ಕಾಂಗ್ರೆಸ್ ಪಕ್ಷ ಮುಸ್ಲಿಮರನ್ನು ರಬ್ಬರ್ ಸ್ಟ್ಯಾಂಪ್ ತರ ಬಳಸುತ್ತಿದೆಯೇ.?

ರಾಜ್ಯ

ಕಾಂಗ್ರೆಸ್ ‘ಕೈ’ ಹಿಡಿದ ಮುಸ್ಲಿಂ ಸಮುದಾಯಕ್ಕೆ ನಿಗಮ ಮಂಡಳಿ, ರಾಜ್ಯ,ಜಿಲ್ಲಾ,ಬ್ಲಾಕ್ ಮಟ್ಟದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಒಕ್ಕೊರಲ ಕೂಗು

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರಲು ಮುಸ್ಲಿಂ ಸಮುದಾಯ ಕಾರಣವಾಗಿದ್ದು, ಶೇಕಡ 90% ರಷ್ಟು ಮುಸ್ಲಿಂ ಸಮುದಾಯದ ಮತಗಳು ಒಗ್ಗಟ್ಟಾಗಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಚಲಾವಣೆಯಾಗಿರುವುದು ಎಲ್ಲಾ ಅಂಕಿ ಅಂಶಗಳು ಸ್ಪಷ್ಟವಾಗಿದೆ. ಅಧಿಕಾರದಲ್ಲಿದ್ದ ಬಿಜೆಪಿಯ ಕೋಮು ಧ್ರುವೀಕರಣದಿಂದ ಬೇಸತ್ತು ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಬಿಜೆಪಿ ಯನ್ನು ಸೋಲಿಸುವ ಏಕೈಕ ಅಜೆಂಡಾವನ್ನು ಇಟ್ಟು ಈ ಬಾರಿ ಮುಸ್ಲಿಂ ಸಮುದಾಯ ಮತ ಚದುರದಂತೆ ನೋಡಿಕೊಂಡ ಪರಿಣಾಮ ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆಯಲು ಕಾರಣವಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೂ ಕಾಂಗ್ರೆಸ್ ಪಕ್ಷ ಕೈ ಹಿಡಿದ ಮುಸ್ಲಿಂ ಸಮುದಾಯಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಸೂಕ್ತ ಸ್ಥಾನಮಾನ ನೀಡಲು ಹಿಂದೇಟು ಹಾಕುತ್ತಿರುವುದು ಸಮುದಾಯದಲ್ಲಿ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಚಿವ ಸಂಪುಟದಲ್ಲಿ ಕೇವಲ 2 ಸ್ಥಾನ ಮುಸ್ಲಿಂ ಸಮುದಾಯಕ್ಕೆ ನೀಡಿರುವುದು, ಎಂಎಲ್ಸಿ ಸ್ಥಾನವೂ ನೀಡದೆ ಇರುವುದು ಸೂಕ್ತ ಪ್ರಾತಿನಿಧ್ಯ ದೊರಕದೆ ವಂಚಿಸಲಾಗುತ್ತಿದೆ ಎಂಬ ಆರೋಪ ರಾಜ್ಯ ಸರಕಾರದ ವಿರುದ್ಧ ಕೇಳಿ ಬರುತ್ತಿದೆ. ಮುಂದಿನ ನಿಗಮ ಮಂಡಳಿ, ಬ್ಲಾಕ್ ಪುನರ್ರಚನೆಯಲ್ಲದರೂ ಸೂಕ್ತ ಸ್ಥಾನಮಾನ ನೀಡುವಂತೆ ಇದೀಗ ಒತ್ತಾಯ ಕೇಳಿ ಬರುತ್ತಿದೆ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 50 ಪರ್ಸೆಂಟ್ ಮುಸ್ಲಿಂ ಮತದಾರರು ಇರುವುದರಿಂದ ಬಂಟ್ವಾಳ ಹಾಗೂ ಪಾಣೆಮಂಗಳೂರು ಇವೆರಡರಲ್ಲಿ ಒಂದು ಬ್ಲಾಕಿನ ಅಧ್ಯಕ್ಷರನ್ನಾಗಿ ಮುಸಲ್ಮಾನ ನಾಯಕನನ್ನು ನೇಮಿಸುವಂತೆ ಕೂಗು ಎದ್ದಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾಡಿನ ನೆಮ್ಮದಿ, ಶಾಂತಿ ಸಾಮರಸ್ಯ ಕಾಪಾಡುವ ಹಾಗೂ ಜನಸಾಮಾನ್ಯರ ನೆಮ್ಮದಿಯ ಬದುಕನ್ನು ಬಯಸಿದ ಮುಸ್ಲಿಂ ಸಮುದಾಯವು ಶೇಕಡ 90ರಷ್ಟು ಮುಸ್ಲಿಂ ಸಮುದಾಯದ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಮುಸ್ಲಿಮರೇ ಅಧಿಕವಿರುವ ಉಳ್ಳಾಲದಲ್ಲಿ ಕೇವಲ ಹತ್ತು ಸಾವಿರ ಮುಸ್ಲಿಮೇತರರ ಮತಗಳನ್ನು ಪಡೆದ ಕಾಂಗ್ರೆಸ್ ಪಕ್ಷವು ವಿಜಯಪತಾಕೆಯನ್ನು ಹಾರಿಸಿದೆ.

ಪುತ್ತೂರಿನಲ್ಲಿ ಬಿಜೆಪಿಯ ಮತಗಳು ಇಬ್ಬಾಗವಾಗಿರುವುದರಿಂದ ಮಾತ್ರ ಕಾಂಗ್ರೆಸ್ ಪಕ್ಷವು ಜಯಗಳಿಸಿರುವುದಲ್ಲದೆ ಅದರಲ್ಲಿ ಹೆಮ್ಮೆಪಟ್ಟುಕೊಳ್ಳುವಂಥದ್ದು ಏನು ಇಲ್ಲ.

ಮುಸಲ್ಮಾನ ಸಮುದಾಯವು ಹಿಂದಿನಿಂದಲೇ ಕಾಂಗ್ರೆಸ್ ಪಕ್ಷವನ್ನೇ ಬೆಂಬಲಿಸುತ್ತಾ ಬಂದಿರುತ್ತದೆ, ಅದೇ ಕಾಂಗ್ರೆಸ್ ಪಕ್ಷದ ಎಲ್ಲಾ ಸಭಾ ಸಮಾರಂಭಗಳಿಗೆ ಬ್ಯಾನರ್ ಬಂಟಿಂಗ್ ಕಟ್ಟುವುದರಿಂದ ಹಿಡಿದು ಪ್ರತಿಯೊಂದು ಸಭೆ ಸಮಾರಂಭಗಳ ಯಶಸ್ಸಿಗೂ ಕಾರಣವಾಗಿದೆ.

ಆದರೆ ಕಾಂಗ್ರೆಸ್ ಪಕ್ಷದಲ್ಲಾಗಲಿ ಅಥವಾ ಇನ್ನಿತರ ನಿಗಮ ಮಂಡಳಿಗಳಲ್ಲಾಗಲಿ ಅಥವಾ ವಿಧಾನ ಪರಿಷತ್ ಚುನಾವಣೆಗೆ ಸೀಟು ಹಂಚಿಕೆಯ ಸಮಯದಲ್ಲಾಗಲಿ ಮುಸ್ಲಿಂ ಸಮುದಾಯವು ಕಾಂಗ್ರೆಸ್ ಪಕ್ಷದಿಂದ ವಂಚನೆಗೊಳಗಾಗುತ್ತಲೇ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ಕೋಡಿಜಾಲ್ ಇಬ್ರಾಹಿಂ ರವರನ್ನು ಬರೇ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಬಿಟ್ಟರೆ ಇದುವರೆಗೆ ಒಬ್ಬ ಮುಸ್ಲಿಂ ಸಮುದಾಯದ ನಾಯಕನನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ನೇಮಿಸಿದ ಇತಿಹಾಸವಿಲ್ಲ.

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿಗೆ ಮಾತ್ರ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಬ್ಬಾಸ್ ಅಲಿಯವರನ್ನು ಬರೇ ರಬ್ಬರ್ ಸ್ಟ್ಯಾಂಪ್ ಆಗಿ ನೇಮಿಸಲಾಗಿತ್ತು.

ಇದೀಗ ಬ್ಲಾಕ್ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳ ನೇಮಕಾತಿಯ ಪ್ರಕ್ರಿಯೆಯು ಚಾಲನೆಯಲ್ಲಿದ್ದು ಬಂಟ್ವಾಳ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಹಾಗೂ ಉಳ್ಳಾಲ, ಸುರತ್ಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲಾ ಒಬ್ಬೊಬ್ಬರನ್ನು ಮುಸ್ಲಿಂ ಸಮುದಾಯದ ಬ್ಲಾಕ್ ಅಧ್ಯಕ್ಷರನ್ನಾಗಿ ನೇಮಿಸಬೇಕು ಹಾಗೂ ಮುಸ್ಲಿಂ ಸಮುದಾಯಕ್ಕೆ ನಿಗಮ ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನವನ್ನು ನೀಡಬೇಕು ಎಂಬುವುದು ಮುಸ್ಲಿಂ ಸಮುದಾಯದ ಒಕ್ಕೊರಲ ನಿರ್ಧಾರವಾಗಿದೆ.

ಒಂದು ವೇಳೆ ಮುಸ್ಲಿಂ ಸಮುದಾಯವನ್ನು ಕಡೆಗಣಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಬಲಹೀನಗೊಳ್ಳಲಿದೆ.

ಮುಸ್ಲಿಂ ಸಮುದಾಯದ ಶೇಕಡವಾರು ಅಂಕಿ ಅಂಶಗಳನ್ನು ಪರಿಗಣಿಸಿ ಸೂಕ್ತ ಸ್ಥಾನಮಾನವನ್ನು ನೀಡಬೇಕೆನ್ನುವ ಸಮುದಾಯದ ಈ ಬೇಡಿಕೆಯನ್ನು ಕಾಂಗ್ರೆಸ್ ಪಕ್ಷದ ನಾಯಕರು ಗಣನೆಗೆ ತೆಗೆದುಕೊಂಡು ಬಲಿಷ್ಟ ಕಾಂಗ್ರೆಸ್ ಪಕ್ಷವನ್ನು ನಿರ್ಮಿಸಲು ಸಹಕಾರಿ ಯಾಗುತ್ತೀರಿ ಎನ್ನುವುದು ಸಮುದಾಯದ ಅಭಿಲಾಷೆ ಆಗಿರುತ್ತದೆ.