ಗ್ರಾಮ ಪಂಚಾಯಿತಿಗಳಿಗೆ ವ್ಯಾಪಾರ ಪರವಾನಿಗೆ ನೀಡಲು ಅಧಿಕಾರವಿಲ್ಲ; ಸರಕಾರದ ಆದೇಶ ಇದ್ದರೂ ಪಾಲನೆ ಆಗುತ್ತಿಲ್ಲ.

ರಾಜ್ಯ

ರಾಜ್ಯಾದ್ಯಂತ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇರುವ ವ್ಯಾಪಾರ ಮಳಿಗೆ, ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ವ್ಯಾಪಾರ ಪರವಾನಿಗೆ ನೀಡಲು ಗ್ರಾಮ ಪಂಚಾಯತ್ ಗಳಿಗೆ ಯಾವುದೇ ಅಧಿಕಾರ ಇಲ್ಲ ಎಂದು 2006 ರಲ್ಲಿ ಸರಕಾರ ಆದೇಶ ಹೊರಡಿಸಿದ್ದರೂ, ಪಂಚಾಯತ್ ಗಳಲ್ಲಿ ಇದು ಪಾಲನೆ ಆಗುತ್ತಿಲ್ಲ. ಪಂಚಾಯತ್ ನಿರಾಕ್ಷೇಪಣಾ ಪತ್ರ ಮಾತ್ರ ನೀಡಬೇಕಾಗಿದ್ದು, ಇದನ್ನೇ ಪರವಾನಿಗೆ ಎಂದು ಪಂಚಾಯತ್ ಹಾಗೂ ಜನರು ಭಾವಿಸಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಹನೀಫ್ ಪಾಜಪಳ್ಳ ಹೇಳಿದ್ದಾರೆ.

ಪಂಚಾಯತ್ ನಿಂದ ನಿರಾಕ್ಷೇಪಣಾ ಪತ್ರ ಪಡೆಯುವ ಅಗತ್ಯ ವ್ಯಾಪಾರ ಮಳಿಗೆಗಳಿಗೆ ಇದೆ. ವ್ಯಾಪಾರ ಪರವಾನಿಗೆ ನೀಡಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ಇಲ್ಲ ಎಂದು ಸರಕಾರ 16.4.2006 ರಲ್ಲಿ ಹೊರಡಿಸಿದ ಸುತ್ತೋಲೆ ಸಂಖ್ಯೆ 3 ರಲ್ಲಿ ತಿಳಿಸಿದೆ. ಸರಕಾರದ ಆದೇಶ ಇದ್ದರೂ ಪಂಚಾಯಿತಿಯವರು ಸರಿಯಾದ ಮಾಹಿತಿ ಇಲ್ಲದೇ, ವಾಸ್ತವ ವಿಚಾರ ತಿಳಿಯದೇ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯವಹಾರ ಕೇಂದ್ರಗಳನ್ನು ಆರಂಭಿಸಲು ವ್ಯಾಪಾರ ಪರವಾನಿಗೆ ಪಡೆಯಬೇಕೆಂದು ಬೇಡಿಕೆ ಇಡುತ್ತಿದ್ದಾರೆ. ಸರಕಾರ ತನ್ನ ಸುತ್ತೋಲೆಯಂತೆ ಕೈಗಾರಿಕೆಗಳಿಗೆ ಕೊಡುವ ವ್ಯಾಪಾರ ಪರವಾನಿಗೆ ಮತ್ತು ಇತರ ಉದ್ದಿಮೆಗಳಿಗೆ ಕೊಡುವ ಪರವಾನಿಗೆ ಬಗ್ಗೆ ಎಲ್ಲಿಯೂ ಉಲ್ಲೇಖ ಮಾಡದೇ ಇದ್ದುದರಿಂದ ಸಾರ್ವಜನಿಕರಿಗೆ ಪಂಚಾಯಿತಿಯವರು ತಪ್ಪು ಮಾಹಿತಿ ನೀಡಿ ನಿರಾಕ್ಷೇಪಣಾ ಪತ್ರವನ್ನೇ ವ್ಯಾಪಾರ ಪರವಾನಿಗೆ ಆಗಿ ಗುರುತಿಸಿದ್ದಾರೆ. ಇದರಿಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಾಪಾರಸ್ಥರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಕೂಡಲೇ ಗ್ರಾಮ ಪಂಚಾಯಿತಿಗಳು ಸರಕಾರದ ಆದೇಶ ಪಾಲನೆ ಮಾಡಲು ಮೇಲಾಧಿಕಾರಿಗಳು ಸೂಚನೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.