ಉನ್ನತ ಶಿಕ್ಷಣ ಇಲಾಖೆಗೆ ಖಾಯಂ ಸಹಾಯಕ ಪ್ರಾಧ್ಯಾಪಕರ ಅವಶ್ಯಕತೆಯಿದೆ. ಆದಷ್ಟು ತ್ವರಿತವಾಗಿ 2021ರಲ್ಲಿ ಆರಂಭಗೊಂಡ 1242ರ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್ ಅವರು ತಿಳಿಸಿದ್ದಾರೆ.
ಇಂದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ನಿಯೋಗ ಸಚಿವರ ನಿವಾಸದಲ್ಲಿ ಭೇಟಿಯಾಗಿ ಮನವಿ ನೀಡಿದ ಸಂದರ್ಭ ಈ ಮಾಹಿತಿ ನೀಡಿದ್ದಾರೆ.
ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯೆಗೆ ಸಂಬಂಧಿಸಿದಂತೆ ಇಟ್ಟಿರುವ ಬೇಡಿಕೆಗಳನ್ನು ಇಂದಿನ ಸಭೆಯಲ್ಲಿಟ್ಟು ಚರ್ಚಿಸಲಾಗುವುದು. ತಮಗೆಲ್ಲರಿಗೂ ಕೆಲವೇ ದಿನಗಳಲ್ಲಿ ನೇಮಕಾತಿ ಆದೇಶವನ್ನು ನೀಡುವಂತಹ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ನ್ಯಾಯಾಲಯದ ತೀರ್ಪು ಬರುತ್ತಿದ್ದಂತೆ ಎಲ್ಲಾ ಪ್ರಕ್ರಿಯೆಯೆಗಳನ್ನು ಏಕಕಾಲದಲ್ಲಿ ಆರಂಭಿಸಲಾಗುವುದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ 1242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ-2021ಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾದ ಪೊಲೀಸ್ ಇಲಾಖೆಯ ತನಿಖಾ ವರದಿಯನ್ನು ಪರಿಶೀಲಿಸಲು ಪ್ರತ್ಯೇಕ ತ್ರಿಸದಸ್ಯ ಸಮಿತಿ ರಚಿಸಿ ಆದೇಶಿಸಿದ್ದಕ್ಕೆ ನಿಯೋಗ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿತು. ತಮ್ಮ ಸರ್ಕಾರವು ನಮ್ಮಂತಹ ನಿರುದ್ಯೋಗಿ ಅಭ್ಯರ್ಥಿಗಳ ಭವಿಷ್ಯವನ್ನು ಮತ್ತು ಈ ನಾಡಿನ ಪದವಿ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುತ್ತದೆಂದು ನಂಬಿದ್ದೇವೆ ಎಂದು ಮನವಿ ಮಾಡಿತು. ಈ ಸಂದರ್ಭದಲ್ಲಿ ನಿಯೋಗದಲ್ಲಿ ನಾಗಲಕ್ಷ್ಮೀ, ಜಯಶಂಕರ್, ರಮೇಶ, ಅಶೋಕ, ಮತ್ತಿತರಿದ್ದರು.
ಸಚಿವರಿಗೆ ಸಲ್ಲಿಸಿದ ಬೇಡಿಕೆಗಳು:
- ದಿನಾಂಕ: 01-02-2023ರ ಕೆಕೆ/ಎಚ್.ಕೆ. ಮೀಸಲಾತಿ ಹಂಚಿಕೆಯ ಸುತ್ತೋಲೆ ಸಂಬಂಧ ಗೌರವಾನ್ವಿತ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುತ್ತಲೇ, ಮುಂದೆ ಯಾವುದೇ ಕಾನೂನಾತ್ಮಕ ತೊಡಕುಗಳು ಉಂಟಾಗದಂತೆ ದಯವಿಟ್ಟು ಸರ್ಕಾರದ ಕಡೆಯಿಂದಲೇ ಗೌರವಾನ್ವಿತ ಉಚ್ಛನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಬೇಕೆಂದು ವಿನಂತಿಸುತ್ತೇವೆ.
- ಗೌರವಾನ್ವಿತ ನ್ಯಾಯಾಲಯದಿಂದ ತೀರ್ಪು ಪ್ರಕಟವಾಗುತ್ತಿದ್ದಂತೆ, (ತೀರ್ಪಿನ ಪ್ರತಿ ತಲುಪುವ ಮೊದಲು) ಅಂತಿಮ ಆಯ್ಕೆ ಪಟ್ಟಿಯ ಗೆಜೆಟ್ ಪ್ರಕ್ರಿಯೆ ಆರಂಭಿಸುವಂತೆ ಇಲಾಖೆಗೆ ಆದೇಶಿಸಬೇಕೆಂದು ಕೇಳಿಕೊಳ್ಳುತ್ತೇವೆ.
- ತ್ರಿಸದಸ್ಯ ಸಮಿತಿಯಿಂದ ವರದಿಯು ಸಲ್ಲಿಕೆಯಾಗುವಷ್ಟರಲ್ಲಿ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಬಾಕಿ ಉಳಿದಿರುವ ಗೆಜೆಟ್, ಪೊಲೀಸ್, ಮೆಡಿಕಲ್ ವೆರಿಫಿಕೇಶನ್, ನೈಜತಾ ಪ್ರಮಾಣ ಪತ್ರದಂತಹ ಪ್ರಕ್ರಿಯೆಗಳು ಪೂರ್ಣವಾಗುವಂತೆ ಮಾಡಬೇಕು. ವರದಿ ಸಲ್ಲಿಕೆಯಾದ ನಂತರವೇ ನೇಮಕಾತಿ ಆದೇಶವನ್ನು ಕೊಡಲು ನಮಗೆ ಅಭ್ಯಂತರವಿಲ್ಲ.
- ಇಲಾಖೆಯೇ ನೇಮಿಸಿದ ಪ್ರಾಧ್ಯಾಪಕರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಾಖಲಾತಿ ಪರಿಶೀಲನಾ ಕಾರ್ಯವನ್ನು ಪೂರ್ಣಗೊಳಿಸಿದೆ. ಮತ್ತೊಮ್ಮೆ ವೆರಿಫಿಕೇಶ್ ನಿಂದ ಮತ್ತಷ್ಟು ನೇಮಕಾತಿ ವಿಳಂಬವಾಗುತ್ತದೆ. ಈಗಾಗಲೇ ಸಾಕಷ್ಟು ವಿಳಂಬವಾಗಿರುವ ಕಾರಣ, ಈ ಹಿಂದೆ 2017ನೇ ಬ್ಯಾಚ್ ರೀತಿಯಲ್ಲಿ ಅಂಕಪಟ್ಟಿಗಳನ್ನು ನೇರವಾಗಿ ದಾಖಲಾತಿಗಳ ನೈಜತೆ ಪರಿಶೀಲನೆಗೆ ಕಳುಹಿಸಿದಂತೆ, ಈಗಲೂ ಕ್ರಮವಹಿಸಬೇಕೆಂದು ವಿನಂತಿಸುತ್ತೇವೆ.
- ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಸಂಬಂಧ ಬಾಕಿ ಉಳಿದಿರುವ ಪೊಲೀಸ್, ಮೆಡಿಕಲ್ ವೆರಿಫಿಕೇಶನ್, ಸಿಂಧುತ್ವದಂತಹ ಎಲ್ಲಾ ಪ್ರಕ್ರಿಯೆಗಳನ್ನು ಏಕಕಾಲಕ್ಕೆ ನಡೆಸುವುದು.
- ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಎರಡು ವರ್ಷಗಳಿಗಿಂತಲೂ ಹೆಚ್ಚು ವಿಳಂಬವಾಗುತ್ತಿರುವುದರಿಂದಾಗಿ ಅನೇಕ ಅಭ್ಯರ್ಥಿಗಳು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಕೆಲವರು ಗೊಂದಲ, ಚಿಂತೆಯಲ್ಲೇ ಆಸ್ಪತ್ರೆ ಸೇರಿ, ಚಿಕಿತ್ಸೆ ಪಡೆದಿದ್ದಾರೆ. ಜಿಪಿಎಸ್‌ಟಿಆರ್ ಶಿಕ್ಷಕರ ನೇಮಕಾತಿಯ ವಿಳಂಬದಿಂದಾಗಿ ಕೆಲವು ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಂತೆ ನಮ್ಮ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳು ಆ ಹಾದಿಯನ್ನು ಹಿಡಿಯದಂತೆ ನೇಮಕಾತಿಯನ್ನು ಇಂತಿಷ್ಟು ದಿನಗಳಲ್ಲಿ ಮುಗಿಸಿಕೊಡಲಾಗುವುದೆಂದು ತಾವುಗಳು ಸೂಚಿಸಬೇಕೆಂದು ಕೈಮುಗಿದು ಕೇಳಿಕೊಳ್ಳುತ್ತೇವೆ.