ಬಿಜೆಪಿಯ ಪ್ರಭಾವಿ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಬಿಜೆಪಿ ಪಕ್ಷದೊಂದಿಗೆ ಮುನಿಸಿಕೊಂಡಿದ್ದರಾ ಅನ್ನುವ ಅನುಮಾನ ಇದೀಗ ಎದ್ದಿದೆ. ಅವರ ಹೇಳಿಕೆ ಭಾರಿ ಕುತೂಹಲ ಮೂಡಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆಯಾದ ಬಳಿಕ ನನ್ನ ಮುಂದಿನ ನಿರ್ಧಾರ ತಿಳಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಡಿ.ವಿ ಸದಾನಂದ ಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ನನಗೆ ಎಲ್ಲವನ್ನು ನೀಡಿದೆ. ನಾನು ಪಕ್ಷಕ್ಕೆ ಏನು ನೀಡಬೇಕೆಂಬುದನ್ನು ನೋಡಬೇಕಿದೆ.
ನನ್ನ ಮುಂದಿನ ನಿರ್ಧಾರ ಏನು ಎಂದು ಈಗಲೇ ಹೇಳುವುದಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಆಗುತ್ತಿದ್ದಂತೆಯೇ ಪತ್ರಿಕಾಗೋಷ್ಠಿ ಕರೆದು ಹೇಳುತ್ತೇನೆ ಎಂದು ತಿಳಿಸಿದ್ದಾರೆ.
ನನಗೂ ಹಳೆ ಮೈಸೂರು ಸೇರಿ ರಾಜ್ಯಾದ್ಯಂತ ಹಿತೈಷಿಗಳು, ಅಭಿಮಾನಿಗಳು ಇದ್ದಾರೆ ಎಂದು ಭಾವಿಸುವೆ. ಪಕ್ಷದ ಹೊಸ ರಾಜ್ಯಾಧ್ಯಕ್ಷರ ನೇಮಕ ಆಗುತ್ತಿದ್ದಂತೆ ನನ್ನ ಅಭಿಪ್ರಾಯ ತಿಳಿಸುತ್ತೇನೆ. ಈಗಲೇ ನಿರ್ಧಾರ ಹೇಳಿ ಪಕ್ಷಕ್ಕೆ ಮುಜುಗರ ಉಂಟುಮಾಡುವುದಿಲ್ಲ. ಆ ನಿರ್ಧಾರ ಏನೆಂಬುದನ್ನು ಈಗಲೇ ಹೇಳಲಾರೆ ಎಂದು ತಿಳಿಸಿದ್ದಾರೆ.
ಸದಾನಂದ ಗೌಡ ಅವರು ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದೆಲ್ಲಾ ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿ ಡಿ.ವಿ ಸದಾನಂದ ಗೌಡ ರವರನ್ನು ಬಿಜೆಪಿ ಹೈಕಮಾಂಡ್ ನಿರ್ಲಕ್ಷಿಸುತ್ತಾ ಬಂದಿದೆ. ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಏನೂ ಆಗಬಹುದು ಎಂಬುದಕ್ಕೆ ಸಾಕ್ಷಿ ಆಗಿದೆ.