ಚಲೋ ಬೆಳ್ತಂಗಡಿ, ಮಹಾಧರಣಿ. “ಸೌಜನ್ಯ” ಹೋರಾಟ ಯಶಸ್ವಿಗೊಳಿಸಲು ಸಮಾನ ಮನಸ್ಕರ ಒಕ್ಕೂಟದ ಮನವಿ

ಕರಾವಳಿ

ಸಿಬಿಐ ನ್ಯಾಯಾಲಯದ ತೀರ್ಪಿನ ತರುವಾಯ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆದಿರುವ ಅನುಮಾನಗಳನ್ನು ನಾಗರಿಕರಲ್ಲಿ ಬಲಗೊಳಿಸಿದೆ. ಈ ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಿದ್ದು, ರಾಜ್ಯದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರಕಾರ ಸೌಜನ್ಯ ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ಮು ರಚಿಸಬೇಕು, ಹಾಗೂ ಕುಮಾರಿ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಆತನ ಸೋದರಿ ಯಮುನ ಸಹಿತ ಧರ್ಮಸ್ಥಳ, ಉಜಿರೆ ಭಾಗಗಳಲ್ಲಿ ನಡೆದಿರುವ ಕೊಲೆ, ಅಸಹಜ ಸಾವುಗಳನ್ನು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಗಸ್ಟ್ 28 ರಂದು ಬೆಳ್ತಂಗಡಿಯಲ್ಲಿ ನಡೆಯುವ ರಾಜ್ಯ ಮಟ್ಟದ “ಚಲೋ ಬೆಳ್ತಂಗಡಿ, ಮಹಾ ಧರಣಿ” ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಭಾಗಿಯಾಗಲಿವೆ. ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸರಕಾರದ ಮುಂದೆ ಬಲವಾದ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡುತ್ತವೆ.

ಸೌಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿ ದೊಡ್ಡ ರೀತಿಯ ಪ್ರತಿಭಟನೆಗಳು ನಡೆದಿತ್ತು. ಜನಾಗ್ರಹವನ್ನು ಪರಿಗಣಿಸಿ ಅಂದಿನ ಸಿದ್ದರಾಮಯ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈಗ ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಜನತೆ ಸಿಬಿಐ ಮೇಲಿನ ನಂಬಿಕೆಯನ್ನು ಸಕಾರಣವಾಗಿಯೇ ಕಳೆದು ಕೊಂಡಿದ್ದಾರೆ. ಸಿಬಿಐ ಪ್ರಭಾವಿಗಳ ಒತ್ತಡಕ್ಕೆ ಬಲಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಬಿಐ ಬೇಡ, ರಾಜ್ಯದ ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ತನಿಖೆ ನಡೆಸಲಿ ಎಂದು ಆಗ್ರಹಿಸುತ್ತಿದ್ದಾರೆ. ನಾವೂ ಈ ಬೇಡಿಕೆಗೆ ಸಹಮತ ವ್ಯಕ್ತಪಡಿಸುತ್ತೇವೆ. ಹಾಗೆಯೆ, ಧರ್ಮಸ್ಥಳ, ಉಜಿರೆ ಭಾಗದಲ್ಲಿ ದಶಕಗಳಿಂದ ನೂರಾರು ಅಸಹಜ ಸಾವುಗಳು ಸಂಭವಿಸಿವೆ. ಕೆಲವೊಂದು ಕೊಲೆಗಳು ಪತ್ತೆಯಾಗದೆ ಮುಚ್ಚಿ ಹೋಗಿವೆ. ಈ ಮಾಹಿತಿ ಜನತೆಯಲ್ಲಿ ಭೀತಿಗೆ ಕಾರಣವಾಗಿದೆ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂಬ ಪ್ರಬಲ ಅನುಮಾನ ಇದೆ. ಸತ್ಯ ಸಂಗತಿ ಬಹಿರಂಗಗೊಳ್ಳುವ ಅಗತ್ಯವಿದೆ. ಅದಕ್ಕಾಗಿ ಪತ್ತೆಯಾಗದ ಕೊಲೆ, ಅಸಹಜ ಸಾವುಗಳ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.

ಈ ಎಲ್ಲಾ ಬೇಡಿಕೆಗಳನ್ನು ಮುಂದಿಟ್ಟು, ಪ್ರಧಾನವಾಗಿ ಸೌಜನ್ಯ ಪ್ರಕರಣದ ಅಪರಾಧಿಗಳ ಪತ್ತೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಜನಪರ ಸಂಘಟನೆಗಳು ಹಾಗೂ ರಾಜ್ಯದ ಹಲವಾರು ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಆಗಸ್ಟ್ ೨೮ ರಂದು ‘ಚಲೋ ಬೆಳ್ತಂಗಡಿ’ ಮಹಾ ಧರಣಿ ಹಮ್ಮಿಕೊಂಡಿರುತ್ತೇವೆ. ಅಂದು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಜನಪರ ಸಂಘಟನೆಗಳ ಕಾರ್ಯಕರ್ತರು ಬೆಳ್ತಂಗಡಿಗೆ ಆಗಮಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ನಾಗರಿಕರು ಬೆಳ್ತಂಗಡಿ ಚಲೋದಲ್ಲಿ ಭಾಗಿಗಳಾಗಲಿದ್ದಾರೆ. ಅಂದು ಬೆಳಿಗ್ಗೆ 10:00 ಗಂಟೆಗೆ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಮಹಾ ಸಮಾವೇಶ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸೌಜನ್ಯ ಪ್ರಕರಣದ ತನಿಖೆಗೆ ಸಂಬಂಧಿಸಿ ನಡೆಯುವ ಈ ಮಹತ್ವದ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಪರವಾಗಿ ಮನವಿ ಮಾಡುತ್ತಿದ್ದೇವೆ.
ಮುನೀರ್ ಕಾಟಿಪಳ್ಳ,ಸಂಚಾಲಕರು ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ದಕ್ಷಿಣ ಕನ್ನಡ ಜಿಲ್ಲೆ
ಪತ್ರಿಕಾಗೋಷ್ಠಿಯಲ್ಲಿ ಕಾರ್ಮಿಕ ನಾಯಕರಾದ ಸುನೀಲ್ ಕುಮಾರ್ ಬಜಾಲ್,ಯೋಗೀಶ್ ಜಪ್ಪಿನಮೋಗರು,ಬಿ.ಕೆ. ಇಮ್ತಿಯಾಜ್,ಜೆ.ಬಾಲಕೃಷ್ಣ ಶೆಟ್ಟಿ,ಬಿ.ಶೇಖರ್,ಸೀತಾರಾಮ ಬೇರಿಂಜಾ,ದಲಿತ ನಾಯಕರಾದ ಎಂ.ದೇವದಾಸ್,ಕೃಷ್ಣ ತಣ್ಣೀರುಬಾವಿ,ರೈತ ಸಂಘದ ಮುಖಂಡರಾದ ಕೃಷ್ಣಪ್ಪ ಸಾಲಿಯಾನ್,ಪ್ರೇಮನಾಥ್ ಶೆಟ್ಟಿ,ಯುವಜನ ನಾಯಕರಾದ ಸಂತೋಷ್ ಬಜಾಲ್, ಜಗತ್ಪಾಲ್ ,ಮಹಿಳಾ ಸಂಘಟನೆಯ ಮುಖಂಡರಾದ ಭಾರತಿ ಪ್ರಶಾಂತ್,ಭಾರತಿ ಬೋಳಾರ ಮುಂತಾದವರು ಉಪಸ್ಥಿತರಿದ್ದರು.