ಕೇಂದ್ರ ಸರಕಾರದ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ, ಬೆಲೆ ಏರಿಕೆ ತಡೆಗಟ್ಟಲು, ವಿದ್ಯುತ್ ಮಸೂದೆ ಹಿಂಪಡೆಯಲು ಮತ್ತು ಕೋಮುದ್ವೇಷ ರಾಜಕಾರಣವನ್ನು ವಿರೋಧಿಸಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗಾಗಿ ಅಹೋರಾತ್ರೀ ಧರಣಿ ಸತ್ಯಾಗ್ರಹವು ಕರ್ನಾಟಕ ಪ್ರಾಂತ ರೈತ ಸಂಘ (ಎ.ಐ.ಕೆ.ಎಸ್ ಎಸ್) ಮತ್ತು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು )ಇದರ ಜಂಟಿ ಆಶ್ರಯದಲ್ಲಿ 14-8-2023 ಸಂಜೆ 6ರಿಂದ ಮಂಗಳೂರು ಪುರಭವನದ ಮುಖ್ಯ ದ್ವಾರದ ಬಳಿಯಲ್ಲಿ ಪ್ರಾರಂಭಗೊಂಡಿತು.

ಈ ಧರಣಿಯನ್ನು ಉದ್ಘಾಟಿಸಿ ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿರುವ ಕೆ ಯಾದವ ಶೆಟ್ಟಿ ಮಾತನಾಡುತ್ತಾ ಭಾರತವು 77ನೇ ಸ್ವಾತಂತ್ರ್ಯ ಉತ್ಸವದ ಆಚರಣೆಗೆ ಅಣಿಯಾಗುತ್ತಿದೆ. ಆದರೆ ಯಾವ ಕನಸನ್ನು ಹೊತ್ತು ಭಾರತದ ಸ್ವಾತಂತ್ರ್ಯ ಹೋರಾಟ ನಡೆಯಿತೋ ಅಂತಹ ಕನಸಿನ ಭಾರತ ನಿರ್ಮಾಣವಾಗಲೇ ಇಲ್ಲ. ಇತ್ತೀಚಿನ ಬೆಳವಣಿಗೆಯಂತೂ ನೀಡಿರುವ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಸ್ಥಿತಿಯನ್ನು ಈ ದೇಶದ ಕೇಂದ್ರ ಸರ್ಕಾರವು ತಂದೊಡ್ಡಿದೆ. ಪ್ರಜಾಪ್ರಭುತ್ವ ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರಿಗೆ ಜನರ ಸಮಸ್ಯೆಯ ಕನಿಷ್ಠ ಅರಿವು ಕೂಡ ಇಲ್ಲ. ದೇಶದ ರೈತರು ತಮ್ಮ ಸಮಸ್ಯೆಗಳ ಈಡೇರಿಕಗಾಗಿ ದೆಹಲಿಯಲ್ಲಿ ವರ್ಷಗಳ ಕಾಲ ಪ್ರತಿಭಟನೆಯಲ್ಲಿ ನಿರತರಾದರೂ ಆ ರೈತ ಹೋರಾಟದಲ್ಲಿ 730ಕ್ಕೂ ಅಧಿಕ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ಆದರೆ ಪ್ರಧಾನಿಗಳು ಮಾತ್ರ ವಿದೇಶಿ ಪ್ರಯಾಣದ ಮೋಜಿನಲ್ಲಿದ್ದರು. ಇಡೀ ದೇಶವು ಕೊರೋನಾದಿಂದ ತತ್ತರಿಸಿ ಜನತೆಯು ಸಂಕಷ್ಟದಲ್ಲಿರುವಾಗ ಈ ದೇಶದ ಖಾಸಗಿ ಬಂಡವಾಳಗಾರರಿಗೆ ಒಂದು ಲಕ್ಷ ಕೋಟಿ ಸಹಾಯ ನೀಡಿದರೆ ವಿನಹ ಇಲ್ಲಿನ ಜನತೆಯ ನೋವುಗಳಿಗೆ ಸ್ಪಂದಿಸಲಿಲ್ಲ. ಮೊನ್ನೆಯಷ್ಟೇ ಮಣಿಪುರದಲ್ಲಿ ನಡೆದ ಕೋಮುಗಲಭೆಗಳಲ್ಲಿ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾದರೂ ಕೂಡ ಪ್ರಧಾನಿಯು ಕರ್ನಾಟಕದ ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಎಂಬುದನ್ನು ಮರೆತು ಬೀದಿ ಬೀದಿ ಸುತ್ತುತ್ತಿದ್ದರೆ ವಿನಹ ಮಣಿಪುರದತ್ತ ತಿರುಗಿಯೂ ನೋಡಲಿಲ್ಲ. ಇಂತಹ ಪ್ರಜಾಪ್ರಭುತ್ವ ಸರಕಾರದ ಪ್ರಧಾನಿಯೊಬ್ಬರು ಪ್ರಜೆಗಳ ನೋವುಗಳಿಗೆ ಕಿಂಚಿತ್ತು ಸ್ಪಂದಿಸದೆ ಈ ದೇಶದ ಸರಕಾರಿ ಸ್ವತ್ತುಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಮಾರಲು ಹೊರಟಿದ್ದಾರೆ. ಗೋ ಹತ್ಯೆ ನಿಷೇಧ ಮಸೂದೆ, ವಿದ್ಯುತ್ ಮಸೂದೆ, ಭೂ ಮಸೂದೆ, ಕಾರ್ಮಿಕ ಮಸೂದೆಗಳ ಮೂಲಕ ಇಲ್ಲಿನ ರೈತ ಕಾರ್ಮಿಕರ ಬದುಕನ್ನು ಬೀದಿಗೆ ತರುತ್ತಿದ್ದಾರೆ ಎಂದರು.

ಸಿಐಟಿಯು ಮುಖಂಡರಾದ ಜೆ ಬಾಲಕೃಷ್ಣ ಶೆಟ್ಟಿ ಮಾತನಾಡುತ್ತಾ ಈ ದೇಶದ ಸ್ವಾತಂತ್ರ್ಯ ಪ್ರಧಾನಿಗೆ ಸೆಂಗೋಲ್ ರಾಜದಂಡ ಸಿಕ್ಕಂತೆ ಸುಲಭವಾಗಿ ಸಿಕ್ಕದ್ದಲ್ಲ. ಈ ದೇಶದ ಸ್ವಾತಂತ್ರ್ಯ ಅಂದರೆ ಅದು ರೈತ, ಕಾರ್ಮಿಕರ ಹೋರಾಟದ ಫಲ, ತ್ಯಾಗ ಬಲಿದಾನದ ಪ್ರತೀಕ ಎಂದು ನೆನಪಿರಲಿ. ಇಲ್ಲಿನ ಸ್ವಾತಂತ್ರ್ಯ ನಂತರದಲ್ಲಿ ರಚನೆಯಾದ ಪ್ರಗತಿಪರ ಕಾನೂನುಗಳು ನಮ್ಮ ಹೋರಾಟದಿಂದ ನಮಗೆ ದೊರೆತ ಹಕ್ಕುಗಳು ,ಇಂತಹ ಹಕ್ಕುಗಳನ್ನು ಜನರಿಂದ ಕಸಿದುಕೊಂಡರೆ ಸಂವಿಧಾನದ ಕಲ್ಯಾಣ ,ರಾಜ್ಯದ ಕಲ್ಪನೆಯನ್ನು ಇಲ್ಲವಾಗಿಸಲು ಸರಕಾರವು ಹೊಂಚು ಹಾಕಿದರೆ ಗಂಭೀರ ಪರಿಣಾಮವನ್ನು ಎದುರಿಸಬೇಕಾಗಿತ್ತು ಎಂದರು.
ಧರಣಿ ಸತ್ಯಾಗ್ರಹ ವನ್ನು ಉದ್ದೇಶಿಸಿ CITU ನಾಯಕರಾದ ಸುನಿಲ್ ಕುಮಾರ್ ಬಜಾಲ್,ವಸಂತ ಆಚಾರಿ, ರೈತ ಸಂಘದ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್,DYFI ನಾಯಕರಾದ ಮುನೀರ್ ಕಾಟಿಪಳ್ಳ, ಪ್ರಗತಿಪರ ಚಿಂತಕರ ಡಾ.ಕೃಷ್ಣಪ್ಪ ಕೊಂಚಾಡಿ, ಸುಕುಮಾರ್,b m ಭಟ್ ಮುಂತಾದವರು ಮಾತನಾಡಿದರು.
ಸತ್ಯಾಗ್ರಹದಲ್ಲಿ CITU ನಾಯಕರಾದ ಯೋಗೀಶ್ ಜಪ್ಪಿನಮೋಗರು, ರಾಧಾ ಮೂಡಬಿದ್ರಿ, ರಮಣಿ,ಪದ್ಮಾವತಿ ಶೆಟ್ಟಿ,ರವಿಚಂದ್ರ ಕೊಂಚಾಡಿ, ಜಯಂತ ನಾಯಕ್, ಸುಂದರ ಕುಂಪಲ, ರೋಹಿದಾಸ್, ನೊಣಯ್ಯಾ ಗೌಡ,ವಸಂತಿ ಕುಪ್ಪೆಪದವು,ಶಂಕರ ಮೂಡಬಿದ್ರಿ,ಮಹಮ್ಮದ್ ಮುಸ್ತಫಾ,ಗಿರಿಜಾ ಮೂಡಬಿದ್ರಿ,ಅನ್ಸಾರ್,ವಿಲ್ಲಿ ವಿಲ್ಸನ್,ಚಂದ್ರಹಾಸ ಪಿಲಾರ್,ಮೋಹನ್ ಚಂದ್ರ,ಸುಧಾಕರ್,ಯುವಜನ ಮುಖಂಡರಾದ ಸಂತೋಷ್ ಬಜಾಲ್,ನವೀನ್ ಕೊಂಚಾಡಿ,ಜಗದೀಶ್ ಬಜಾಲ್,ತಯ್ಯುಬ್ ಬೆಂಗರೆ,ವಿಧ್ಯಾರ್ಥಿ ನಾಯಕರಾದ ವಿನೀತ್ ದೇವಾಡಿಗ,ವಿನುಷ ರಮಣ,ದಲಿತ ಹಕ್ಕುಗಳ ನಾಯಕರಾದ ರಾಧಾಕೃಷ್ಣ,ಕೃಷ್ಣ ತಣ್ಣೀರುಬಾವಿ,ಆದಿವಾಸಿ ಮುಖಂಡರಾದ ಶೇಖರ್ ವಾಮಂಜೂರು,ವಿನೋದ್,ಮಹಿಳಾ ಮುಖಂಡರಾದ ಭಾರತಿ ಬೋಳಾರ,ವಿಲಾಸಿನಿ ಮುಂತಾದವರು ಉಪಸ್ಥಿತರಿದ್ದರು