ಜಾತ್ರೆ ವ್ಯಾಪಾರಿಗಳಿಗೆ ಸಮಾನ ಅವಕಾಶ ನೀಡಿ,ಸೂಕ್ತ ಭದ್ರತೆ ಒದಗಿಸಬೇಕು. ಬದುಕುವ ಹಕ್ಕಿನ ಮೇಲೆ ಧಾಳಿ ಮಾಡುವವರ ವಿರುದ್ಧ ಕ್ರಮ ಜರುಗಿಸಬೇಕು

ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸರ್ವ ಧರ್ಮ ಕ್ಷೇತ್ರಗಳ ಜಾತ್ರೆ ಆಯನ,ಉತ್ಸವ, ಉರೂಸ್ ಹಾಗೂ ಇತರೆ ಧಾರ್ಮಿಕ ಕಾರ್ಯ ಕ್ರಮಗಳ ಸಂಧರ್ಭದಲ್ಲಿ ಸಂತೆ ವ್ಯಾಪಾರ ಮಾಡುವ ಸಂತೆ ವ್ಯಾಪಾರಿಗಳ ನಡುವೆ ಕೋಮು ದ್ವೇಷ ಹರಡಲು ಅನ್ಯಧರ್ಮಿಯರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂಬ ಬ್ಯಾನರ್ ಗಳನ್ನು ಹಾಕಿ ಕೋಮು ಸಂಘರ್ಷ ಸೃಷ್ಟಿ ಮಾಡುವ ಕೀಳು ಮಟ್ಟದ ರಾಜಕಾರಣ ಉಭಯ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಕಳೆದ 30-40 ವರ್ಷಗಳಿಂದ ಜಾತ್ರೆ ಉತ್ಸವ ಉರೂಸ್ ಗಳಲ್ಲಿ ಸಂತೆ ವ್ಯಾಪಾರವನ್ನು ಮಾಡಿಕೊಂಡು ಬದುಕು ಕಟ್ಟಿರುವ ಸಾವಿರಾರು ಕುಟುಂಬಗಳ ಬದುಕು ಅಭದ್ರತೆಯನ್ನು ಎದುರಿಸುತ್ತಿದೆ.

ಜಾತ್ರೆ ವ್ಯಾಪಾರಿಗಳು ಪುಣ್ಯ ಕ್ಷೇತ್ರಗಳಲ್ಲಿ ವ್ಯಾಪಾರ ಮಾಡಿ ತಮ್ಮ ಕುಟುಂಬವನ್ನು ಸಲಹುವುದರ ಜೊತೆಗೆ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಗೂ ಕೊಡುಗೆಯನ್ನು ಕೊಡುತ್ತಿದ್ದಾರೆ. ವ್ಯಾಪಾರಿಗಳು ಸರ್ವ ಧರ್ಮ ಕ್ಷೇತ್ರಗಳ ಜಾತ್ರೆ, ಉರೂಸ್, ಉತ್ಸವಗಳಲ್ಲಿ ನ್ಯಾಯಯುತ ಏಲಂ ಪ್ರಕ್ರಿಯೆಗಳಲ್ಲಿ ಭಾಗವಹಿಸಿ ಶಿಸ್ತು ಬದ್ಧವಾಗಿ ವ್ಯಾಪಾರ ನಡೆಸಿ ಏಲಂ ನಿಂದ ನಿಗದಿಗೊಳಿಸಿದ ಹಣವನ್ನು ಕ್ಷೇತ್ರಕ್ಕೆ ಪಾವತಿಸಿ ಕ್ಷೇತ್ರದ ಆರ್ಥಿಕ ಅಭಿವೃದ್ಧಿಗೂ ನೆರವಾಗಿದ್ದಾರೆ. ಜಾತ್ರೆಯಲ್ಲಿ ಭಾಗವಹಿಸುವ ವ್ಯಾಪಾರಿಗಳಲ್ಲಿ ಯಾವುದೇ ಧಾರ್ಮಿಕ ಅಪನಂಬಿಕೆಗಳಿಲ್ಲ ಎಲ್ಲಾ ವ್ಯಾಪಾರಿಗಳು ಎಲ್ಲಾ ಧರ್ಮ ಕ್ಷೇತ್ರಗಳ ಉತ್ಸವಗಳಲ್ಲಿ ಭಾಗವಹಿಸಿ ಅಲ್ಲಿಗೆ ಕಾಣಿಕೆ ನೀಡುವುದಾಗಲಿ ಅನ್ನ ಪ್ರಸಾದ ಸ್ವೀಕರಿಸುವ ವಿಚಾರದಲ್ಲಾಗಲೀ ಯಾವುದೇ ಭೇದಭಾವವಿಲ್ಲದೆ ಭಾಗವಹಿಸುತ್ತಿದ್ದಾರೆ.ಕೆಲವು ಸ್ಥಾಪಿತ ಹಿತಾಸಕ್ತಿಗಳು ಕೋಮು ಘರ್ಷಣೆ ಮಾಡಿಸುವ ಉದ್ದೇಶದಿಂದ ಜಾತ್ರೆ ವ್ಯಾಪಾರಿಗಳನ್ನು ಗುರಿ ಮಾಡುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಾತ್ರೆ, ಉತ್ಸವ, ಉರೂಸ್ ಗಳು ಆರಂಭಗೊಂಡಿದ್ದು ಕೆಲವು ಸ್ಥಾಪಿತ ಹಿತಾಸಕ್ತಿಗಳು ಪುಣ್ಯ ಕ್ಷೇತ್ರಗಳ ಆಡಳಿತ ಮಂಡಳಿಯವರ ಒತ್ತಡ ಹೇರಿ ವ್ಯಾಪಾರಕ್ಕೆ ಅಡ್ಡಿ ಪಡಿಸುತ್ತಿದ್ದಾರೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ದಿನಾಂಕ 17-12-2021 in Contempt Petition (Civil) No 881 of 2021 in Special Leave Petition (Civil)No 1989 of 2020 ಪ್ರಕಾರ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಕಾಯ್ದೆ 1997 ಮತ್ತು 2002ರ ನಿಯಮಗಳ ಉಲ್ಲಂಘನೆಯಾಗದಂತೆ ಧಾರ್ಮಿಕ ಕ್ಷೇತ್ರಗಳಲ್ಲಿ ಹಿಂದೂಯೇತರ ಸಮುದಾಯದವರಿಗೆ ಜಾತ್ರೆ ಸಮಯದಲ್ಲಿ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿ ದೇವಾಲಯದ ಪರಿಧಿಯನ್ನು ಹೊರತು ಪಡಿಸಿ ಉಳಿದ ಜಾಗದಲ್ಲಿ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಅವಕಾಶ ನೀಡಿ ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 11-08-2023 ರಂದು ಆದೇಶ ನೀಡಿರುತ್ತಾರೆ. ಅದಾಗ್ಯೂ ಕೆಲವು ಸಂಘಟನೆಗಳು ಮುಸ್ಲಿಂ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದೆ.ಕರಾವಳಿಯಲ್ಲಿ ಕೋಮು ಸಂಘರ್ಷ ಸ್ಥಾಪಿಸಲು ಹುನ್ನಾರ ನಡೆಸುತ್ತಿದ್ದೆ.

ಈ ಹಿನ್ನೆಲೆಯಲ್ಲಿ ಎರಡು ಜಿಲ್ಲೆಗಳ ಜಿಲ್ಲಾಡಳಿತವು ಸರ್ವಧರ್ಮ ಕ್ಷೇತ್ರಗಳಲ್ಲಿ ವ್ಯಾಪಾರ ನಡೆಸುವ ಸಮಸ್ತ ಜಾತ್ರೆ ವ್ಯಾಪಾರಿಗಳಿಗೆ ಸಮಾನ ಅವಕಾಶ ನೀಡಿ ಅವರಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕು ನಗರ ಪ್ರದೇಶಗಳಲ್ಲಿ ಕರ್ನಾಟಕ ಬೀದಿಬದಿ ವ್ಯಾಪಾರ ನಿಯಮ 2019ರಂತೆ Form No.11 ರಲ್ಲಿ ಅರ್ಜಿ ಪಡೆದು ನಗರ ಪಾಲಿಕೆ, ನಗರ ಸಭೆ,ಪುರಸಭೆ, ಪಟ್ಟಣ ಪಂಚಾಯತ್ ಗಳಲ್ಲಿ ಜಾತ್ರೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಬೇಕು.ಜಾತ್ರೆ ವ್ಯಾಪಾರಿಗಳ ಬದುಕುವ ಹಕ್ಕಿನ ಮೇಲೆ ಧಾಳಿ ಮಾಡುವವರ ವಿರುದ್ಧ ಕೋಮು ನಿಗ್ರಹದಳ ನಿಗಾವಹಿಸಿ ಪುಂಡಾಟಿಕೆ ನಡೆಸಿ ಕೋಮು ಸೌಹಾರ್ದತೆಗೆ ಧಕ್ಕೆ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಉಭಯ ಜಿಲ್ಲೆಗಳ ಜಾತ್ರಾ ಮಹೋತ್ಸವಗಳಲ್ಲಿ ಕೆಲವು ಸಂಘಟನೆಗಳು ವ್ಯಾಪಾರಕ್ಕೆ ತೊಂದರೆ ಮಾಡುವ ಕೆಲಸ ಮುಂದುವರಿದಲ್ಲಿ ಎರಡೂ ಜಿಲ್ಲೆಗಳಲ್ಲಿ ಜಾತ್ರೆ ವ್ಯಾಪಾರಿಗಳು ವಿವಿಧ ಸಂಘಟನೆಗಳ ಸಹಕಾರ ಪಡೆದು ತೀವ್ರ ಹೋರಾಟ ಹಮ್ಮಿಕೊಳ್ಳುತ್ತಾರೆ ಎಂದು ಈ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಸುನಿಲ್ ಕುಮಾರ್ ಬಜಾಲ್
ಗೌರವಾಧ್ಯಕ್ಷರು ದ.ಕ. ಮತ್ತು ಉಡುಪಿ ಜಿಲ್ಲಾ ಜಾತ್ರೆ ವ್ಯಾಪಾರಿಗಳ ಸಮನ್ವಯ ಸಮಿತಿ, ಬಿ.ಕೆ.ಇಮ್ತಿಯಾಝ್
ಗೌರವಾಧ್ಯಕ್ಷರು ದ.ಕ.ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿ ಸಂಘ(ರಿ).
ಭರತ್ ಜೈನ್,ಪ್ರಕಾಶ್ ಕೊಡ್ರಸ್ ,ಮೊಹಮ್ಮದ್ ಶಫಿ,ಕವಿರಾಜ್ ಉಡುಪಿ,ಆರೀಫ್ ಉಡುಪಿ,ಮಹಮ್ಮದ್ ಮುಸ್ತಫಾ,ಹರೀಶ್ ಪೂಜಾರಿ,ಆಸಿಫ್ ಬಾವಾ,ಪ್ರವೀಣ್ ಕುಮಾರ್ ವಾಮಂಜೂರ್,ಪ್ರವೀಣ್ ಕುಮಾರ್ ಕದ್ರಿ,ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.