ಕಮ್ಯೂನಿಟಿ ಸೆಂಟರ್ ನಡೆಸುತ್ತಿರುವ ಶೈಕ್ಷಣಿಕ ಪ್ರಯೋಗ ಮತ್ತು ಫಲಿತಾಂಶಗಳು ನಾನು ಇದುವರೆಗೂ ಎಲ್ಲೂ ನೋಡಿಲ್ಲ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ ಸೆಂಟರಿನ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಎಸಿಪಿ ಗೀತಾ ಕುಲಕರ್ಣಿ ಅಭಿಪ್ರಾಯ ಪಟ್ಟರು. ಅವರು ಬರಕಾ ಕಾಲೇಜಿನ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಪಧವಿ ಪಡೆಯುತ್ತಿರುವ ಕಮ್ಯೂನಿಟಿ ಸೆಂಟರಿನ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡುತ್ತಾ ಮುಸ್ಲಿಂ ಯುವತಿಯರ ಮತ್ತು ಯುವಕರ ಆಸಕ್ತಿ, ಕೌಶಲ್ಯ ಹಾಗೂ ಜ್ಞಾನಕ್ಕೆ ಪ್ರೋತ್ಸಾಹ ನೀಡುವ ಸೆಂಟರಿನ ಕಾರ್ಯ ಪ್ರಶಂಸನೀಯ ಎಂದರು.

ಸೆಂಟರಿನ ಮೂಲಕ ರಾಜ್ಯದ ವಿವಿಧ ಕಾನೂನು ಕಾಲೇಜಿನಲ್ಲಿ ಪಧವಿ ಪಡೆಯುತ್ತಿರುವ ಮತ್ತು ಪಡೆದ ಎಲ್.ಎಲ್.ಬಿ. ವಿದ್ಯಾರ್ಥಿಗಳನ್ನು. ಎಂ.ಬಿ.ಬಿ.ಎಸ್ ಸಹಿತ ಮೆಡಿಕಲ್ ಕ್ಷೇತ್ರದಲ್ಲಿ ಪಧವಿ ಪಡೆಯುತ್ತಿರುವ ವಿದ್ಯಾರ್ಥಿಗಳ, ಪ್ರೊಫೇಸರ್, ಸಿ.ಎ, ಸರಕಾರಿ ಉಧ್ಯೋಗ ಮುಂತಾದ ಕ್ಷೇತ್ರದಲ್ಲಿರುವ ಸೆಂಟರಿನ ವಿದ್ಯಾರ್ಥಿಗಳ ಸಮಾವೇಶ ಸರಳವಾಗಿ ನಡೆಯಿತು. ಈ ಸಂದರ್ಭ ನೀಟ್ ನಲ್ಲಿ ಈ ಬಾರಿ ಸಾಧನೆ ಮಾಡಿದ 10 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸೆಂಟರ್ ನ ಮಾರ್ಗದರ್ಶಕರಾದ ಜನಾಬ್ ಜಿ.ಎ ಬಾವಾ, ನಾವು ಕೊರೊನಾ ಕಾಲದಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಕಾಳಜಿಯಿಂದ ಆರಂಭಿಸಿದ ಈ ಸಂಸ್ಥೆ ಸಣ್ಣ ಸಮಯದಲ್ಲಿ ರಾಜ್ಯಕ್ಕೆ ಮಾದರಿಯಾಗಿ ಬೆಳೆದಿರುವುದು ನೋಡಿ ಅಭಿಮಾನವಾಗುತ್ತಿದೆ ಎಂದರು. ಕಣಚೂರು ಮೆಡಿಕಲ್ ಕಾಲೇಜು ಇದರ ನಿರ್ಧೇಶಕರಾದ ಡಾ. ಅಬ್ದುಲ್ ರಹ್ಮಾನ್ ರವರು ಮಾತನಾಡಿ ನನ್ನ ತಂದೆಯವರು ನನಗೆ ಸ್ಪೂರ್ತಿ, ಅವರು ಕಮ್ಯೂನಿಟಿ ಸೆಂಟರ್ ಬಗ್ಗೆ ವಿಶೇಷ ಆಸಕ್ತಿ ಹೊಂದಿದವರು. ಅದಕ್ಕೆ ಕಾರಣ ಏನೆಂದು ಇಂದಿನ ಕಾರ್ಯಕ್ರಮ ನೋಡಿದಾಗ ಅರ್ಥವಾಯಿತು. ಪ್ರತೀಯೊಬ್ಬರು ಸೆಂಟರಿನ ಯೋಜನೆ ವೀಕ್ಷಿಸಬೇಕು ಎಂದು ಸಲಹೆ ನೀಡಿದರು.

ಶಾಂತಿ ಪ್ರಕಾಶನ ಇದರ ಜನಾಬ್ ಮಹಮ್ಮದ್ ಕುಂಞಯವರು ಮಾತನಾಡುತ್ತಾ ಶ್ರೇಷ್ಠ ಸಮಾಜ ಕೇವಲ ಬೌದ್ದಿಕ ಜ್ಞಾನದಿಂದ ಮಾತ್ರವೇ ನಿರ್ಮಾಣ ಆಗುವುದಿಲ್ಲ ಅದಕ್ಕೆ ಕಾಳಜಿ ಮತ್ತು ಆತ್ಮಸಾಕ್ಷಿಯ ಪ್ರಜ್ಞೆ ಬೇಕು. ನಾವು ಶಿಕ್ಷಣದಲ್ಲಿ ಮಾನವೀಯತೆ ಮತ್ತು ಮೌಲ್ಯಗಳಿಗೆ ಹೆಚ್ಚು ಒತ್ತು ಕೊಡಬೇಕು ಎಂದರು. ವೈಟ್ ಸ್ಟೋನ್ ಜನಾಬ್ ಬಿ.ಎಂ.ಶರೀಫ್ ರವರ ಫುತ್ರ ಶೊಯಿಬ್ ಶೇಖ್ ಮಹಮ್ಮದ್ , ಇಬ್ಬರು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವೈಟ್ ಸ್ಟೋನ್ ಫೌಂಡೇಶನ್ ಮೂಲಕ ನೀಡಿದರು. ಈ ಮೊದಲು ಜನಾಬ್ ಸಯ್ಯದ್ ಬ್ಯಾರಿವರು ಬ್ಯಾರೀಸ್ ಗ್ರೂಪ್ ಮೂಲಕ ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ಮತ್ತು ಮೂವರು ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ದಾಖಲಾತಿಗೆ ಬೇಕಾದ ಫೀಸನ್ನು ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಮ್ಯೂನಿಟಿ ಸೆಂಟರಿನ ಅಧ್ಯಕ್ಷರಾದ ಜನಾಬ್ ಅಮ್ಜದ್ ಖಾನ್ ಪೊಳ್ಯರವರು, ನಾವು ಸೆಂಟರ್ ಆರಂಭಿಸುವಾಗ ಇಬ್ಬರು ಕೆರಿಯರ್ ಕೌನ್ಸಿಲರ್ ಗಳು ಇದ್ದರು, ಈಗ 40 ಕ್ಕಿಂತ ಹೆಚ್ಚು ಕೌನ್ಸಿಲರ್ ಗಳನ್ನು ಸೆಂಟರ್ ತರಬೇತುಗೊಳಿಸಿದೆ. ಅವರು ವಿವಿಧ ಶಿಕ್ಷಣ ಸಂಸ್ಥೆ ಮತ್ತು ಸಂಘ ಸಂಸ್ಥೆಗಳ ಶೈಕ್ಷಣಿಕ ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ನಮ್ಮ ಸೆಂಟರ್ ವಿದ್ಯಾರ್ಥಿಗಳ ಸಹಭಾಗಿತ್ವದಿಂದ ಇಷ್ಟು ಬೆಳೆದು ಬಂದಿದೆ. ನಾವು ಇಲ್ಲದಿದ್ದರೂ ಸೆಂಟರನ್ನು ಈ ವಿದ್ಯಾರ್ಥಿಗಳು ಮುನ್ನಡೆಸುವ ಸಾಮಾಜಿಕ ನಾಯಕತ್ವದ ತರಭೇತಿ ಇವರಿಗೆ ನೀಡಿದ್ದೇವೆ ಎಂದರು.
ನಿವೃತ್ತ ಅಧಿಕಾರಗಳಿಗೆ ಸ್ಪೂರ್ತಿಯಾಗಿ ಗ್ರಾಟಿಟ್ಯೂಡ್ ಅವಾರ್ಡನ್ನು ನೀಡಲಾಯಿತು. ಪೊಲೀಸ್ ಇಲಾಖೆಯಿಂದ ನಿವೃತ್ತಿಯ ನಂತರ ಸಾಮಾಜಿಕ ಮತ್ತು ಶೈಕ್ಷಣಿಕ ಯೋಜನೆಗಳನ್ನು ಹಮೀದ್ ಷಾ ಟ್ರಸ್ಘ್ ಮೂಲಕ ಮಾಡುತ್ತಿರುವ ಜನಾಬ್ ಜಿ.ಎ.ಬಾವಾರವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಉಭಯ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಮೀಫ್ ನ ಅಧ್ಯಕ್ಷರಾದ ನಿವೃತ್ತ ರೆವೆನ್ಯೂ ಅಧಿಕಾರಿ ಮೂಸಬ್ಬ ಬ್ಯಾರಿಯವರನ್ನು, ಅವರ ನೇತೃತ್ವದಲ್ಲಿ ಮೀಫ್ ಮಾಡಿದ ಸಾಧನೆ ಗುರುತಿಸಿ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳ ಪೈಕಿ ಸೆಂಟರಿನಲ್ಲಿ ಶ್ರದ್ಧೆ ಮತ್ತು ಕಾಳಜಿಯಿಂದ ಸೇವೆ ಸಲ್ಲಿಸಿದ ಎನ್.ಪಿ.ಟಿ ವಿದ್ಯಾರ್ಥಿನಿ ಇಸ್ಮತ್, ಬಿಫಾರ್ಮಾ ವಿದ್ಯಾರ್ಥಿನಿ ಅಫೀಝ, ಬಿಎಸ್ಸಿ ಫಿಸಿಕ್ಸ್ ನ ವಿದ್ಯಾರ್ಥಿನಿ ಅಮ್ನಾಝ್, ಬಿಕಾಂ ವಿದ್ಯಾರ್ಥಿ ಸಂಶೀರ್, ಇಂಜಿನಿಯರಿಂಗ್ ವಿದ್ಯಾರ್ಥಿ ಉಯಿಸಮ್ ರನ್ನು ಕೃತಜ್ಞತಾ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಇಚ್ಚಾಶಕ್ತಿ ಇದ್ದರೆ ಸಮುದಾಯದಲ್ಲಿ ಅಚ್ಚರಿ ಸೃಷ್ಠಿಸಲು ಸಾಧ್ಯವಿದೆ ಎಂದು ಕಮ್ಯೂನಿಟಿ ಸೆಂಟರ್ ತೋರಿಸಿದೆ ಎಂದು ಹಿರಿಯ ಪತ್ರಕರ್ತ ಬಿ.ಎಂ ಹನೀಫ್ ಹೇಳಿದರು. ಸೆಂಟರಿನಲ್ಲಿ ಕೌನ್ಸಿಲಿಂಗ್ ಮಾರ್ಗದರ್ಶನ ನೀಡುತ್ತಿರುವ ಜನಾಬ್ ರಫೀಕ್ ಮಾಸೃರ್ ರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬರಕ ಇಂಟರ್ ನ್ಯಾಶನಲ್ ಕಾಲೇಜಿನ ಶಮೀರ್, ಕಮ್ಯೂನಿಟಿ ರಿಸರ್ಚ್ ಎಂಡ್ ಡೆವಲಪ್ಪ್ ಮೆಂಟ್ ಫೌಂಡೇಶನ್ ಇದರ ಟ್ರಸ್ಟಿಗಳಾದ ಶಮೀರ್ ಕಲ್ಲಾರೆ, ಮುನೀರ್ ವಿಟ್ಲ, ಇಮ್ತಿಯಾಝ್ ಪಾರ್ಲೆ, ನಝೀರ್, ಹನೀಪ್ ಪುತ್ತೂರು ರವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಡಾ.ವಾಜಿದಾ, ರಮ್ಲತ್, ಅಫೀಫ ಅವರು ನಿರ್ವಹಿಸಿದರು.