ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ನಗರದ ಎಚ್ ಬಿ ಆರ್ ಲೇ ಔಟ್ ನ ವಸತಿ ಮನೆಯನ್ನು ಪ್ರಾರ್ಥನೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಭಾಗೀಯ ಪೀಠವು ಇತ್ತೀಚೆಗೆ ಪಿಐಎಲ್ ನ್ನು ವಜಾಗೊಳಿಸಿತ್ತು. ಪೀಠವು ಅರ್ಜಿಯನ್ನು ವಜಾಗೊಳಿಸಿ ಪ್ರಾರ್ಥನೆಗೆ ಹಾಜರಾಗುವವರಿಂದ ಉಂಟಾಗಬಹುದೆನ್ನಲ್ಲಾದ ಅಡ್ಡಿಗಳ ಬಗ್ಗೆ ಸಾಕಷ್ಟು ಪುರಾವೆಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
ಸ್ಯಾಮ್ ಪಿ. ಫಿಲಿಪ್, ಕೃಷ್ಣ ಎಸ್ ಕೆ, ಜಗಯೀಸನ್ ಟಿಪಿ ಮತ್ತು ಇತರ ಐವರು ಎಚ್ ಬಿ ಆರ್ ಲೇ ಔಟ್ ನಿವಾಸಿಗಳಾಗಿದ್ದು, ಈ ವಿಚಾರವಾಗಿ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ಮಸೀದಿ ಇ-ಅಶ್ರಫಿತ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.ವಸತಿ ಪ್ರದೇಶವನ್ನು ಪ್ರಾರ್ಥನಾ ಮಂದಿರವಾಗಿ ಬಳಸಲಾಗುತ್ತಿದ್ದು, ಇದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದ್ದರು. ಈ ಹಿಂದೆ ಬಿಬಿಎಂಪಿ ಅನುಮತಿ ಇಲ್ಲದೆ ಮಸೀದಿ ಟ್ರಸ್ಟ್ ಕಟ್ಟಡ ನಿರ್ಮಿಸಿದಾಗ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು ಬಿಬಿಎಂಪಿ ಯಿಂದ ಅಗತ್ಯ ಮಂಜೂರಾತಿ ಪಡೆದ ನಂತರವಷ್ಟೇ ಮದರಸಾ ಕಟ್ಟಡ ನಿರ್ಮಿಸಬಹುದು ಎಂದು ಕೋರ್ಟ್ ಸೂಚಿಸಿತ್ತು. ನಂತರ ಕಟ್ಟಡವನ್ನು ನಿರ್ಮಿಸಿ ಬಡಮಕ್ಕಳ ಮದರಸಾವಾಗಿ ಬಳಕೆ ಮಾಡಲಾಗುತ್ತಿತ್ತು. ಬಳಿಕ ಹೊಸ ಕಟ್ಟಡ ನಿರ್ಮಾಣವಾದ ನಂತರ ಪಿಐಎಲ್ ಸಲ್ಲಿಸಲಾಗಿತ್ತು.
ಪಿಐಎಲ್ ಅನ್ನು ವಜಾಗೊಳಿಸುವಾಗ, ನ್ಯಾಯಾಲಯವು ಅರ್ಜಿದಾರ ಪರ ವಕೀಲರು ಅಂತಹ ಯಾವುದೇ ನಿರ್ದಿಷ್ಟ ಪುರಾವೆಗಳನ್ನು ನೀಡುವಲ್ಲಿ ವಿಫಲವಾಗಿದ್ದು ಮತ್ತು ಪ್ರಾರ್ಥನೆ ಸಲ್ಲಿಸಲು ವಸತಿ ಪ್ರದೇಶವನ್ನು ಮಸೀದಿಯಾಗಿ ಬಳಸುವುದು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಪ್ರಾರ್ಥನೆಗೆ ಹೆಚ್ಚು ಹೆಚ್ಚು ಜನರು ಸೇರುವುದರಿಂದ ಇದು ಸಾಮಾನ್ಯವಾಗಿ ಅರ್ಜಿದಾರರಲ್ಲಿ ಮತ್ತು ಇತರೆ ನಿವಾಸಿಗಳು ಭಯದಲ್ಲಿದ್ದಾರೆ ಎಂದು ಹೇಳಲಾಗುತ್ತಿದ್ದರು. ಈ ಕಾರಣಗಳು ತರ್ಕ ಅಥವಾ ಕಾನೂನಿನ ಚೌಕಟ್ಟನ್ನು ಹೊಂದಿಲ್ಲ ಎಂದು ವಾದಿಸಲಾಗಿದೆ.
ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಪ್ರಾರ್ಥನೆಗಳನ್ನು ನಡೆಸುವುದರಿಂದ ಅಪಾಯವಿದೆ ಎಂದು ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಇಂತಹ ಹೇಳಿಕೆಗಳನ್ನು ನೀಡಲು ನಿಮಗೆ ಯಾವುದೇ ಹಕ್ಕಿಲ್ಲ. ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಮಾತ್ರ ಹೇಳಬಹುದು. ಯಾರಾದರೂ ಪ್ರಾರ್ಥನೆ ಸಲ್ಲಿಸುವುದು ಬೆದರಿಕೆಯ ಚಟುವಟಿಕೆ ಎಂದು ನೀವು ಹೇಗೆ ಹೇಳುತ್ತೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.