮ್ಯೂನಿಸ್ಟರು ಅದಕ್ಕಿಂತ ಮೊದಲೂ ಹೋರಾಟ ನಡೆಸಿದ್ದಾರೆ, ಆಗಲೂ ಹೋರಾಟ ನಡೆಸಿದ್ದಾರೆ. ನಂತರವೂ ಹೋರಾಟ ನಡೆಸುತ್ತಾ ಬಂದಿದ್ದಾರೆ, ಸೌಜನ್ಯ ಕೊಲೆಯಾದ ಮೇಲೂ ಹೋರಾಟ ಮುಂದುವರಿಸಿದ್ದಾರೆ. ಹೀಗೆ ಜನರ ಪರವಾದ ಕಮ್ಯುನಿಸ್ಟರ ಹೋರಾಟ ಮುಂದುವರಿಯುತ್ತಾ ಸಾಗಲಿದೆ.

ನೀವು ಈ ಕಾಲದ ಉದ್ದಕ್ಕೂ “ಮುಂಡಾಸಿ” ನ ಪರವಾಗಿದ್ದಿರಿ, ನಾವು ದುಡಿಯುವ ಜನರ “ಮುಟ್ಟಾಳೆ” ಯ ಪರ. ಕಮ್ಯೂನಿಸ್ಟ್ ಆಗಲು, ಹಾಗಂತ ಕರೆಸಿಕೊಳ್ಳಲೂ ಒಂದು ಯೋಗ್ಯತೆ ಬೇಕು. ಅದು ಹೆಮ್ಮೆಯ ಸಂಗತಿ. ಅದು ನಿಮಗಿಲ್ಲ, ನಿಮ್ಮಿಂದ ಅದು ಸಾಧ್ಯವೂ ಇಲ್ಲ. ನಿಮ್ಮದೇನಿದ್ದರೂ ಮಾಲಕ ವರ್ಗದ ಧಣಿಗಳ (ಅರ)ಮನೆಯ ಹೆಬ್ಬಾಗಿಲು ಕಾಯುವ ಕೆಲಸ. ಅದಷ್ಟೇ ನಿಮ್ಮ ಯೋಗ್ಯತೆ.