ಆಪರೇಷನ್‌ ಹಸ್ತದ ಮುನ್ಸೂಚನೆ; ತತ್ವ–ಸಿದ್ಧಾಂತ ಒಪ್ಪಿಕೊಳ್ಳುವವರು ಪಕ್ಷಕ್ಕೆ ಬರಬಹುದು: ಸಿದ್ದರಾಮಯ್ಯ

ರಾಜ್ಯ

ಕಾಂಗ್ರೆಸ್‌ ತೊರೆದಿರುವವರ ಸಹಿತ ಅನ್ಯ ಪಕ್ಷಗಳ ಶಾಸಕರು ಹಾಗೂ ಮುಖಂಡರ ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ನೀಡಿರುವ ಬಹಿರಂಗ ಆಹ್ವಾನ ಆಪರೇಷನ್‌ ಹಸ್ತದ ಮುನ್ಸೂಚನೆ ಎಂಬ ಮಾತು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬಂದಿದೆ. ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ವರಿಷ್ಠರು ನೀಡಿರುವ 20ರ ಗುರಿಗಾಗಿ ಅನ್ಯ ಪಕ್ಷಗಳ ಕನಿಷ್ಠ 20 ಪ್ರಭಾವಿ ನಾಯಕರನ್ನು ಸೆಳೆಯುವುದಕ್ಕೆ ಕಾಂಗ್ರೆಸ್‌ ನೀಲ ನಕ್ಷೆ ರೂಪಿಸುತ್ತಿದೆ ಎನ್ನಲಾಗಿದೆ.

ಆಪರೇಷನ್‌ ಕಮಲ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದ್ದ ಸಿದ್ದರಾಮಯ್ಯ ತತ್ವ – ಸಿದ್ಧಾಂತ ಒಪ್ಪಿಕೊಳ್ಳುವವರು ಪಕ್ಷಕ್ಕೆ ಬರಬಹುದು ಎಂದು ಹೇಳಿದ್ದಾರೆ. ಇಷ್ಟು ದಿನ ಆಪರೇಷನ್‌ ಹಸ್ತ ವಿಚಾರದಲ್ಲಿ ತಟಸ್ಥರಾಗಿದ್ದ ಅವರು ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ. ಇದು ಲೋಕಸಭಾ ಚುನಾವಣೆ ದೃಷ್ಟಿಯಿಂದ ಅನ್ಯಪಕ್ಷದವರಿಗೆ ನೀಡಿದ ಬಹಿರಂಗ ಆಹ್ವಾನ ಎಂದೇ ಹೇಳಬಹುದು.
ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರಬಲ್ಲ ಸಾಮರ್ಥ್ಯ ಇರುವ ಮುಖಂಡರನ್ನೇ ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಆಪರೇಷನ್‌ ಪ್ರಾರಂಭಿಸಿದ್ದು, ಸುಮಾರು 20 ನಾಯಕರನ್ನು ಭವಿಷ್ಯದಲ್ಲಿ ಪಕ್ಷಕ್ಕೆ ಸೆಳೆಯುವ ಲೆಕ್ಕಾಚಾರವನ್ನು ಇಟ್ಟುಕೊಂಡಿದೆ ಎನ್ನಲಾಗಿದೆ.