ರಾಜ್ಯದಾದ್ಯಂತ ಡೆಂಗ್ಯೂ ಆರ್ಭಟ..!

ರಾಜ್ಯ

ಕರಾವಳಿ ಭಾಗದಲ್ಲಿ 236 ಪ್ರಕರಣಗಳು ಪತ್ತೆ

ಮಳೆ ಮತ್ತು ತಾಪಮಾನದ ಕುಸಿತವು ನಗರದಲ್ಲಿ ಆರೋಗ್ಯದ ಕಾಳಜಿಗೆ ಕಾರಣವಾಗುತ್ತಿದೆ. ರಾಜ್ಯದಾದ್ಯಂತ ಸಾಂಕ್ರಾಮಿಕ ರೋಗಗಳು, ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆತಂಕಕ್ಕೆ ಕಾರಣವಾಗಿದೆ. 2022ಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಶೇ.22ರಷ್ಟು ಏರಿಕೆಗಳು ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ ವರ್ಷ ಜನವರಿಯಿಂದ ಆಗಸ್ಟ್ ವರೆಗೆ 4,507 ಡೆಂಗ್ಯು ಪ್ರಕರಣಗಳು ಪತ್ತೆಯಾಗಿದ್ದವು. ಆದರೆ, ಈ ವರ್ಷ ಆಗಸ್ಟ್ 11 ರವರೆಗೆ, 5,526 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಶೇ.22ರಷ್ಟು ಹೆಚ್ಚಳಗಳಾಗಿರುವುದು ಕಂಡು ಬಂದಿದೆ.ಬೆಂಗಳೂರು ಜೊತೆಗೆ ಮೈಸೂರು (353), ವಿಜಯಪುರ (146), ಶಿವಮೊಗ್ಗ (155), ದಕ್ಷಿಣ ಕನ್ನಡ (110), ಉಡುಪಿ (126) ಮತ್ತು ಬೆಳಗಾವಿ (135)ಯಲ್ಲಿಯೂ ಹೆಚ್ಚಿನ ಸಂಖ್ಯೆಯ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.

ಈಡಿಸ್ ಸೊಳ್ಳೆಗಳು ಡೆಂಗ್ಯೂವಿಗೆ ಕಾರಣವಾಗುತ್ತಿದ್ದು, ಸೊಳ್ಳೆಯು ಜಿಕಾ, ಚಿಕೂನ್‌ಗುನ್ಯಾ ಮತ್ತು ಇತರ ವೈರಸ್‌ಗಳನ್ನು ಸಹ ಹರಡುತ್ತಿವೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು ಜಾಗತಿಕವಾಗಿ ಪ್ರತಿ ವರ್ಷ ಸುಮಾರು 400 ಮಿಲಿಯನ್ ಜನರು ಡೆಂಗ್ಯೂ ಸೋಂಕಿಗೆ ಒಳಗಾಗುತ್ತಾರೆ ಎಂದು ಹೇಳಿದೆ. ಕಳೆದ ವರ್ಷ ನಾಲ್ವರು ಡೆಂಗ್ಯೂವಿಗೆ ಬಲಿಯಾಗಿದ್ದರು. ಆದರೆ, ಈ ವರ್ಷ ಯಾವುದೇ ಸಾವುಗಳು ವರದಿಯಾಗಿಲ್ಲ.

ಸಾಂಕ್ರಾಮಿಕ ರೋಗ ಕೋವಿಡ್ ಪರಿಣಾಮ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವಂತೆ ಮಾಡಿತ್ತು. ಹೀಗಾಗಿ ಮಕ್ಕಳನ್ನು ಡೆಂಗ್ಯೂ ಹೆಚ್ಚು ಬಾಧಿಸುತ್ತಿದೆ. ಡೆಂಗ್ಯೂ ಜೊತೆಗೆ ವೈರಲ್ ಫೀವರ್, ಟೈಫಾಯಿಡ್, ತೀವ್ರವಾದ ಅತಿಸಾರ ರೋಗ ಮತ್ತು ನ್ಯುಮೋನಿಯಾ ಪ್ರಕರಣಗಳಲ್ಲೂ ಕೂಡ ಏರಿಕೆಗಳು ಕಂಡುಬಂದಿವೆ.