ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಪಕ್ಷದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಶುಕ್ರವಾರದಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನಡೆಸಿದ ಬೆಂಗಳೂರು ಶಾಸಕರ ಸಭೆಯಲ್ಲಿ ಅಸಹನೆ ಸ್ಪೋಟವಾಗಿದೆ.ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ವಲಸೆ ಬಂದಿದ್ದ ಶಾಸಕರಲ್ಲಿ ಕೆಲವರಿಗೆ ಪಕ್ಷದಲ್ಲಿ ಉಂಟಾಗಿರುವ ಅಸಮಾಧಾನ ಹಾಗೂ ಮುಜುಗರ ಶಮನ ಮಾಡುವ ಸಲುವಾಗಿ ಬಿಎಸ್ ವೈ ಸಭೆ ಕರೆದಿದ್ದರು.
ಟಿಕೆಟ್ ಹಂಚಿಕೆಯಿಂದ ಆರಂಭವಾದ ಅವ್ಯವಸ್ಥೆ ಇದೀಗ ವಿಪಕ್ಷ ನಾಯಕನ ಆಯ್ಕೆಗೂ ತಡೆಯಾಗಿ ಒಟ್ಟಾರೆ ರಾಜ್ಯ ಬಿಜೆಪಿಗೆ ದಿಕ್ಕಿಲ್ಲದ ಸ್ಥಿತಿ ನಿರ್ಮಾಣವಾಗಲು ದೆಹಲಿ ನಾಯಕರೊಬ್ಬರು ಕಾರಣವೆಂದು ಕೆಲ ಪ್ರಮುಖ ಶಾಸಕರು ದೂರಿದರು. ಯಡಿಯೂರಪ್ಪ ಕೂಡಲೇ ಪಕ್ಷದ ಆಗುಹೋಗುಗಳ ಬಗ್ಗೆ ಚಿಂತನೆ ನಡೆಸದಿದ್ದರೆ ಪಕ್ಷ ಇನ್ನಷ್ಟು ಕುಸಿಯುವ ಆತಂಕವನ್ನು ಆ ಶಾಸಕರು ವ್ಯಕ್ತಪಡಿಸಿದರೆಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಬಿಜೆಪಿಗೆ ಕರೆ ತಂದು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯಡಿಯೂರಪ್ಪ ಅವರೇ ಅಸಮಾಧಾನ ಶಮನ ಮಾಡಲು ಮುಂದಾದರೂ ಸಭೆಗೆ ಸೋಮಶೇಖರ್, ಬೈರತಿ ಬಸವರಾಜು, ವಿ.ಸೋಮಣ್ಣ ಗೈರು ಹಾಜರಾಗಿದ್ದರು.ಪಕ್ಷದ ಎಲ್ಲ ಶಾಸಕರು ಒಗ್ಗಟ್ಟಿನಿಂದ ಇರಬೇಕು, ಹೊರಗಡೆಯಿಂದ ಬಂದವರನ್ನು ಕಡೆಗಣಿಸಬಾರದು, ಅವರಿಗೆ ಮುಜುಗರವಾಗುವಂತೆ ನಡೆದುಕೊಳ್ಳಬಾರದೆಂದು ಯಡಿಯೂರಪ್ಪ ಅವರು ತಾಕೀತು ಮಾಡಿದ್ದಾರೆ.