ಗೌತಮ್ ಅದಾನಿ ಸಮೂಹಕ್ಕೆ ಮತ್ತೊಂದು ಸಂಕಟ; ಒಸಿಸಿಆರ್ ಪಿ ವರದಿ ಬಳಿಕ ನೆಲಕಚ್ಚಿದ ಷೇರು

ರಾಷ್ಟ್ರೀಯ

ಹಿಂಡನ್ ಬರ್ಗ್ ವರದಿಯ ನಂತರ ಉದ್ಯಮಿ ಗೌತಮ್ ಅದಾನಿ ಅವರ ಕಂಪನಿಗಳ ವಿರುದ್ಧ ಮತ್ತೊಂದು ಗುರುತರ ಆರೋಪ ಕೇಳಿ ಬಂದಿದೆ. ಸಾರ್ವಜನಿಕವಾಗಿ ಪಟ್ಟಿ ಮಾಡಲ್ಪಟ್ಟ ಅದಾನಿ ಕಂಪನಿಗಳ ಷೇರುಗಳಲ್ಲಿ ‘ಅಪಾರದರ್ಶಕ’ ಮಾರಿಷಸ್ ನಿಧಿಗಳ ಹಣದ ಹರಿವು ಕಂಡು ಬಂದಿದೆ ಎಂದು ತನಿಖಾ ವರದಿಯನ್ನು ಮಾಡುವ ಒಸಿಸಿಆರ್ ಪಿ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ. ಹಗರಣದಲ್ಲಿ ಅದಾನಿ ಕುಟುಂಬದ ಪಾಲುದಾರರ ಪಾತ್ರ ಇದೆ ಎಂದು ವರದಿ ಆರೋಪಿಸಿದೆ.

ಆದರೆ ಒಸಿಸಿಆರ್ ಪಿ ಮಾಡಿದ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದೇನೆ ಎಂದು ಅದಾನಿ ಗ್ರೂಪ್ ಹೇಳಿದೆ. ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್ ಪಿ) ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯ ವರದಿ, ಷೇರು ಮಾರುಕಟ್ಟೆಯಲ್ಲಿ ಪ್ರಭಾವ ಬೀರಿದೆ. ಅದಾನಿ ಕಂಪೆನಿಯ ಷೇರುಗಳು ಗುರುವಾರದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡಿದೆ.

ಅದಾನಿ ಎಂಟರ್ ಪ್ರೈಸಸ್ ಷೇರುಗಳು ಶೇ 3.51, ಅದಾನಿ ಪೋಟ್ಸ್ ಆಂಡ್ ಸ್ಪೆಷಲ್ ಎಕಾನಮಿಕ್ ಝೋನ್ ಷೇರುಗಳು ಶೇ 3.18, ಅದಾನಿ ಟೋಟಲ್ ಗ್ಯಾಸ್ ಷೇರುಗಳು ಶೇ 2.24, ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಷೇರುಗಳು ಶೇ 3.76 ರಷ್ಟು ಕುಸಿತ ಕಂಡಿದೆ. ತೆರಿಗೆ ಸ್ವರ್ಗಗಳೆಂದೇ ಗುರುತಿಸಲಾಗುವ ದೇಶಗಳ ವಿಶ್ಲೇಷಣಾ ಫೈಲ್ ಗಳು ಮತ್ತು ಅದಾನಿ ಗ್ರೂಪ್ ನ ಆಂತರಿಕ ಇ-ಮೇಲ್ ಗಳ ಪರಿಶೀಲನೆ ಬಳಿಕ ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆ ಒಸಿಸಿಆರ್ ಪಿ ಯ ವರದಿ ಪ್ರಕಟವಾಗಿದೆ. ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಹಿಂಡನ್ ಬರ್ಗ್ ರಿಸರ್ಚ್ ಕಳೆದ ಜನವರಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಅನುಚಿತ ವ್ಯಾಪಾರ, ವ್ಯವಹಾರಗಳನ್ನು ಆರೋಪಿಸಿತ್ತು.

ಮಾರಿಷಸ್ ನಂತಹ ತೆರಿಗೆ ಸ್ವರ್ಗಗಳಲ್ಲಿನ ಕೆಲವು ನಿಧಿಗಳು ಅದಾನಿ ಸಂಸ್ಥೆಗಳಲ್ಲಿ ‘ಗುಪ್ತವಾಗಿ’ ಷೇರು ಒಡೆತನ ಹೊಂದಿದೆ ಎಂದು ಆರೋಪಿಸಿತ್ತು. ಹಿಂಡನ್ ಬರ್ಗ್ ನ ಜನವರಿ ವರದಿಯ ನಂತರ ಅದಾನಿ ಸಮೂಹದ ಷೇರುಗಳ ಮಾರುಕಟ್ಟೆ ಮೌಲ್ಯ ಸುಮಾರು 150 ಬಿಲಿಯನ್ ಡಾಲರ್ ಗಳಷ್ಟು ಕುಸಿತ ಕಂಡಿತ್ತು. ಇತ್ತೀಚಿನ ತಿಂಗಳುಗಳಲ್ಲಿ ಕೆಲವು ಸಾಲವನ್ನು ಮರುಪಾವತಿಸಿದ ನಂತರ ಷೇರುಗಳು ಒಂದಿಷ್ಟು ಚೇತರಿಸಿಕೊಂಡಿವೆಯಾದರೂ ಗರಿಷ್ಠ ಮಟ್ಟದಿಂದ ಇನ್ನು ಸುಮಾರು 100 ಬಿಲಿಯನ್ ಡಾಲರ್ ಗಳಷ್ಟು ಕೆಳಮಟ್ಟದಲ್ಲಿಯೇ ಇವೆ.