ಏನಿದು ಶಿಕ್ಷಕರ ದಿನಾಚರಣೆ?

ರಾಷ್ಟ್ರೀಯ

ಗುರುಗಳೇ! ನಾನು ನಿಮ್ಮ ಶಿಷ್ಯ. ನಿಮ್ಮ ಇನ್ನೂರು ರೂ. ಸಾಲವನ್ನು ತೀರಿಸಲು ಬಂದಿದ್ದೇನೆ”

✍️. ಡಿ. ಐ. ಅಬೂಬಕರ್ ಕೈರಂಗಳ

ಸರ್ವಪಲ್ಲಿ ರಾಧಾಕೃಷ್ಣನ್ ಅವರು ಮೈಸೂರು ವಿ.ವಿ. ತತ್ವಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿದ್ದಾಗಲೇ ಅವರನ್ನು ಉಪರಾಷ್ಟಪತಿಯಾಗಿ ಭಾರತ ಸರಕಾರ ಆಯ್ಕೆ ಮಾಡಿತ್ತು. ಹುದ್ದೆ ಸ್ವೀಕಾರಕ್ಕೆ ದೆಹಲಿಗೆ ಅವರು ಹೊರಟಾಗ ರೈಲ್ವೇ ಸ್ಟೇಶನ್ ತನಕ ಅಲಂಕೃತ ಕುದುರೆ ಸಾರೋಟ್ ನಲ್ಲಿ ಗೌರವಾದರ ಪೂರ್ವಕ ಕರಕೊಂಡು ಹೋಗಲಾಗಿತ್ತು. ಸಾರೋಟನ್ನು ಎಳೆದುಕೊಂಡು ಹೋಗಿದ್ದು ಕುದುರೆಗಳಾಗಿರಲಿಲ್ಲ. ವಿದ್ಯಾರ್ಥಿಗಳೇ ಅಲ್ಲಿ ತನಕ ಎಳೆದು ಕೊಂಡು ಹೋಗಿ ತಮ್ಮ ಮನದಾಳದ ಗುರು ಗೌರವವನ್ನು ತೋರಿದ್ದರು. ಮುಂದೆ ಈ ಘಟನೆಯನ್ನು ರಾಧಾಕೃಷ್ಣನ್ ಅವರು ಭಾವುಕತೆಯಿಂದ ನೆನಪಿಸುತ್ತಿದ್ದರು.

ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸುವಾಗ 1952 ಅಂದರೆ ಸುಮಾರು 70 ವರ್ಷಗಳ ಹಿಂದೆ ಇದ್ದ ಗುರುಶಿಷ್ಯ ಭಾವನಾತ್ಮಕ ಸಂಬಂಧವನ್ನು ನೆನಪಿಸುವುದು ಅಗತ್ಯ ಎಂಬ ಉದ್ದೇಶದಿಂದ ಇದನ್ನು ಬರೆದಿದ್ದೇನೆ. ನೈತಿಕ ಬೋಧನೆ ನೀಡಿದ ಶಿಕ್ಷಕರ ಮೇಲೆ ವಿದ್ಯಾರ್ಥಿಯೊಬ್ಬ ಮಚ್ಚು ಝಳಪಿದ ವರದಿಯನ್ನು ಮೊನ್ನೆ ನಾವು ಓದಿದೆವು. ಇಂತಹ ಕಾಲದಲ್ಲಿ ಅಂದಿನ ಗುರುಶಿಷ್ಯ ಸಂಬಂಧದ ಉದಾಹರಣೆಗಳು ಬಹಳ ಪ್ರಸ್ತುತ ವೆನಿಸುತ್ತವೆ.

ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಅರ್ಥವತ್ತಾದ ಚೌಕಟ್ಟನ್ನು ನೀಡಿದ್ದಲ್ಲದೆ ಅತಿ ಶ್ರೇಷ್ಠ ಅಧ್ಯಾಪಕ, ಶಿಕ್ಷಣ ತಜ್ಞರಾಗಿ ಕೊನೆಗೆ 1962 ರಲ್ಲಿ ಭಾರತದ ಎರಡನೆಯ ರಾಷ್ಟಪತಿಯಾಗಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ, ಸರ್ವಶ್ರೇಷ್ಠ
” ಭಾರತ ರತ್ನ” ಬಿರುದು ಪಡೆದಂತಹ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನನ ದಿನಾಂಕವಾದ ಸೆಪ್ಟೆಂಬರ್ 5 ( 1888) ನೆಯ ತಾರೀಕನ್ನು ಶಿಕ್ಷಕರ ದಿನವಾಗಿ ಭಾರತ ಆಚರಿಸುತ್ತಿದೆ. ತಮಿಳ್ನಾಡಿನ ತಿರುತ್ತಣಿ ಎಂಬಲ್ಲಿ ಜನಿಸಿದ್ದ ರಾಧಾಕೃಷ್ಣನ್ ಅವರ ಹೆಸರಲ್ಲಿ ಸರ್ವಪಲ್ಲಿ ಎಂಬುದು ಮನೆತನದ ಹೆಸರು. 1931 ರಲ್ಲಿ ಆಂಧ್ರ ವಿ.ವಿ. ಯ ಕುಲಪತಿಗಳಾಗಿ, 1939 ರಲ್ಲಿ ಬನಾರಸ್ ವಿ.ವಿ. ಯ ಕುಲಪತಿಗಳಾಗಿಯೂ ಶಿಕ್ಷಣಕ್ಷೇತಕ್ಕೆ ಅಪಾರವಾದ ಕೊಡುಗೆಯನ್ನು ಅವರು ನೀಡಿದ್ದರು.
ವಿಶ್ವ ಶಿಕ್ಷಕರ ದಿನಾಚರಣೆ ಅಕ್ಟೋಬರ್ 5 ರಂದು. ಜರ್ಮನಿ, ಜಾರ್ಜಿಯಾ, ಕ್ರೊವೇಶಿಯಾ, ಎಸ್ಬೋನಿಯ ಮುಂತಾದ ಹಲವಾರು ದೇಶಗಳು ವಿಶ್ವ ಶಿಕ್ಷಕರ ದಿನಾಚರಣೆಯ ಅಕ್ಟೋಬರ್‌ 5 ರಂದೇ ತಮ್ಮ ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತವೆ. ಉಳಿದ ದೇಶಗಳು ತಮ್ಮ ದೇಶದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದವರ ಸ್ಮರಣಾರ್ಥವಾಗಿ ಬೇರೆ ಬೇರೆ ದಿನಾಂಕಗಳಲ್ಲಿ ಆಚರಿಸುತ್ತವೆ. ಉದಾ: ಅರ್ಜೆಂಟೀನಾ ದೇಶವು ಡೊಮಿಂಗೋ ಫೌಸ್ಟಿನೋ ಸರ್ಮಿಯಂಟೋ ಮರಣ ಹೊಂದಿದ ಸೆಪ್ಟೆಂಬರ್ 11 ನೆಯ ದಿನ ಶಿಕ್ಷಕರ ದಿನಾಚರಣೆ ಆಚರಿಸುತ್ತಿದೆ. ಫ್ರಾನ್ಸ್ ದೇಶದಲ್ಲಿ ನವೆಂಬರ್ 27, ಬ್ರಝಿಲ್ ಅಕ್ಟೋಬರ್ 15, ಚೀನಾ ಸೆಪ್ಟೆಂಬರ್ 10, ಈಜಿಪ್ಟ್ ಫೆಬ್ರವರಿ 28 ಹೀಗೇ ವಿಭಿನ್ನ ದಿನಗಳಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿದ್ದರೆ ಭಾರತದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಂಕ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸುವ ಕ್ರಮವನ್ನು 1962 ರಲ್ಲಿ ಆರಂಭಿಸಿತ್ತು.

ಗುರು ಶಿಷ್ಯ ಸ್ನೇಹವಿಶ್ವಾಸ ಸಂಬಂಧ ಹದಗೆಟ್ಟು ಗುರು ತನ್ನ ಡ್ಯೂಟಿ ಮುಗಿಸುವುದು, ವಿದ್ಯಾರ್ಥಿಗಳು ತಮ್ಮ ನಿತ್ಯದ ಒಂದು ಕರ್ಮ ಮುಗಿಸುವುದು ಎಂಬಷ್ಟರ ಮಟ್ಟಕ್ಕೆ ಇಳಿದಿರುವ ಇಂದಿನ ಪರಿಸ್ಥಿತಿಯಲ್ಲಿ ಶಿಕ್ಷಕರ ದಿನಾಚರಣೆ ಒಂದು ಕಾಟಾಚಾರವಾಗದೆ ಅರ್ಥಪೂರ್ಣ ಗೊಳಿಸಬೇಕಾದ ಅಗತ್ಯವಿದೆ. ” ಗುರುವಿನ ಗುಲಾಮನಾಗುವ ತನಕ ” ದೊರೆಯದಣ್ಣ ಮುಕುತಿ” ಎಂಬ ಆಶಯ ಬಲವರ್ಧನೆಯಾಗಬೇಕು.

ಇಂದು ಎಷ್ಟೇ ದೊಡ್ಡ ಗೌರವದ ಹುದ್ದೆಯಲ್ಲಿದ್ದು ಅಪಾರ ವೇತನ, ಗೌರವಾದರಗಳನ್ನು ಪಡೆಯುವ ವ್ಯಕ್ತಿಯೇ ಆಗಿದ್ದರೂ ಅವನ ಆ ಯಶದ ಹಿಂದೆ ಅನೇಕ ಗುರುಗಳಿರುತ್ತಾರೆ. ಅವನಿಗೆ ಅದಕ್ಕೆ ಅರ್ಹವಾದ ಶಿಕ್ಷಣವನ್ನು ಕಲಿಸಿದ್ದು ಅಧ್ಯಾಪಕರು.
ಕಲಿಸಿದ ಗುರುಗಳಿಗೆ ಗೌರವ ಕೊಡುವುದರಿಂದ ಘನತೆ ಹೆಚ್ಚುವುದೇ ಹೊರತು ಕಡಿಮೆಯಾಗುವುದಿಲ್ಲ. ಶಿಷ್ಯ ಬಾನೆತ್ತರಕ್ಕೇರಿರಬಹುದು, ಗುರು ನಗಣ್ಯನಾಗಿ, ಬಡಮೇಸ್ಟ್ರಾಗಿಯೇ ಇರಬಹುದು. ಇಷ್ಟು ದೊಡ್ಡ ನಾನು ಆ ಬಡ ಮೇಸ್ಟ್ರಿಗೆ ತಲೆಬಾಗುವುದೇ ಎಂಬ ಅಹಂಭಾವ ಯಾರಿಗೂ ಮೆಚ್ಚುಗೆಯಾಗೋದಿಲ್ಲ. ಗೌರವ ನೀಡಿದರೆ ಎಲ್ಲರ ಮನತುಂಬುತ್ತದೆ. ಇತ್ತೀಚೆಗೆ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಆಟದ ಮೈದಾನದಲ್ಲೇ ತನ್ನ ಬಾಲ್ಯದ ಗುರು ರಾಜ್ ಕುಮಾರ್ ಶರ್ಮಾ ಎಂಬವರ ಕಾಲು ಮುಟ್ಟಿ ನಮಸ್ಕರಿಸಿದ ದೃಶ್ಯ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿತ್ತು. ವಿರಾಟ್ ಕೊಹ್ಲಿಯ ಮೇಲೆ ಅಭಿಮಾನ ಹೆಚ್ಚಿಸಿತ್ತು.

ಮಹಾರಾಷ್ಟ್ರದಲ್ಲೊಂದು ಸಾಮಾನ್ಯ ಶಾಲೆ. ಮುಖ್ಯೋಪಾಧ್ಯಾಯರ ನಿವೃತ್ತಿಗೆ ಕೆಲವೇ ತಿಂಗಳು ಬಾಕಿ. ಇದ್ದಕ್ಕಿದ್ದಂತೆ ಸೈರನ್ ಮೊಳಗಿಸುತ್ತಾ ಜಿಲ್ಲಾಧಿಕಾರಿಯವರ ಕಾರು, ಪೊಲೀಸ್ ಜೀಪುಗಳ ಸಮೇತ ಬಂದು ಶಾಲೆಯ ಅಂಗಳದಲ್ಲಿ ಬಂದು ನಿಂತಾಗ ಎಲ್ಲರೂ ತಬ್ಬಿಬ್ಬಾಗಿದ್ದರು. ಏನು ಗಂಡಾಂತರವೋ ಏನೋ ಎಂಬಂತೆ ಭಯ ಭೀತರಾದ ಮುಖ್ಯೋಪಾಧ್ಯಾಯರು ಮತ್ತು ಉಳಿದ ಶಿಕ್ಷಕರು, ಮಕ್ಕಳು ನಿಬ್ಬೆರಗಾಗಿ ನಿಂತಿದ್ದರು. ಶಾಲೆಗೆ ದಿಡೀರಣೆ ಡಿ‌. ಸಿ.ಯವರ ಆಗಮನದ ಸುದ್ದಿ ತಿಳಿದಾಗ ಆಸು ಪಾಸಿನವರೂ ಓಡೋಡಿ ಬಂದಿದ್ದರು.

ಕಾರಿನಿಂದ ಇಳಿದು ಬಂದ ಜಿಲ್ಲಾಧಿಕಾರಿ ಅಲ್ಲಿ ನಿಬ್ಬೆರಗಾಗಿ ನಿಂತುಕೊಂಡಿದ್ದ ಮುಖ್ಯೋಪಾಧ್ಯಾಯರ ಕಾಲು ಮುಟ್ಟು ನಮಸ್ಕರಿಸುತ್ತಾ
” ಗುರುಗಳೇ! ನಾನು ನಿಮ್ಮ ಶಿಷ್ಯ. ನಿಮ್ಮ ಇನ್ನೂರು ರೂ. ಸಾಲವನ್ನು ತೀರಿಸಲು ಬಂದಿದ್ದೇನೆ” ಎಂದರು.
ಮುಖ್ಯೋಪಾಧ್ಯಾಯರಿಗೆ ಆಗಲೂ ಅರ್ಥವಾಗಿಲ್ಲ. ಈ ಶಿಷ್ಯ ಯಾರು ಎಂಬುದು ನೆನಪಾಗಲಿಲ್ಲ. ಆ ಮೇಲೆ ಜಿಲ್ಲಾಧಿಕಾರಿ 30 ವರ್ಷಗಳ ಹಿಂದಿನ ಘಟನೆಯನ್ನು ನೆನಪಿಸಿದಾಗ ಮುಖ್ಯೋಪಾಧ್ಯಯರಿಗೆ ಎಲ್ಲವೂ ಗೊತ್ತಾಗಿ ಭಾವುಕರಾಗಿ ಗಳಗಳನೆ ಅಳುತ್ತಾ ಜಿಲ್ಲಾಧಿಕಾರಿಯನ್ನು ತಬ್ಬಿ ಹಿಡಿದುಕೊಂಡರು.
ಮೂವತ್ತು ವರ್ಷಗಳ ಹಿಂದೆ ಈ ಮೇಷ್ಟ್ರು ಕ್ಲಾಸಲ್ಲಿ ಒಂದು ದಿನ ನೂರು ರೂಪಾಯಿ ನೋಟನ್ನು ಹಿಡಿದು ಕೊಂಡು;
ಈ ನೋಟನ್ನು ನಾನೀಗ ನಿಮಗೆ ಕೊಟ್ಟರೆ ಏನು ಖರೀದಿಸಿಕೊಳ್ಳುತ್ತೀರಿ?” ಎಂದು ಕೇಳಿದ್ದರು. ಕ್ರಿಕೆಟ್ ಆಟದ ವಸ್ತುಗಳನ್ನು ಕೊಂಡು ಕೊಳ್ಳುತ್ತೇನೆ, ಪುಸ್ತಕ ಖರೀದಿಸುತ್ತೇನೆ ಎಂದೆಲ್ಲ ಒಬ್ಬೊಬ್ಬ ವಿದ್ಯಾರ್ಥಿ ಹೇಳಿದಾಗ ಒಬ್ಬ ಹುಡುಗ;
ನಾನು ಕನ್ನಡಕ ಖರೀದಿಸುತ್ತೇನೆ ಅಂದಿದ್ದ. ಯಾಕೆ ಎಂದು ಗುರುಗಳು ಹೇಳಿದಾಗ ಆ ಹುಡುಗ ಹೇಳಿದ್ದ;
ನನ್ನ ತಂದೆಯವರು ತೀರಿಕೊಂಡಿದ್ದಾರೆ. ತಾಯಿ ಬಟ್ಟೆ ಹೊಲಿದು ನನ್ನನ್ನು ಸಾಕುತ್ತಿದ್ದಾರೆ. ನನ್ನ ಓದಿನ ಖರ್ಚು ಭರಿಸುತ್ತಿದ್ದಾರೆ. ಆದರೆ ಈಗೀಗ ಅವರ ಕಣ್ಣು ಮಂಜಾಗತೊಡಗಿರುವುದರಿಂದ ಹೊಲಿಗೆ ಕಷ್ಟವಾಗುತ್ತಿದೆ. ಅದಕ್ಕೆ ಅವರಿಗೊಂದು ಕನ್ನಡಕ ಕೊಡಿಸುತ್ತೇನೆ.
ಭಾವುಕರಾದ ಅಧ್ಯಾಪಕರು;
” ನೂರು ರೂಪಾಯಿಗೆ ಕನ್ನಡಕ ಸಿಗದು. ನಾನು ಮುನ್ನೂರು ರೂ. ಕೊಡುತ್ತೇನೆ. ಇನ್ನೂರು ರೂ. ಸಾಲ. ಅದನ್ನು ನೀನು ಓದಿ ದೊಡ್ಡವನಾಗಿ ಹುದ್ದೆಗೆ ಸೇರಿದ ನಂತರ ಮರಳಿಸಿದರೆ ಸಾಕು” ಎನ್ನುತ್ತಾ ಮುನ್ನೂರು ರೂ. ಕೊಟ್ಟಿದ್ದರು. ನೂರು ರೂ ಮೊದಲೇ ತೋರಿಸಿದ್ದ ಉಚಿತ. ಇನ್ನೂರು ರೂ. ಸಾಲ.
ಇದೀಗ ಬಂದಿದ್ದ ಜಿಲ್ಲಾಧಿಕಾರಿ ಅದೇ ಅಂದಿನ ಹುಡುಗನಾಗಿದ್ದ!
ಇಂತಹ ಗುರುಶಿಷ್ಯ ಸಂಬಂಧ ಬೆಸೆಯುವ ಪ್ರಯತ್ನಗಳತ್ತ ನಮ್ಮ ಶಿಕ್ಷಕರ ದಿನಾಚರಣೆ ಸಾಗಿ ಅರ್ಥಪೂರ್ಣವಾಗಲಿ.