ಜಿಲ್ಲೆಯಲ್ಲಿ ಸ್ವ ಸಮುದಾಯದ ಮಧ್ಯೆಯೇ ಅನೈತಿಕ ಪೊಲೀಸ್ ಗಿರಿ: ಡ್ರಗ್ಸ್ ಜಾಲಕ್ಕೆ ಸಿಲುಕಿ ಪ್ರತಿಷ್ಠಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಯನ್ನು ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ

ಕರಾವಳಿ

ಪ್ರಭಾವಿ ಸಂಘಟನೆ ಮುಖಂಡನೊಬ್ಬನ ಪುತ್ರ ಶಾಮೀಲು.!

ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾದ ಕರಾಳದಂಧೆ ಅವ್ಯಾಹತವಾಗಿ ಹಬ್ಬಿದೆ. ಇಲಾಖೆಗಳು ಹಾಗೂ ಸಂಘ ಸಂಸ್ಥೆಗಳು ಎಷ್ಟೇ ಜನಜಾಗೃತಿ ನಡೆಸಿದರೂ ಡ್ರಗ್ಸ್ ಮಾಫಿಯಾಕ್ಕೆ ಬ್ರೇಕ್ ಹಾಕಲು ವಿಫಲವಾಗಿದೆ. ಕುದ್ರೋಳಿ ಪರಿಸರದಲ್ಲಿ ಮುಸ್ಲಿಂ ಸಂಘ ಸಂಸ್ಥೆಗಳು ಒಗ್ಗೂಡಿ ಡ್ರಗ್ಸ್ ವಿರುದ್ಧ ಸಮರ ಸಾರಿದೆ.ಡ್ರಗ್ಸ್ ಜಾಲಕ್ಕೆ ಯುವಕರು ಮಾತ್ರವಲ್ಲ,ಯುವತಿಯರು ಕೂಡ ಡ್ರಗ್ಸ್ ಕರಾಳದಂಧೆಗೆ ಸಿಲುಕಿ ಬಲಿಪಶುವಾಗಿದ್ದಾರೆ.

ಇದೀಗ ಡ್ರಗ್ಸ್ ಮಾಫಿಯಾದ ಬಗೆಗಿನ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದೆ. ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರ ವಿದ್ಯಾರ್ಥಿಯಾಗಿರುವ ಉಪ್ಪಳ ಮೂಲದ ಮುಸ್ಲಿಂ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಯೊಬ್ಬಳನ್ನು ಲವ್ ಮಾಡುತ್ತಿದ್ದಾನೆ ಅನ್ನುವ ಏಕೈಕ ಕಾರಣಕ್ಕೆ ಅದೇ ಕಾಲೇಜಿನ ಏಳು ಮಂದಿ ಒಂದೇ ಸಮುದಾಯದ ವಿದ್ಯಾರ್ಥಿಗಳು ಅಮಾಯಕ ಉಪ್ಪಳ ಮೂಲದ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ,ಅಡ್ಯಾರ್ ಕಣ್ಣೂರು ಪ್ಲ್ಯಾಟ್ ವೊಂದರಲ್ಲಿ ಕೂಡಿಹಾಕಿ ನಿರಂತರ ಚಿತ್ರ ಹಿಂಸೆ ನೀಡಿ,ಥಳಿಸಿರುವ ಭೀಭತ್ಸ ಘಟನೆ ಬೆಳಕಿಗೆ ಬಂದಿದೆ. ಆರೋಪಿ ವಿದ್ಯಾರ್ಥಿಗಳು ಡ್ರಗ್ಸ್ ಸೇವಿಸಿ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ. ಆರೋಪಿ ವಿದ್ಯಾರ್ಥಿಗಳು ಬಿ.ಸಿ ರೋಡ್, ಗೂಡಿನಬಳಿ, ನಂದಾವರ, ಬಂಟ್ವಾಳ,ಆಲಡ್ಕ ಪರಿಸರದವರು ಎನ್ನಲಾಗಿದೆ, ಆರೋಪಿಗಳಲ್ಲೊಬ್ಬ ಬಂಟ್ವಾಳ ಪರಿಸರದವನಾಗಿದ್ದು,ಸಂಘಟನೆಯೊಂದರ ಪ್ರಮುಖ ಮುಖಂಡರೊಬ್ಬರ ಪುತ್ರ ಎನ್ನಲಾಗಿದೆ.ಆತನ ಕಾರಿನಲ್ಲೇ ಕಿಡ್ನಾಪ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾದ ಕಾರಣ ಬಂದರ್ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿ ಪರ ಕೆಲವು ರಾಜಕೀಯ ಮುಖಂಡರು ಒತ್ತಡ ಹೇರಿ ಪ್ರಕರಣ ಮುಚ್ಚಿ ಹಾಕಲು ಸಕಲ ಪ್ರಯತ್ನ ನಡೆಸುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.ಇದರ ಹಿಂದೆ ನಟೋರಿಯಸ್ ಗ್ಯಾಂಗ್ ವೊಂದರ ಕರಾಳ ಹಸ್ತ ಕೈ ಚಾಚಿದೆ ಎಂಬ ಗುಸು ಗುಸು ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ ನಿರಂತರ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಕೂಡ ಅದೇ ಮಾದರಿಯ ಪ್ರಕರಣವಾಗಿದೆ. ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ ಥಳಿಸಿರುವುದು, ವಿಶೇಷತೆ ಎಂದರೆ ಇಲ್ಲಿ ಅನೈತಿಕ ಪೊಲೀಸ್ ಗಿರಿ ಯಲ್ಲಿ ಗುರುತಿಸಿಕೊಂಡವರು ಒಂದೇ ಸಮುದಾಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅನ್ಯ ಧರ್ಮೀಯರ ಮಧ್ಯೆ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಬಹುಬೇಗನೆ ವೈರಲ್ ಆಗುತ್ತಿದ್ದು, ಸ್ವಧರ್ಮೀಯರ ನಡುವೆ ನಡೆಯುತ್ತಿರುವ ಅನೈತಿಕ ಪೊಲೀಸ್ ಗಿರಿ ಪ್ರಕರಣಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತಿರುವುದು ಅಷ್ಟೇ ಸತ್ಯ.

ಪ್ರಭಾವಿ ನಾಯಕರ ಪುತ್ರರೇ ಡ್ರಗ್ಸ್, ಅನೈತಿಕ ಗಿರಿಯಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದು, ತಮ್ಮ ಮಕ್ಕಳನ್ನು ಹದ್ದು ಬಸ್ತಿನಲ್ಲಿಡಲು ವಿಫಲರಾಗಿ ಉಪದೇಶ ಮಾಡುವುದಕ್ಕೆ ಸೀಮಿತರಾಗಿದ್ದಾರೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.

ಇನ್ನಾದರೂ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾ, ಅನೈತಿಕ ಪೊಲೀಸ್ ಗಿರಿಯಂತಹ ಪ್ರಕರಣಗಳನ್ನು ಮಟ್ಟ ಹಾಕುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ.