ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ.
✍️. ಮುನೀರ್ ಕಾಟಿಪಳ್ಳ
“ವಿಶ್ವ ವಿದ್ಯಾಲಯ” ದ ನಿಧಿ ಧಾರ್ಮಿಕ (ಯಾವುದೇ ಧರ್ಮದ) ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ ಎಂಬ ಸಾಮಾನ್ಯ ತಿಳುವಳಿಕೆ ಮಂಗಳೂರು ನಗರ ದಕ್ಷಿಣದ ಬಿಜೆಪಿ ಶಾಸಕ ವೇದವ್ಯಾಸ ಕಾಮತರಿಗೆ ಇಲ್ಲವೆ ? ‘ಮಂಗಳೂರು ವಿ ವಿ ವತಿಯಿಂದಲೇ ಗಣೇಶೋತ್ಸವ ಆಚರಿಸಬೇಕು, ಗಣೇಶೋತ್ಸವದ ಖರ್ಚಿಗೆ 2 ಲಕ್ಷ ರೂಪಾಯಿ ವಿ ವಿ ಬಿಡುಗಡೆಗೊಳಿಸಬೇಕು’ ಎಂದು ಎಬಿವಿಪಿ ಬೇಡಿಕೆ ಮುಂದಿಡುತ್ತದೆ, ವಿ ವಿ ನಿಯಮಗಳಿಗೆ ವಿರುದ್ದವಾದ ಈ ಬೇಡಿಕೆಗೆ ಒಪ್ಪಿಗೆ ನೀಡದ ಕುಲಪತಿ ಜಯರಾಜ ಅಮೀನ್ ಕಚೇರಿಗೆ ಶಾಸಕ ವೇದವ್ಯಾಸ ಕಾಮತ್ ತನ್ನ ಪಠಾಲಂ ಜೊತೆ ನುಗ್ಗುತ್ತಾರೆ, ನಿಯಮಗಳ ತೊಡಕು ಮುಂದಿಟ್ಟ ಗೌರವಾನ್ವಿತ ಕುಲಪತಿಯವರನ್ನು ಎರಡು ತಾಸಿಗೂ ಅಧಿಕ ಕಾಲ ಅಲ್ಲಾಡಲು ಬಿಡದೆ ಬೆದರಿಸುತ್ತಾರೆ ಎಂಬ ಸುದ್ದಿ ಅವಮಾನಕಾರಿಯಾದದ್ದು. ಎರಡನೇ ಅವಧಿಯ ಶಾಸಕರಿಗೆ ಸಂವಿಧಾನ, ವಿ ವಿ, ಅದರ ನಿಯಮಗಳ ಅರಿವಿಲ್ಲದಿರುವುದು, ಕುಲಪತಿಗಳಿಗೆ (ಹಿಂದುಳಿದ ಸಮುದಾಯದ) ಕನಿಷ್ಟ ಗೌರವವನ್ನೂ ನೀಡದೆ ಗೂಂಡಾಗಿರಿ ಮೆರೆದು ಬೆದರಿಸುವುದು, ಅಪಮಾನಿಸುವುದು ಖಂಡನೀಯ. ಈ ಕುರಿತು ನಾಗರಿಕ ಸಮಾಜ ಧ್ವನಿ ಎತ್ತಬೇಕು. ಕುಲಪತಿ ಜಯರಾಜ ಅಮೀನ್ ಜೊತೆ ನಿಲ್ಲಬೇಕು.
“ಎಬಿವಿಪಿ ಬೇಡಿಕೆಯಂತೆ ಗಣೇಶೋತ್ಸವಕ್ಕೆ ಎರಡು ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕು, ವಿ ವಿ ವತಿಯಿಂದಲೇ ಗಣೇಶೋತ್ಸವ ಮಾಡಬೇಕು” ಎಂದು ಬಿಜೆಪಿ ಶಾಸಕ ವೇದವ್ಯಾಸ ಕಾಮತರು ಎಸಗಿದ ಗೂಂಡಾಗಿರಿ ಹಾಗೂ ಒಟ್ಟು ಪ್ರಕರಣದ ಕುರಿತು ಪೂರ್ಣ ವಿವರವಾಗಿ ಮಂಗಳೂರು ವಿ ವಿ ಕುಲಪತಿ ಜಯರಾಮ ಅಮೀನ್ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಮಾರ್ಗದರ್ಶನ ಮಾಡುವಂತೆ ವಿನಂತಿಸಿದ್ದಾರೆ. ಅದರ ಪ್ರತಿ ಲಭ್ಯವಾಗಿದೆ.
ಶಾಸಕರು ಸ್ಥಳೀಯ ಏಳೆಂಟು ಬಿಜೆಪಿ ಮುಖಂಡರ ತಂಡದೊಂದಿಗೆ ಕುಲಪತಿ ಕಚೇರಿಗೆ ಅಕ್ಷರಶಃ ನುಗ್ಗಿದ್ದಾರೆ. ಗಣೇಶೋತ್ಸವಕ್ಕೆ ಹಣ ಬಿಡುಗಡೆ ಮಾಡುವಂತೆ ಆಕ್ರಮಣಕಾರಿಯಾಗಿ ಆಗ್ರಹಿಸಿದ್ದಾರೆ. ಒಪ್ಪದೇ ಇದ್ದದ್ದಕ್ಕೆ ಸತತ ಎರಡು ಗಂಟೆಗಳ ಕಾಲ ಕುಲಪತಿಗಳನ್ನು ಅವರದ್ದೆ ಕಚೇರಿಯಲ್ಲಿ ಕೂಡಿ ಹಾಕಿದ್ದಾರೆ. ಥೇಟ್ ರೌಡಿಗಳಂತೆ ಬೆದರಿಸಿದ್ದಾರೆ. ಇದು ಅನಾಗರಿಕ ನಡೆ ಮಾತ್ರ ಅಲ್ಲ. ತೋಳ್ಬಲದಿಂದಲೇ ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಸಾಧಿಸಿ ಬಿಡುತ್ತೇವೆ ಎಂಬ ದುರಹಂಕಾರ. ದೂರದ ಉತ್ತರ ಭಾರತದ ಮಾದರಿಯನ್ನು ಶಾಸಕ ವೇದವ್ಯಾಸ ಕಾಮತ್ ಇಲ್ಲಿ ಅನುಕರಿಸಿದ್ದಾರೆ. ತುಳುನಾಡಿಗೆ ಇದು ಹೊಸತು. ಇಂತಹ ನಡೆಗಳನ್ನು ಈಗಲೇ ಬಲವಾಗಿ ವಿರೋಧಿಸಬೇಕು. ಶಾಸಕ ವೇದವ್ಯಾಸರದ್ದು ನಿರಂಕುಶ ಗೂಂಡಾಗಿರಿ.
ಸಜ್ಜನರಾದ ಕುಲಪತಿ ಜಯರಾಜ ಅಮೀನ್ ಇದನ್ನೆಲ್ಲ ಸೌಮ್ಯ ಭಾಷೆಯಲ್ಲೇ ಸರಕಾರದ ಗಮನಕ್ಕೆ ತಂದಿದ್ದಾರೆ. ಶಾಸಕರು ಕುಲಪತಿಗಳು ವಿವರಿಸಿದ್ದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ದೌರ್ಜನ್ಯ ಎಸಗಿದ್ದಾರೆ. ಈಗ ಎಂದಿನಂತೆ ಧಾರ್ಮಿಕ ನಂಬಿಕೆಯನ್ನು ಮುಂದಿಟ್ಟು (ದುರಪಯೋಗ ಪಡಿಸಿ) ಹಿಂದೂ ವಿರೋಧಿ ಕುಲಪತಿ ವಿರುದ್ದ ಪ್ರತಿಭಟನಾ ಸಭೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ. ಈಗ ಎಲ್ಲೂ ಒಂದಾಗಿ ಶಾಸಕರ ಗೂಂಡಾಗಿರಿ, ಸಂವಿಧಾನ, ಕಾನೂನು ವಿರೋಧಿ ನಡೆಯನ್ನು ಪ್ರತಿಭಟಿಸಬೇಕು.
ಮುನೀರ್ ಕಾಟಿಪಲ್ಲ