ಹಿಂದುತ್ವದ ವಿಷ ವರ್ತುಲದಲ್ಲಿ ಸೌಜನ್ಯ ಹೋರಾಟ.

ಕರಾವಳಿ

✍️.ನವೀನ್ ಸೂರಿಂಜೆ

‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಫೇಸ್‌ಬುಕ್ ಪೇಜ್ ಸೌಜನ್ಯ ಕೊಲೆಯಾದ ನಂತರ ಚಳವಳಿ ಆರಂಭಗೊಂಡ ದಿನದಿಂದಲೂ ಇದೆ. ಪ್ರಾರಂಭದಲ್ಲಿ ಸೌಜನ್ಯ ಪರವಾಗಿ‌ನ ಎಲ್ಲ ಹೋರಾಟಗಳನ್ನು ಸಮಾನಾಗಿ ನೋಡಿ ಪ್ರಚಾರ ನೀಡುತ್ತಿತ್ತು.‌ ಬರಬರುತ್ತಾ ಎಡಪಂಥೀಯರ ಹೋರಾಟವನ್ನು ನಿರ್ಲಕ್ಷ್ಯ ಮಾಡಿ ಹಿಂದುತ್ವವಾದಿಗಳ ಹೋರಾಟವನ್ನು ಮಾತ್ರ ಪ್ರಚಾರ ಮಾಡಲಾರಂಭಿಸಿತು.
2015 ನವೆಂಬರ್ ತಿಂಗಳು. ಮಂಗಳೂರಿನಲ್ಲಿ ಹಿಂದೂ ಮುಸ್ಲಿಂ ಕೋಮುಗಲಭೆ ನಡೆಯುತ್ತಿತ್ತು. ಶಾಲಾಕಾಲೇಜು, ಕಂಪನಿ ಕೆಲಸಗಳಿಗೆ ರಜೆ ನೀಡಲಾಗಿತ್ತು. ನಾವೂರು ಗ್ರಾಮದ ಹರೀಶ್ ಪೂಜಾರಿ ಮಂಗಳೂರಿನ ಕಾಲೇಜೊಂದರಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು.

ಮಣಿಹಳ್ಳ ಗ್ರಾಮದ ಸಮೀಯುಲ್ಲಾ ಬಿ ಸಿ ರೋಡಿನ ವಿಜಯಲಕ್ಷ್ಮಿ ಸ್ಟೀಲ್ ಕಂಪನಿಯ ಉದ್ಯೋಗಿ. ಕೋಮುಗಲಭೆಯಲ್ಲಿ ಸ್ಟೀಲ್ ಕಂಪನಿಗೂ ಕಲ್ಲು ತೂರಾಟ ಆಗಿದ್ದರಿಂದ ಕಂಪನಿ ಬಂದ್ ಮಾಡಿ ಕಾರ್ಮಿಕರಿಗೆ ರಜೆ ಕೊಟ್ಟಿದ್ದರು.

ಮಂಗಳೂರಿನಿಂದ ಬಂದ ಹರೀಶ್ ಪೂಜಾರಿ ಮತ್ತು ಬಿ ಸಿ ರೋಡಿನಿಂದ ಬಂದ ಸಮೀಯುಲ್ಲಾ ರಜೆಯ ಕಾರಣದಿಂದ ಆಟವಾಡಲು ಮೈದಾನಕ್ಕೆ ಹೊರಟಿದ್ದರು. ಅಷ್ಟರಲ್ಲಿ ಹಿಂದುತ್ವವಾದಿ ಕೋಮುಹಂತಕರ ಗುಂಪೊಂದು ಬರುತ್ತಿತ್ತು. ಆ ಕೋಮುಹಂತಕರು ಯಾರಾದರೊಬ್ಬ ಮುಸ್ಲೀಮನನ್ನು ಹುಡುಕುತ್ತಿತ್ತು. ಸಮೀಯುಲ್ಲಾನನ್ನು ಕಂಡವರೇ ಚೂರಿ ತಲವಾರು ಹಿಡಿದುಕೊಂಡು ಗುಂಪುದಾಳಿಗೆ ಮುಂದಾದರು. ನೋಡನೋಡುತ್ತಿದ್ದಂತೆ ಒಬ್ಬ ಸಮೀಯುಲ್ಲಾನಿಗೆ ಚೂರಿ ಹಾಕಿಯೇ ಬಿಟ್ಟ. ಅಷ್ಟರಲ್ಲಿ ಜೊತೆಗಿದ್ದ ಗೆಳೆಯ ಹರೀಶ್ ಪೂಜಾರಿ ಸಮೀಯುಲ್ಲಾನ ರಕ್ಷಣೆಗೆ ಬಂದ.

ಸಮೀಯುಲ್ಲಾನತ್ತಾ ಬೀಸುತ್ತಿದ್ದ ತಲವಾರು, ಚೂರಿಗಳಿಗೆ ಎದುರಾಗಿ ನಿಂತ. “ಬೇಡ ಹರೀಶ, ನೀನು ಓಡು” ಎಂದು ಸಮೀಯುಲ್ಲಾ ಕೇಳಿಕೊಂಡರೂ ಹರೀಶ ಹಿಂದಡಿಯಿಡಲಿಲ್ಲ. ಸಮೀಯುಲ್ಲಾನನ್ನು ಇರಿಯಬೇಕಿದ್ದ ಚೂರಿಗಳು ಹರೀಶನನ್ನು ಇರಿಯಿತು.

ಸಮೀಯುಲ್ಲಾ ಮಾರಣಾಂತಿಕ ಗಾಯಗಳೊಂದಿಗೆ ಆಸ್ಪತ್ರೆ ಸೇರಿದರೆ, ಹರೀಶ್ ಪೂಜಾರಿ ಸಾವನ್ನಪ್ಪಿದರು. ಇಂತಹ ಭಾವೈಕ್ಯತೆಯ, ಸಹೋದರತೆಯ, ಪ್ರೀತಿ, ಮಾನವೀಯತೆಯ ಪ್ರತೀಕವಾಗಿದ್ದ ಹರೀಶನನ್ನು ಕೊಂದವನು ಸಧ್ಯ ಸೌಜನ್ಯ ಹೋರಾಟದ ಸಾಮಾಜಿಕ ಜಾಲತಾಣದ ಮುಂದಾಳತ್ವವನ್ನೂ, ಗೊತ್ತುಗುರಿಯನ್ನು ನಿರ್ಧರಿಸುವವನೂ ಆಗಿದ್ದಾನೆ.

‘ಜಸ್ಟಿಸ್ ಫಾರ್ ಸೌಜನ್ಯ’ ಎಂಬ ಫೇಸ್‌ಬುಕ್ ಪೇಜ್ ಸೌಜನ್ಯ ಕೊಲೆಯಾದ ನಂತರ ಚಳವಳಿ ಆರಂಭಗೊಂಡ ದಿನದಿಂದಲೂ ಇದೆ. ಈ ಪೇಜ್ ಪ್ರಾರಂಭದಲ್ಲಿ ಸೌಜನ್ಯ ಪರವಾಗಿ‌ನ ಎಲ್ಲಾ ಹೋರಾಟಗಳನ್ನು ಸಮಾನಾಗಿ ನೋಡಿ ಪ್ರಚಾರ ನೀಡುತ್ತಿತ್ತು.‌ ಬರಬರುತ್ತಾ ಎಡಪಂಥೀಯರ ಹೋರಾಟವನ್ನು ನಿರ್ಲಕ್ಷ್ಯ ಮಾಡಿ ಹಿಂದುತ್ವವಾದಿಗಳ ಹೋರಾಟವನ್ನು ಮಾತ್ರ ಪ್ರಚಾರ ಮಾಡಲಾರಂಭಿಸಿತು. ಸಂಶೋಧಕ ಎಂ ಎನ್ ಕಲಬುರಗಿ ಕೊಲೆಯಾದಾಗ ಸಂಭ್ರಮಿಸಿ ಪೋಸ್ಟ್ ಹಾಕಿ ಜೈಲಿಗೆ ಹೋದ ವ್ಯಕ್ತಿಯೇ ಈ ಪೇಜ್ ಅನ್ನು ನಿರ್ವಹಿಸುತ್ತಿದ್ದ.

ಈ ಮಧ್ಯೆ ಸೌಜನ್ಯ ಹೋರಾಟ ಚಾಲ್ತಿಯಲ್ಲಿ ಇರುವಾಗಲೇ ಮೊನ್ನೆ ಮೊನ್ನೆ ಅಂದರೆ, ಜುಲೈ 2022 ರಲ್ಲಿ ಪ್ರವೀಣ್ ನೆಟ್ಟಾರ್ ಕೊಲೆಯಾಯಿತು. ಹಿಂದುತ್ವವಾದಿ ಪ್ರವೀಣ್ ನೆಟ್ಟಾರ್ ಕೊಲೆಯಾದಾಗ ಹಿಂದುತ್ವ ಸಂಘಟನೆಗಳು ಮುಸ್ಲಿಮರ ವಿರುದ್ದ ತಿರುಗಿ ಬೀಳಲಿಲ್ಲ. ಬದಲಾಗಿ ದೇಶದಲ್ಲೇ ಮೊದಲ ಬಾರಿಗೆ ಹಿಂದುತ್ವ ಸಂಘಟನೆಗಳು ಬಿಜೆಪಿ ವಿರುದ್ದ ತಿರುಗಿ ಬಿದ್ದಿದ್ದವು. ಸಾವಿರಾರು ಸಂಖ್ಯೆಯ ಜನ ಬಿಜೆಪಿ ರಾಜ್ಯಾಧ್ಯಕ್ಷರ ಕಾರನ್ನು ಪಲ್ಟಿ ಮಾಡಲು ಯತ್ನಿಸಿದ್ದು ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.

ಆಗ ಪ್ರವೀಣ್ ನೆಟ್ಟಾರ್ ಮನೆಗೆ ತೆರಳಿದ ಮಹೇಶ್ ಶೆಟ್ಟಿ ತಿಮರೋಡಿ “ನಾನು ಮುಸಲ್ಮಾನರಿಗೆ ಹೇಳ್ತೀದ್ದೇನೆ. ನೀವು ಕ್ರಿಯೆಗೆ ಪ್ರತಿಕ್ರಿಯೆ ನೀಡಿದರೆ ನಮಗೂ ಗೊತ್ತಿದೆ. ನಾವು 85% ಇರುವವರು. ನೀವು ಕೇವಲ 15% ಇರುವವರು. ಕೊನೆಗೆ ಉಳಿಯುವುದು ನಾವು. ನೀವು ಉಳಿಯುವುದಿಲ್ಲ” ಎಂದು ಜನಾಕ್ರೋಶವನ್ನು ಮುಸ್ಲಿಮಮರತ್ತಾ ತಿರುಗಿಸಿದರು.

ಹಿಂದೂ ಸಂಘಟನೆ ಬಿಟ್ಟು ಸಾಮಾಜಿಕ ಕಾರ್ಯಕರ್ತನಾಗಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದ ತಿಮರೋಡಿಯವರು ನೆಟ್ಟಾರ್ ಗೂ ಮೊದಲೇ ಕೊಲೆಯಾಗಿದ್ದ ಅಮಾಯಕ ಮಸೂದ್‌ನ ಮನೆಗಾಗಲೀ, ನೆಟ್ಟಾರ್ ಬಳಿಕ ಕೊಲೆಯಾದ ಅಮಾಯಕ ಫಾಝಿಲ್‌ನ ಮನೆಗಾಗಲೀ ಭೇಟಿ ಕೊಡಲಿಲ್ಲ. ಬದಲಾಗಿ ಬಿಜೆಪಿ ವಿರುದ್ದ ಇದ್ದ ಜನಾಕ್ರೋಶವನ್ನು ಮುಸ್ಲಿಮರತ್ತಾ ತಿರುಗಿಸಿದರು.

ಈ ಮಧ್ಯೆ ವಿರೇಂದ್ರ ಹೆಗ್ಗಡೆಯವರು ರಾಜ್ಯಸಭಾ ಸದಸ್ಯರಾದರು. ಅದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರು ವೀರೇಂದ್ರ ಹೆಗ್ಗಡೆಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹೆಗ್ಗಡೆಯವರನ್ನು ತಾರಾಮಾರ ಹೊಗಳಿದ್ದರು.

ಇದಾದ ನಂತರ ಮಹೇಶ್ ಶೆಟ್ಟಿ ತಿಮರೋಡಿಯವರು “ನಾನು ಇನ್ನು ಮುಂದೆ ಕೇಸರಿ ಶಾಲು ಧರಿಸಲ್ಲ. ಮೋದಿ ನಮ್ಮ ನಾಯಕನಲ್ಲ. ಇನ್ಮುಂದೆ ಬಿಳಿ ಶಾಲು ಧರಿಸುತ್ತೇನೆ” ಎಂದು ಹೇಳುವ ಮೂಲಕ ಹಿಂದುತ್ವ ರಾಜಕಾರಣದಿಂದ ಹೊರ ಬರುವ ಮಾತನಾಡಿದ್ದರು. ಆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜಾತಿ, ಮತ, ಪಕ್ಷ, ಧರ್ಮ, ಸಿದ್ದಾಂತಗಳನ್ನು ಮೀರಿ ಜನರು ಮಹೇಶ್ ಶೆಟ್ಟಿ ತಿಮರೋಡಿಯನ್ನು ಬೆಂಬಲಿಸಿದ್ದರು.

ಅಷ್ಟೊತ್ತಿಗಾಗಲೇ ಆರ್ ಎಸ್ ಎಸ್ ನಲ್ಲಿ ಎರಡು ಗುಂಪುಗಳು ಸೃಷ್ಟಿಯಾಗಿತ್ತು. ಒಂದು ಗುಂಪು ವಿರೇಂದ್ರ ಹೆಗ್ಗಡೆಯ ಪರವೂ, ಇನ್ನೊಂದು ಗುಂಪು ವಿರೇಂದ್ರ ಹೆಗ್ಗಡೆಯ ವಿರುದ್ದವೂ ಕೆಲಸ ಮಾಡುತ್ತಿದೆ.

ಸೌಜನ್ಯ ಸಂಘರ್ಷದಲ್ಲಿ ಯಾವ ಗುಂಪು ಗೆದ್ದರೂ ಅದು ಹಿಂದುತ್ವ ರಾಜಕಾರಣಕ್ಕೆ ಪೂರಕವಾಗಿರಬೇಕು ಎಂಬ ತಂತ್ರಗಾರಿಕೆ ಇದರ ಹಿಂದಿದೆ ಎಂಬುದು ಸ್ಪಷ್ಟ. ಪರ-ವಿರೋಧ ಹೋರಾಟದಲ್ಲಿ ಆರ್ ಎಸ್ ಎಸ್ ಧುಮುಕಿದ ನಂತರ ದಿಡೀರನೆ ಮಹೇಶ್ ಶೆಟ್ಟಿಯವರು ಕೇಸರಿ ಧರಿಸಲು ಶುರು ಮಾಡಿದರು. ಅಲ್ಲಲ್ಲಿ ಹಿಂದುತ್ವವಾದಿಗಳು ಪ್ರತಿಭಟನೆಗಳನ್ನು ಆಯೋಜಿಸಲು ಶುರು ಮಾಡಿದರು.

ಕುಂದಾಪುರದಲ್ಲಿ ಮೊನ್ನೆ ಅಂದರೆ, ಆಗಸ್ಟ್ 25 ರಂದು ಜಸ್ಟಿಸ್ ಫಾರ್ ಸೌಜನ್ಯ ಹೆಸರಲ್ಲಿ ಭಾರೀ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಮಹೇಶ್ ಶೆಟ್ಟಿ ತಿಮರೋಡಿಯವರು ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡುತ್ತಾ “ನಾವು ಸನಾತನ ಹಿಂದೂ ಧರ್ಮವನ್ನು ಮರುಪ್ರತಿಷ್ಠಾಪಿಸಲು ಈ ಹೋರಾಟ ಮಾಡುತ್ತಿದ್ದೇವೆ. ಇವರ ಕೆಟ್ಟ ಕೆಲಸದಿಂದ ಅಣ್ಣಪ್ಪ ಮತ್ತು ಮಂಜುನಾಥ ಸ್ವಾಮಿ ಮೇಲೆ ಮೆತ್ತಿರುವ ಕೊಳಕನ್ನು ತೊಳೆದು ದೇಗುಲವನ್ನು ಹಿಂದೂಗಳ ಕೈಗೆ ಕೊಡುವವರೆಗೆ ನಾವು ವಿರಮಿಸಬಾರದು” ಎನ್ನುತ್ತಾರೆ. ಈ ಮಾತಿನ ಅರ್ಥ ಏನು ? ಇದರ ಹಿಂದೆ ಆರ್ ಎಸ್ ಎಸ್ ಇಲ್ಲವೇ?

ಕುಂದಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಾ “ಬಿಜೆಪಿ ಕಾಂಗ್ರೆಸ್, ಜೆಡಿಎಸ್, ಎಸ್ ಡಿಪಿಐ, ಕಮ್ಯೂನಿಷ್ಟ್ ಎಲ್ಲವೂ ಒಂದೇ. ನಾವು ಎಲ್ಲವನ್ನೂ ದೂರ ಇಡ್ತೇವೆ” ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳುತ್ತಾರೆ. ವ್ಯವಸ್ಥೆಯ ವಿರುದ್ದ ಜನ ಸಿಡಿದೆದ್ದರೆ ಆರ್ ಎಸ್ ಎಸ್ ಈ ಪದಗಳ ಪ್ರಯೋಗ ಮಾಡಿ ಜನರನ್ನು ದಾರಿ ತಪ್ಪಿಸಿ ಕೋಮುರಾಜಕಾರಣವನ್ನು ಗೆಲ್ಲಿಸುವಲ್ಲಿ ಯಶಸ್ವಿ ಆಗಿದ್ದಿದೆ. ಉದಾಹರಣೆಗೆ ಅಣ್ಣಾ ಹಝಾರೆ ಹೋರಾಟ!

ಸೌಜನ್ಯ ಪರ ಹೋರಾಟವೆಂದರೆ ಅದು ಕೇವಲ ಒಬ್ಬ ವ್ಯಕ್ತಿಯ ವಿರುದ್ದದ ಹೋರಾಟವಲ್ಲ. ಫ್ಯೂಡಲ್ ವ್ಯವಸ್ಥೆ, ಪರೋಕ್ಷ ಸರ್ಕಾರವೊಂದರ ರಕ್ತಸಿಕ್ತ ಆಳ್ವಿಕೆಯ ವಿರುದ್ದದ ಹೋರಾಟ. ಸೌಜನ್ಯ ಹೋರಾಟವೆಂದರೆ ನೇತ್ರಾವತಿಯಲ್ಲಿ ಹರಿದಿರುವ ರಕ್ತವನ್ನು ಖಂಡಿಸುವ ಹೋರಾಟ. ಹಾಗಾಗಿ ಹಿಂದುತ್ವವಾದವನ್ನು ಪೋಷಿಸುತ್ತಾ ಸೌಜನ್ಯ ಪರ ಹೋರಾಟ ಮಾಡುವುದು ಎಂದರೆ ಸೌಜನ್ಯಗೆ ಮಾಡುವ ಅವಮಾನವಾಗುತ್ತದೆ.

ಸೌಜನ್ಯ ಪರ ಯಾರೇ ಹೋರಾಡಲಿ, ಮುಂಡಾಸುಧಾರಿಯ ಸಾಮ್ರಾಜ್ಯವನ್ನು ಕೊನೆಗೊಳಿಸುವುದು ಮುಖ್ಯ ಎಂಬ ವಾದ ತೀರಾ ಅಪಾಯಕಾರಿ. ಆಸ್ತಿ, ಹಣ, ಕಾಮುಕತೆ, ಫ್ಯೂಡಲ್ ವ್ಯವಸ್ಥೆಯ ಜಾರಿಗಾಗಿ ಸೀಮಿತ ಪ್ರದೇಶದಲ್ಲಿ ನಡೆಯುವ ಹತ್ಯೆ-ಅತ್ಯಾಚಾರಗಳನ್ನು ವಿರೋಧಿಸುತ್ತಾ ಕೋಮುವಾದಿಗಳಿಗೆ ಆ ಸಾಮ್ರಾಜ್ಯವನ್ನು ಒಪ್ಪಿಸಿ, ಕೊಲೆ ಅತ್ಯಾಚಾರಗಳನ್ನು ಧರ್ಮಸಮ್ಮತಗೊಳಿಸಬೇಕೇ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು