ಪುತ್ತೂರು : ಕೆಲವು ದಿನಗಳ ಹಿಂದೆ ಉದ್ಯಮಿಯೋರ್ವರಿಗೆ ಹಲ್ಲೆ ನಡೆಸಿ ಹಣ ಮತ್ತು ಚಿನ್ನದ ಉಂಗುರವನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗೆ ಜಿಲ್ಲಾ ನ್ಯಾಯಾಲಯ ನೀರಿಕ್ಷಣಾ ಜಾಮೀನು ಮಂಜೂರು ಮಾಡಿದೆ.
ಬೆಂಗಳೂರಿನಲ್ಲಿ ಪಿ.ಆರ್.ಸಿಕ್ಸ್ ಗ್ರೂಪ್ ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ,ಪಾಂಬಾರು ಎಂಬಲ್ಲಿಯ ಕೃಷಿಕ ಪ್ರದೀಪ್ ಪಾಂಬಾರು ಎಂಬವರು ನೀಡಿದ್ದ ದೂರಿನ ಮೇರೆಗೆ ಮನೋಜ್ ಭಂಡಾರಿ ಮತ್ತು ಜಿತನ್ ರೈ ವಿರುದ್ಧ ಪೊಲೀಸರು ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದರು.
ಜುಲೈ 18ರಂದು ಪ್ರದೀಪ್ ಪಾಂಬಾರು ಮತ್ತು ಸ್ನೇಹಿತ ದೇವರಾಜ್ ರವರು ಕಾರಿನಲ್ಲಿ ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತನ್ನ ಬಾವನನ್ನು ವಿಚಾರಿಸಲು ಬಂದು,ಅವರಿಗೆ ಆಸ್ಪತ್ರೆ ಸಮೀಪದ ಮೆಟ್ರೋಡೆನ್ ಹೋಟೇಲಿನಿಂದ ಊಟ ತೆಗೆದು ಕಾರನ್ನು ತಿರುಗಿಸಿ ತೆರಳುತ್ತಿರುವ ಸಮಯ ರಾತ್ರಿ 10:45ರ ಸುಮಾರಿಗೆ ಹಿಂಬದಿಯಿಂದ ಡಸ್ಟರ್ ಕಾರಿನಲ್ಲಿ ಬಂದ ಆರೋಪಿಗಳು ಅವರ ಕಾರನ್ನು ಅಡ್ಡವಾಗಿ ನಿಲ್ಲಿಸಿ,ಡಸ್ಟರ್ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಏಕಾಏಕಿಯಾಗಿ ಅವಾಚ್ಯ ಶಬ್ದಗಳಿಂದ ಬೈದು,ನಿಂದಿಸಿ ಹೋಗಿದ್ದರು.
ಪ್ರದೀಪ್ ಪಾಂಬಾರು ಮತ್ತು ಸ್ನೇಹಿತ ದೇವರಾಜ್ ರವರು ಆಸ್ಪತ್ರೆಗೆ ಹೋಗಿ ಮನೆ ಕಡೆ ಹೋಗಲೆಂದು ಕಾರಿನಲ್ಲಿ ಲಿನೆಟ್ ಜಂಕ್ಷನ್ ತಲುಪಿದಾಗ ಅದೇ ಡಸ್ಟರ್ ಕಾರು ಪೆಟ್ರೋಲ್ ಪಂಪ್ ನಿಂದ ಏಕಾಏಕಿಯಾಗಿ ರಸ್ತೆಗೆ ಬಂದು ಪ್ರದೀಪ್ ರವರ ಕಾರಿಗೆ ಅಡ್ಡ ನಿಲ್ಲಿಸಿದ್ದರು. ಪ್ರದೀಪ್ ಪಾಂಬಾರು ಕಾರಿನಿಂದ ಇಳಿದ ಸಂದರ್ಭ ಡಸ್ಟರ್ ಕಾರಿನಲ್ಲಿದ್ದ ಇಬ್ಬರೂ ನನ್ನ ಕಾರಿನ ಡೋರ್ ಎಳೆದು ನನಗೆ ಹಲ್ಲೆ ನಡೆಸಿ ಪ್ಯಾಂಟಿನ ಕಿಸೆಯಲ್ಲಿದ್ದ ಪರ್ಸ್ ತೆಗೆದು ಅದರಲ್ಲಿದ್ದ ಸುಮಾರು 9,000 ರೂ.ನಗದು ಮತ್ತು ಬಲ ಕೈ ಬೆರಳಲ್ಲಿದ್ದ ಐದು ಗ್ರಾಂ ತೂಕದ ಚಿನ್ನದ ಉಂಗುರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು ಎಂದು ಆರೋಪಿಸಿ ಪ್ರದೀಪ್ ಪಾಂಬರು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ದ ದೂರು ನೀಡಿದ್ದರು.
ಪುತ್ತೂರು ನಗರ ಪೊಲೀಸರು ಆರೋಪಿಗಳಾದ ಮನೋಜ್ ಭಂಡಾರಿ ಮತ್ತು ಜಿತನ್ ರೈಯವರ ವಿರುದ್ದ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಿದರು.ಇದೀಗ ಆರೋಪಿಗಳಾಗಿರುವ ಮನೋಜ್ ಭಂಡಾರಿ ಮತ್ತು ಜಿತನ್ ರೈಯವರಿಗೆ ಜಿಲ್ಲಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.ಆರೋಪಿಗಳ ಪರವಾಗಿ “ಕಜೆ ಲಾ ಛೇಂಬರ್ಸ್” ಇದರ ಮುಖ್ಯಸ್ಥ, ಖ್ಯಾತ ನ್ಯಾಯವಾದಿ ಮಹೇಶ್ ಕಜೆ ವಾದಿಸಿದ್ದರು.