ಕರ್ನಾಟಕ ಭಾರತೀಯ ಜನತಾ ಪಕ್ಷದಲ್ಲಿ ಆಂತರಿಕ ಕಲಹ ಮುಂದುವರಿದಿದ್ದು ತಾರಕ್ಕೇರುತ್ತಿದೆ.ಬಿಜೆಪಿ ನಾಯಕ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು, ಶೀಘ್ರದಲ್ಲೇ ರಾಜ್ಯ ಬಿಜೆಪಿ ಮುಕ್ತವಾಗಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ ಬಿಜೆಪಿಯ ಪರಮೋಚ್ಚ ನಾಯಕ ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಿದ್ದೇ ಬಿಜೆಪಿಗೆ ಶಾಪವಾಗಿ ಪರಿಣಮಿಸಿದೆ. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಲಾಯಿತು. ಇದರ ಪರಿಣಾಮ ಪಕ್ಷಕ್ಕೆ ಭಾರೀ ಹಾನಿಯಾಗಿದೆ. ಕರ್ನಾಟಕದಲ್ಲಿ ನಾವು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳಿದ್ದೆವು. ಆದರೆ, ಇಂದು ನಮ್ಮ ಪಕ್ಷಕ್ಕೆ ಅದೇ ಪರಿಸ್ಥಿತಿ ಬಂದಿದೆ. ರಾಜ್ಯದಲ್ಲಿ ಬಿಜೆಪಿ ಮುಕ್ತವಾಗಲಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲ ಎಂದು ಆರೋಪಿಸಿದ ಮಾಜಿ ಸಚಿವ, ಪಕ್ಷವನ್ನು ದೂರದ ಸ್ಥಳದಲ್ಲಿದ್ದುಕೊಂಡು ಯಾರೋ ನಿಯಂತ್ರಿಸುತ್ತಾರೆ. ಇದೇ ರೀತಿ ಮುಂದುವರಿದರೆ ಪಕ್ಷ ಸರ್ವನಾಶವಾಗಲಿದೆ ಎಂದರು. ಬಿಜೆಪಿ ನಾಯಕರು ಭ್ರಮೆಯಲ್ಲಿ ಬದುಕುತ್ತಿದ್ದು, ಇದರಿಂದ ಮೊದಲು ಹೊರಬರಬೇಕು ಎಂದಿದ್ದಾರೆ.