ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ಗಂಗಾಪುರದಲ್ಲಿ ಮಹಿಳೆಯೊಬ್ಬರನ್ನು ಅಪಹರಿಸಿದ ಮೂವರು ಕಾಮುಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಕಾಮುಕರಿಂದ ತಪ್ಪಿಸಿಕೊಳ್ಳಲು ಸಂತ್ರಸ್ತೆ ಬೆತ್ತಲೆಯಾಗಿ ಓಡಿಹೋದಳು. ರಸ್ತೆಯಲ್ಲಿ ವಿವಸ್ತ್ರಳಾಗಿ ಹೋಗುತ್ತಿದ್ದಾಗ, ಸಹಾಯ ಕೋರಿದರೂ ಆಕೆಯ ಮೊರೆಗೆ ಯಾರೂ ಕಿವಿಗೊಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
“ರಾತ್ರಿ ಊಟ ಮುಗಿಸಿ ವಾಯು ವಿಹಾರ ಮಾಡುತ್ತಿದ್ದ ಮಹಿಳೆಯರನ್ನು ಮೂವರು ಮದ್ಯವ್ಯಸನಿಗಳು ಅಪಹರಿಸಿ, ಅತ್ಯಾಚಾರ ಎಸಗಿದರು. ದುರುಳರ ಹಿಡಿತದಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಆಕೆ ಬಟ್ಟೆಯನ್ನು ತೆಗೆದುಕೊಳ್ಳದೆ ಸ್ಥಳದಿಂದ ಬೆತ್ತಲಾಗಿ ಓಡಿ ಬಂದಳು. ಸುಮಾರು ಒಂದು ತಾಸಿನ ನಂತರ ಕೆಲವರು ಆಕೆಗೆ ಬಟ್ಟೆ ಕೊಟ್ಟು, ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದರು. ಆರೋಪಿಗಳ ಪೈಕಿ ಓರ್ವನ ಬಗ್ಗೆ ಗೊತ್ತು ಎಂದು ಸಂತ್ರಸ್ತೆ ಹೇಳಿದ್ದು, ಪೊಲೀಸರು ಮೂವರು ಕಾಮುಕರ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದ್ದಾರೆ” ಎಂದು ಡಿವೈಎಸ್ಪಿ ಲಾಬುರಾಂ ಬಿಷ್ಣೋಯಿ ಹೇಳಿದ್ದಾರೆ. ಭಿಲ್ವಾರಾ ಜಿಲ್ಲೆಯಲ್ಲೇ ಅಗಸ್ಟ್ 3 ರಂದು 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು. ಇದಾಗಿ ತಿಂಗಳ ನಂತರ ಮತ್ತೊಂದು ಅತ್ಯಾಚಾರದ ಘಟನೆ ನಡೆದಿದೆ.