ಜಿಲ್ಲಾ ಕಾಂಗ್ರೆಸ್ ನಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ.ಅಧ್ಯಕ್ಷರಿಗೆ ಗೇಟ್ ಪಾಸ್.. ರಮಾನಾಥ ರೈ ಗೆ ಪಟ್ಟ ಕಟ್ಟಲು ತಯಾರಿ.!

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಸರ್ಜರಿ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಮಹತ್ತರ ಬದಲಾವಣೆ ಸದ್ಯದಲ್ಲೇ ನಡೆಯುವ ಸಾಧ್ಯತೆ ನಿಶ್ಚಲವಾಗಿದೆ.

ಅವಧಿ ಮೀರಿದರೂ ಜಿಲ್ಲಾಧ್ಯಕ್ಷ ಕುರ್ಚಿಯಲ್ಲಿ ಅಂಟಿ ಕೂತಿರುವ ಹರೀಶ್ ಕುಮಾರ್ ರಿಗೆ ಈ ಬಾರಿ ಗೇಟ್ ಪಾಸ್ ನೀಡುವುದು ಪಕ್ಕಾ ಆಗಿದ್ದು, ಹರೀಶ್ ಕುಮಾರ್ ಅಧ್ಯಕ್ಷರಾದ ನಂತರ ಜಿಲ್ಲಾ ಕಾಂಗ್ರೆಸ್ ಗೆ ಸಡೇಸಾತ್ ಹಿಡಿದಿದೆ. ಬಿಲ್ಲವ ಕೋಟಾ ‌ಹೆಸರಿನಲ್ಲಿ ಜಿಲ್ಲಾಧ್ಯಕ್ಷ, ಎಂಎಲ್ಸಿ ಎರಡನ್ನು ಬಾಚಿಕೊಂಡು ಅಧಿಕಾರ ಅನುಭವಿಸುತ್ತಿದ್ದರೂ, ಬಿಲ್ಲವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವಲ್ಲಿ ವಿಫಲರಾಗಿದ್ದಾರೆ. ತನ್ನ ಸಂಬಂಧಿಕರೊಬ್ಬರಿಗೆ ಬೆಳ್ತಂಗಡಿ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟರೂ ನಿರ್ಣಾಯಕ ವಾಗಿರುವ ಬಿಲ್ಲವ ಮತಗಳನ್ನೆ ಟರ್ನ್ ಮಾಡುವಲ್ಲಿ ವಿಫಲರಾಗಿದ್ದಾರೆ. ಹರೀಶ್ ಕುಮಾರ್ ಜಿಲ್ಲಾಧ್ಯಕ್ಷರಾದ ನಂತರ ಕಾಂಗ್ರೆಸ್ ಶೂನ್ಯ ಸಾಧನೆಯಲ್ಲಿಯೇ ಇದೆಯೇ ಹೊರತು ಪಕ್ಷ ಬಲಪಡಿಸುವ ಯಾವುದೇ ಅಜೆಂಡಾ ಇಲ್ಲದೇ ಇರುವುದು ಅಧೋಗತಿಗೆ ತಳ್ಳಿದಂತಾಗಿದೆ.

ಬಿಜೆಪಿ ಸರಕಾರ ಇದ್ದಾಗ ಹಿಜಾಬ್, ಅನೈತಿಕ ಪೊಲೀಸ್ ಗಿರಿ ಸರಣಿಯಾಗಿ ನಡೆದರೂ ತುಟಿಪಿಟಕ್ಕೆನ್ನದ ಜಿಲ್ಲಾಧ್ಯಕ್ಷರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಗೆ ಕೌಂಟರ್ ಕೊಡುವ ಬದಲು ಮೌನಕ್ಕೆ ಶರಣಾಗಿರುವುದು ಇಂತಹ ಅಧ್ಯಕ್ಷರು ಕಾಂಗ್ರೆಸ್ ಪಕ್ಷಕ್ಕೆ ಬೇಕಾ ಅನ್ನುವ ಅಭಿಯಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಮಾಡಿದ್ದರು.

ಇನ್ನು ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಕಾರ್ಯಕ್ಕೆ ರಾಜ್ಯ ಕಾಂಗ್ರೆಸ್ ಮುಖಂಡರು ತೀರ್ಮಾನಿಸಿದ್ದು, ಜಿಲ್ಲಾ ಅಧ್ಯಕ್ಷರು, ಅಸಮರ್ಥ ಬ್ಲಾಕ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳಿಗೆ ಗೇಟ್ ಪಾಸ್ ನೀಡಲು ಪಕ್ಷ ನಿರ್ಧರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರೀಶ್ ಕುಮಾರ್ ರಿಗೆ ಕೊಕ್ ನೀಡಿದರೆ ಆ ಸ್ಥಾನಕ್ಕೆ ಸಮರ್ಥರು ಯಾರು ಅನ್ನುವ ಬಗ್ಗೆ ರಾಜ್ಯ ಕಾಂಗ್ರೆಸ್ ಪ್ರಮುಖರು ಸರ್ವೇ ನಡೆಸಿದ್ದು, ಆ ಸ್ಥಾನಕ್ಕೆ ಮಾಜಿ ಸಚಿವರಾದ ರಮಾನಾಥ ರೈ ಯವರೇ ಸೂಕ್ತ ಅನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಜಿಲ್ಲೆಯಲ್ಲಿ ಹಲವಾರು ಘಟಾನುಘಟಿ ನಾಯಕರು ಇದ್ದರೂ ಯಾರೂ ಪಕ್ಷ ಸಂಘಟನೆಗೆ ಒತ್ತು ನೀಡದೆ ರಾಜ್ಯ ನಾಯಕರ ಹಿಂದೆ ಸುತ್ತಾಡುವುದಕ್ಕೆ ಸೀಮಿತವಾಗಿದ್ದಾರೆ. ಇತ್ತ ಇತ್ತೀಚೆಗೆ ಜಿಲ್ಲೆಯ ಬಿಜೆಪಿ ಶಾಸಕರು ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿ ಮನೋ ಸ್ಥೈರ್ಯ ಕುಗ್ಗಿಸುವ ಪ್ರಯತ್ನಕ್ಕೆ ಮುಂದಾಗಿದ್ದರೂ ಕಾಂಗ್ರೆಸ್ ಸರ್ಕಾರ ಇದ್ದರೂ, ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ನಾಯಕರು ಇದ್ದರೂ ಯಾರೂ ಬಿಜೆಪಿ ವಿರುದ್ಧ ತುಟಿಪಿಟಕ್ಕೆನ್ನದೆ ಮೌನಕ್ಕೆ ಜಾರಿದ್ದರು. ಆದರೆ ರಮಾನಾಥ ರೈ ಪತ್ರಿಕಾಗೋಷ್ಠಿ ನಡೆಸಿ ಅಧಿಕಾರಿಗಳಿಗೆ ಧೈರ್ಯ ತುಂಬಿ ಬಿಜೆಪಿಗೆ ಟಾಂಗ್ ಕೊಡುವ ಮೂಲಕ ಏಕಾಂಗಿಯಾಗಿ ಅಬ್ಬರಿಸಿದ್ದರು.

ಸೋಷಿಯಲ್ ಮೀಡಿಯಾಗಳಲ್ಲಿ ಹವಾ ಸೃಷ್ಟಿಸಿದರೆ ಸಾಲದು..ನಾಯಕನಾದವ ಗ್ರೌಂಡ್ ರಿಯಾಲಿಟಿ ಬಗ್ಗೆ ತಿಳಿದುಕೊಂಡರೆ ಮಾತ್ರ ನಾಯಕನಾಗಬಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿ ಅನುಭವ ಇರುವ, ಜನರ ಕೈಗೆ ಅತ್ಯಂತ ಸುಲಭವಾಗಿ ಸಿಗುವ, ಜಿಲ್ಲೆಯ ಪ್ರಬಲ ಜಾತ್ಯತೀತ ನಾಯಕನಾಗಿರುವ ರಮಾನಾಥ ರೈ ಗೆ ಕಾಂಗ್ರೆಸ್ ಚುಕ್ಕಾಣಿ ದೊರೆತರೆ ಮತ್ತೆ ಜಿಲ್ಲೆಯಲ್ಲಿ ಗತಕಾಲದ ವೈಭವ ಮರಳುವುದಂತೂ ಖಂಡಿತ.

ವಿಧಾನಸಭಾ ಚುನಾವಣಾ ತರುವಾಯ ರಮಾನಾಥ ರೈ ಅಭಿಮಾನಿಗಳು ರೈ ಯವರಿಗೆ ಎಂಎಲ್ಸಿ ನೀಡುವಂತೆ ಬೆಂಗಳೂರಿಗೂ ನಿಯೋಗ ಕೊಂಡೊಯ್ದಿದ್ದರು. ರಾಜ್ಯ ನಾಯಕರಿಂದ ಸಕಾರಾತ್ಮಕ ಸ್ಪಂದನೆ ದೊರಕಿರಲಿಲ್ಲ. ಇತ್ತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ರಮಾನಾಥ ರೈ ಯವರನ್ನೇ ಅಭ್ಯರ್ಥಿ ಮಾಡುವ ಬಗ್ಗೆ ಒಂದು ನಿಯೋಗ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದರೂ ರಾಜ್ಯ ನಾಯಕರು ಹೊಸಬರಿಗೆ ಅವಕಾಶ ನೀಡುವ ಉತ್ಸುಕದಲ್ಲಿರುವುದರಿಂದ ರಮಾನಾಥ ರೈ ಯವರಿಗೆ ಪಕ್ಷ ಸಂಘಟಿಸಲು ಜಿಲ್ಲಾಧ್ಯಕ್ಷ ಹೊಣೆ ನೀಡಲು ಹೆಚ್ಚು ಕಾತುರದಲ್ಲಿದ್ದಾರೆ ಅನ್ನುವ ಮಾಹಿತಿ ಇದೀಗ ಹೊರಬಂದಿದೆ. ಈ ತಿಂಗಳಲ್ಲೇ ಜಿಲ್ಲಾಧ್ಯಕ್ಷ ಬದಲಾವಣೆ ನಿಶ್ಚಿತವಾಗಿದ್ದು, ರೈ ಯವರಿಗೆ ಪಟ್ಟ ಕಟ್ಟಲು ರಾಜ್ಯ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.