ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸುತ್ತರಾ ಬಿಜೆಪಿ ಮಾಜಿ ಶಾಸಕ.!

ಕರಾವಳಿ

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಅಸಮಾಧಾನಗಳು, ನಾಯಕತ್ವದ ಕೊರತೆಗಳು ಎದ್ದು ಕಾಣುತ್ತಿರುವ ಹೊತ್ತಿನಲ್ಲೇ ಕಮಲ ಪಾಳಯಕ್ಕೆ ಕರಾವಳಿ ಭಾಗದಲ್ಲಿ ದೊಡ್ಡ ಹೊಡೆತ ಬಿದ್ದಿದೆ. ಕರಾವಳಿಯ ಪ್ರಭಾವಿ ನಾಯಕ, ಮಾಜಿ ಬಿಜೆಪಿ ಶಾಸಕ ಸುಕುಮಾರ್ ಶೆಟ್ಟಿ ಅವರು ಕಾಂಗ್ರೆಸ್ ಸೇರ್ಪಡೆ ಆಗುತ್ತಿರುವುದು ಬಹುತೇಕ ಕನ್ಫರ್ಮ್ ಆಗಿದೆ.

ಈ ಹಿಂದೆ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದ ಬಿಎಂ ಸುಕುಮಾರ್ ಶೆಟ್ಟಿ ಅವರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿನ್ನೆಲೆ ಇದೇ ಅಸಮಾಧಾನದಿಂದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಸ್ವತಃ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಿಎಮ್ ಸುಕುಮಾರ್ ಶೆಟ್ಟಿ ಅವರೇ ಸ್ಪಷ್ಟನೆ ನೀಡಿದ್ದು, ಬೆಳೆಯುವರನ್ನು ಬಿಜೆಪಿ ಪಕ್ಷ ಬಿಡುವುದಿಲ್ಲ. ಕಾಲೆಳೆದು ಮಲಗಿಸುವ ಕೆಲಸ ಬಿಜೆಪಿಗೆ ಪರಿಪಾಠವಾಗಿದೆ. ಅದರಂತೆ ನನಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೀಟು ಕೊಡದೆ ಅನ್ಯಾಯ ಮಾಡಿದ್ದಾರೆ. ಇದರಿಂದ ನನಗೆ ಮಾನಸಿಕವಾಗಿ ಬಹಳಷ್ಟು ನೋವಾಗಿದೆ ಎಂದು ಬೇಸರ ಹೊರ ಹಾಕಿದ್ದಾರೆ.

ಅಲ್ಲದೇ, ಕೆಲವು ನಾಯಕರು ತನ್ನನ್ನ ಕಾಂಗ್ರೆಸ್ ಸೇರಲು ಹೇಳುತ್ತಿದ್ದರು. ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯ ಇಲ್ಲ ಎಂದು ಕಾಂಗ್ರೆಸ್ ಸೇರುವ ಧೃಡ ನಿರ್ಧಾರ ಮಾಡಿದ್ದೇನೆ. ಕರಾವಳಿಯಲ್ಲಿ ಹಿಂದುತ್ವದ ಹಿನ್ನೆಲೆ ಹೊರತುಪಡಿಸಿ ಬೇರೆಲ್ಲ ಕಡೆ ಬಿಜೆಪಿ ಹೆಸರು ಹಾಳುಮಾಡಿಕೊಂಡಿದೆ. ಡಿಕೆ ಶಿವಕುಮಾರ್ ಬಹಳಷ್ಟು ಬಾರಿ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಈಗ ನಾನು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಪಕ್ಷಕ್ಕೆ ಸೇರುವ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದ್ದೇನೆ ಎಂದು ಹೇಳಿದರು.