ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಾಸ್ಟರ್ ಸ್ಟ್ರೋಕ್. 25 ಸಂಸದರ ಪೈಕಿ 12 ಮಂದಿ ಸಂಸದರಿಗೆ ಗೇಟ್ ಪಾಸ್.!

ರಾಜ್ಯ

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಹಾಲಿ 25 ಸಂಸದರ ಪೈಕಿ 12ಕ್ಕೂ ಹೆಚ್ಚು ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆಯಿದೆ. ಕೆಲವರಿಗೆ ವಯಸ್ಸು ಹಾಗೂ ಅನಾರೋಗ್ಯದ ಕಾರಣದಿಂದ ಟಿಕೆಟ್ ತಪ್ಪಿದರೆ, ಇನ್ನು ಕೆಲವರಿಗೆ ಪಕ್ಷದ ಸಂಘಟನೆ ಮಾಡದೇ ಇರುವುದು ಮುಖ್ಯ ಕಾರಣ ಎಂಬುವುದು ತಿಳಿದುಬಂದಿದೆ. ಜೊತೆಗೆ ಸತತವಾಗಿ ಮೂರ್ನಾಲ್ಕು ಬಾರಿ ಗೆದ್ದಿರುವುದ ರಿಂದ ಆಡಳಿತ ವಿರೋಧಿ ಅಲೆ ಕಾರಣಕ್ಕಾಗಿ ಟಿಕೆಟ್ ಕೈತಪ್ಪುವ ಸಾಧ್ಯತೆಗಳಿವೆ.

ದಾವಣಗೆರೆ ಸಂಸದರಾದ ಸಿದ್ದೇಶ್ವರ, ವಿಜಯಪುರ ಸಂಸದರಾದ ರಮೇಶ ಜಿಗಜಿಣಗಿ, ಬೆಂಗಳೂರು ಉತ್ತರ ಸಂಸದರಾದ ಡಿ.ವಿ. ಸದಾನಂದಗೌಡ, ಚಿಕ್ಕಬಳ್ಳಾಪುರ ಸಂಸದರಾದ ಬಿ.ಎನ್.ಬಚ್ಚೇಗೌಡ, ಉತ್ತರ ಕನ್ನಡ ಸಂಸದರಾದ ಅನಂತಕುಮಾರ್ ಹೆಗಡೆ ಅವರಿಗೆ ಕೊಕ್ ನೀಡುವ ಎಲ್ಲಾ ಸಾಧ್ಯತೆಗಳಿವೆ. ಇಲ್ಲಿ ಈ ಬಾರಿ ಹೊಸ ಮುಖಗಳು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಹಾವೇರಿ ಸಂಸದ ಶಿವಕುಮಾರ ಉದಾಸಿ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಿಸಿದ್ದಾರೆ.

ಬಚ್ಚೇಗೌಡ ಅವರ ಪುತ್ರ ಕಾಂಗ್ರೆಸ್ ಶಾಸಕರಾಗಿದ್ದಾರೆ. ಬಚ್ಚೇಗೌಡರ ವಯಸ್ಸು 80 ದಾಟಿದ್ದು, ಈ ಬಾರಿ ಸ್ಪರ್ಧೆ ಡೌಟ್. ತುಮಕೂರು ಸಂಸದ ಜಿ.ಎಸ್ ಬಸವರಾಜ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿದ್ದು, ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದಾರೆ.

ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ವಯೋ ಮಾನದ ಕಾರಣ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಸಂಗಣ್ಣ ಕರಡಿ ಅವರು ಟಿಕೆಟ್ ನೀಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ. ಉತ್ತರಕನ್ನಡದ ಸಂಸದ ಅನಂತಕುಮಾರ್ ಹೆಗಡೆ ಅವರೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರೂ ಸ್ಪರ್ಧಿಸುವ ಸಾಧ್ಯತೆ ಇಲ್ಲ. ಬಾಗಲಕೋಟೆಯ ಪಿ.ಸಿ. ಗದ್ದಿಗೌಡರ್ ಸ್ಪರ್ಧೆಯಿಂದ ದೂರ ಉಳಿಯುವ ಸಾಧ್ಯತೆಗಳೇ ಹೆಚ್ಚಿವೆ.