ನಕಲಿ ದಾಖಲೆ ಪತ್ರ ಸೃಷ್ಠಿಸಿ ವಿತರಣೆ : ಬಂಧಿತ ಆರೋಪಿಗೆ ಶರತ್ತು ಬದ್ದ ಜಾಮೀನು; ವಾದ ಮಂಡಿಸಿದ ನ್ಯಾಯವಾದಿ ಮಹೇಶ್ ಕಜೆ

ರಾಜ್ಯ

ಸ್ಥಳೀಯ ಗ್ರಾ.ಪಂ.ಮತ್ತು ನಗರಸಭೆಯ ಹೆಸರಿನಲ್ಲಿ ಸೀಲು,ರಬ್ಬರ್ ಸ್ಟಾಂಪ್ ತಯಾರಿಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಠಿಮಾಡಿ,ಸಾರ್ವಜನಿಕರಿಗೆ ವಿತರಣೆ ಮಾಡುತ್ತಿದ್ದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ವಿಶ್ವನಾಥ್ ಬಿ.ವಿ. ಅವರಿಗೆ ಜಿಲ್ಲಾ ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ನೀಡಿದ ದೂರಿನಂತೆ, ಜು.11ರಂದು ಪುತ್ತೂರು ನಗರ ಪೊಲೀಸರು ಪಡೀಲ್‌ನ ಎಂ.ಎಸ್ ಕಾಂಪ್ಲೆಕ್ಸ್ ನಲ್ಲಿರುವ ಬಿ.ಬಿ.ಇಲೆಕ್ಟಿಕಲ್ಸ್ ಆಂಡ್ ಪ್ಲಂಗ್ಸ್ ಅಂಗಡಿಗೆ ದಾಳಿ ನಡೆಸಿದ್ದರು. ಆ ವೇಳೆ ಅಲ್ಲಿ ಲಭಿಸಿದ ವಿವಿಧ ಗ್ರಾ.ಪಂಗಳ ಮತ್ತು ನಗರಸಭೆಗೆ ಸಂಬಂಧಿಸಿದ ನಕಲಿ ಸೀಲುಗಳು, ರಬ್ಬರ್ ಸ್ಟಾಂಪ್ ಹಾಗು ನಕಲಿ ದಾಖಲೆ ಪತ್ರಗಳು ಬೆಳಕಿಗೆ ಬಂದಿತ್ತು. ವಿಶ್ವನಾಥ ಅವರು ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ನೀಡುತ್ತಿರುವ ಆರೋಪದಲ್ಲಿ ಪೊಲೀಸರು ಬಂಧಿಸಿ, ಕಚೇರಿಯಲ್ಲಿದ್ದ ನಕಲಿ ಸೀಲು, ಮತ್ತು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡು, ಕಚೇರಿಗೆ ಬೀಗ ಜಡಿದು ಪ್ರಕರಣ ದಾಖಲಿಸಿದ್ದರು.

ಸದ್ರಿ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಜಿಲ್ಲಾ ನ್ಯಾಯಾಲಯ ಆರೋಪಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.ಆರೋಪಿಯ ಪರವಾಗಿ ಪುತ್ತೂರಿನ “ಕಜೆ ಚೇಂಬರ್ಸ್” ಸಂಸ್ಥೆಯ ಮುಖ್ಯಸ್ಥ, ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದ ಮಂಡಿಸಿದ್ದರು.